Site icon Vistara News

Sexual harrassment | ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ಕಾಫಿ ತೋಟದ ಮಾಲೀಕ ಸಹಿತ ನಾಲ್ವರು ಅರೆಸ್ಟ್‌

harrassment

ಹಾಸನ: ೧೩ ವರ್ಷದ ಬಾಲಕಿಯನ್ನು ಪುಸಲಾಯಿಸಿ, ಬಲವಂತದಿಂದ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗುವುದಕ್ಕೆ (Sexual harrassment) ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತೋಟದ ಮಾಲೀಕ ಮತ್ತು ಆತನ ಮೂವರು ಗೆಳೆಯರನ್ನು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ತೋಟವೊಂದರಲ್ಲಿ ಬಾಲಕಿ ಮೇಲೆ ಈ ಪೈಶಾಚಿಕ ಅತ್ಯಾಚಾರ ನಡೆದಿದೆ. ಕಾಫಿ ತೋಟಕ್ಕೆ ಕೂಲಿಗೆಂದು ಬಂದಿದ್ದ ಕುಟುಂಬವೊಂದರ ಬಡತನ, ಅಸಹಾಯಕತೆಯನ್ನು ಬಳಸಿಕೊಂಡು ಮತ್ತು ಯಾರೂ ಕೇಳುವುದಿಲ್ಲ ಎಂಬ ಧಿಮಾಕಿನಿಂದ ತೋಟದ ಮಾಲೀಕನೇ ಲೈಂಗಿಕ ದೌರ್ಜನ್ಯ ಎಸಗಿದ್ದ.

ಬಾಲಕಿ ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಾಗ ಈ ಪ್ರಕರಣ ಬಯಲಾಗಿದೆ. ಬಾಲಕಿ ಗರ್ಭಿಣಿ ಎಂದು ವೈದ್ಯರು ತಿಳಿಸಿದಾಗ ಕಾರ್ಮಿಕ ಕುಟುಂಬಕ್ಕೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಬಾಲಕಿಯನ್ನು ಕೂರಿಸಿ ವಿಚಾರಿಸಿದಾಗ ಆಶ್ರಯ ಕೊಟ್ಟ ತೋಟದ ಮಾಲೀಕನೇ ಈ ಕೃತ್ಯದ ಸೂತ್ರಧಾರ ಎನ್ನುವುದು ತಿಳಿಯಿತು. ಮಾತ್ರವಲ್ಲ ಆತನ ಮೂವರು ಗೆಳೆಯರು ಕೂಡಾ ಪುಟ್ಟ ಬಾಲಕಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಎಫ್.ಐ.ಆರ್. ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ನಾಲ್ವರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಮಾಲೀಕ ಮತ್ತು ಆತನ ಗೆಳೆಯರಿಗೆ ಉರುಳು ಬಿಗಿಯಲಿದೆ.

ಸಂತ್ರಸ್ಥ ಬಾಲಕಿ ಗೆ ಮಕ್ಕಳ ಕಲ್ಯಾಣ ಸಮಿತಿ ಆಶ್ರಯ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಿಡಬ್ಲು ಸಿ ನೇತೃತ್ವದಲ್ಲಿ ದೂರು ನೀಡಲಾಗಿದೆ.

ಈ ನಡುವೆ, ನಾಲ್ವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ, ಆಕೆಯ ಗರ್ಭಧಾರಣೆಗೆ ಕಾರಣ ಯಾರು ಎನ್ನುವ ವಿಚಾರದಲ್ಲಿ ಪ್ರತ್ಯೇಕ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಬೇಕಾಗಿದೆ. ಬಾಲಕಿಯ ಗರ್ಭಪಾತಕ್ಕೆ ಏನಾದರೂ ಕ್ರಮಗಳನ್ನು ಕೈಗೊಳ್ಳುತ್ತಾರಾ ಎನ್ನುವುದು ಕೂಡಾ ಮುಂದಿನ ದಿನಗಳಲ್ಲಿ ಸ್ಷಷ್ಟವಾಗಲಿದೆ.

ಇದನ್ನೂ ಓದಿ | Sexual harrassment | 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿ ಆದ ನಂತರ ಬೆಳಕಿಗೆ

Exit mobile version