Site icon Vistara News

Murugha Seer | ಬಟ್ಟೆಯಲ್ಲೇ ಹೀಗೆ ಕಾಣುತ್ತೀಯಾ, ಬಟ್ಟೆ ಬಿಚ್ಚಿದರೆ ಹೇಗೆ ಎಂದು ಕೇಳುತ್ತಿದ್ದ ಮುರುಘಾಶ್ರೀ: ಸಂತ್ರಸ್ತೆಯರ ಹೇಳಿಕೆ

ಮುರುಘಾಶ್ರೀ Sexual assault POCSO CASE ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲು

ಚಿತ್ರದುರ್ಗ: “ಪ್ರತಿ ಭಾನುವಾರ ಟ್ಯೂಷನ್‌ ಮಾಡುತ್ತಿದ್ದ ಮುರುಘಾ ಮಠದ ಮುರುಘಾ ಶರಣರು (Murugha Seer) ಒಂದು ದಿನ ಅವರ ಕೋಣೆಗೆ ಕರೆಸಿಕೊಂಡಿದ್ದರು. ಆಗ ಶ್ರೀಗಳು ಕುಡಿಯುತ್ತಿದ್ದರು, ಬಾರೇ ಎಂದು ಕೆಟ್ಟದಾಗಿ ಮಾತನಾಡಿ ಬೈದಿದ್ದರು. ಯಾಕಪ್ಪಾಜಿ ಅಂದು ಎಷ್ಟು ಚಂದ ಮಾತನಾಡಿದಿರಿ ಎಂದರೆ ಉತ್ತರಿಸಲಿಲ್ಲ. ಬಳಿಕ ಮಾತನಾಡಿದ ಅವರು ಬಟ್ಟೆಯಲ್ಲೇ ಹೀಗೆ ಕಾಣುತ್ತೀಯಾ, ಬಟ್ಟೆ ಬಿಚ್ಚಿದರೆ ಹೇಗೆ ಎಂದು ಕೇಳಿದರು. ಅಲ್ಲದೆ, ಖಾಸಗಿ ಅಂಗಕ್ಕೆ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದರು”. ಇದು ಮುರುಘಾ ಶ್ರೀ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತ ಬಾಲಕಿಯರು ಚಿತ್ರದುರ್ಗ 1ನೇ ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ಎದುರು ಸಿಆರ್‌ಪಿಸಿ 164 ಅಡಿ ನೀಡಿರುವ ಹೇಳಿಕೆಯಾಗಿದೆ.

೨೦೨೨ರ ಆಗಸ್ಟ್‌ 30ರಂದು ಸಂತ್ರಸ್ತ ಬಾಲಕಿಯರು ನ್ಯಾಯಾಧೀಶರ ಎದುರು ಹೇಳಿಕೆಯನ್ನು ದಾಖಲಿಸಿದ್ದರು. ಈ ವೇಳೆ ಮುರುಘಾಶ್ರೀಗಳು ತಮ್ಮ ಜತೆ ಹೇಗೆಲ್ಲ ನಡೆದುಕೊಳ್ಳುತ್ತಿದ್ದರು, ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದರು. ಈ ಹೇಳಿಕೆ ಪ್ರತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ಸಂತ್ರಸ್ತೆಯರ ಹೇಳಿಕೆಯಲ್ಲೇನಿದೆ?
ಮುರುಘಾ ಮಠದ ಮುರುಘಾ ಶರಣರು ಪ್ರತಿ ಭಾನುವಾರ ಟ್ಯೂಷನ್‌ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಅವರ ಬಳಿಗೆ ವಾರ್ಡನ್ ರಶ್ಮಿ ಕಳುಹಿಸುತ್ತಿದ್ದರು. ಮೊದಲ ಸಲ ಚೆನ್ನಾಗಿ ಮಾತನಾಡಿಸಿದರು, ಡ್ರೈಫ್ರೂಟ್ಸ್ ನೀಡಿದ್ದರು. ನಾನು ನಿಮ್ಮ ಅಪ್ಪನಂತೆ, ಏನು ಬೇಕಾದರೂ ಕೇಳು ಎಂದಿದ್ದರು. ನಿಮ್ಮ ಕುಟುಂಬಕ್ಕೆ ಸಹಾಯ ಬೇಕಿದ್ದರೆ ಕೇಳು ಎಂದಿದ್ದರು. ಮತ್ತೊಂದು ದಿನ ಹೋದಾಗ ಮುರುಘಾಶ್ರೀ ಡ್ರಿಂಕ್ಸ್ ಮಾಡುತ್ತಿದ್ದರು. ಬಾರೇ ಎಂದು ಕೆಟ್ಟದಾಗಿ ಮಾತನಾಡಿ ಬೈದಿದ್ದರು. ಯಾಕಪ್ಪಾಜಿ ಅಂದು ಎಷ್ಟು ಚಂದ ಮಾತನಾಡಿದಿರಿ ಎಂದರೆ ಉತ್ತರಿಸಲಿಲ್ಲ. ಬಳಿಕ ಮಾತನಾಡಿದ ಅವರು ಬಟ್ಟೆಯಲ್ಲೇ ಹೀಗೆ ಕಾಣುತ್ತೀಯಾ, ಬಟ್ಟೆ ಬಿಚ್ಚಿದರೆ ಹೇಗೆ ಎಂದು ಕೇಳಿದರು. ಅಲ್ಲದೆ, ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದರು.

ಇದನ್ನೂ ಓದಿ | Murugha Seer | ಮುರುಘಾ ಶರಣರಿಂದ ಹತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಒಡನಾಡಿ ಪರಶುರಾಮ್‌ ಆರೋಪ

ಬಟ್ಟೆ ಬಿಚ್ಚಿ ಬಾತ್ ರೂಮಿಗೆ ಕರೆದು ಬೆನ್ನುಜ್ಜಲು ಹೇಳಿದರು. ನಾವು ಬಡವರು ಬಿಡಿ ಎಂದು ಕಾಲಿಗೆ ಬಿದ್ದರೂ ಬಿಡಲಿಲ್ಲ. ಟ್ಯೂಷನ್‌ಗೆ ಹೋಗದಿದ್ದರೆ ವಾರ್ಡನ್ ರಶ್ಮಿ ಹೊಡೆಯುತ್ತಿದ್ದರು. ಹಾಸ್ಟೆಲ್ ಬಿಟ್ಟು ತೊಲಗೆಂದು ಬೈಯುತ್ತಿದ್ದರು. ನನಗೆ ಯಾರೂ ಇಲ್ಲ ಅಕ್ಕ ಅಂದಿದ್ದಕ್ಕೆ ಸಾಯಿ ಎಂದಿದ್ದರು. ನನಗೆ ಹಾರ್ಟ್ ಪ್ರಾಬ್ಲಂ ಇದೆ ಎಂಬ ಕಾರಣಕ್ಕೆ ಗೇಲಿ ಮಾಡುತ್ತಿದ್ದರು. ಮಠದ ಹಾಸ್ಟೆಲ್‌ನಲ್ಲಿರುವ 115 ಮಕ್ಕಳನ್ನು ಕಾಪಾಡಿ, ಅವರೆಲ್ಲರನ್ನೂ ಬೆದರಿಸಿ ರಶ್ಮಿ ಸಹಿ ಹಾಕಿಸಿಕೊಂಡಿದ್ದಾರೆ. ವಾರ್ಡನ್ ರಶ್ಮಿ ಅಮ್ಮನಂತೆ ನೋಡಿಕೊಳ್ಳುತ್ತಾರೆಂದು ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಂತ್ರಸ್ತೆಯೊಬ್ಬಳು ನ್ಯಾಯಾಧೀಶರ ಎದುರು ನೀಡಿದ ಹೇಳಿಕೆಯಾಗಿದೆ.

ಮತ್ತೊಬ್ಬ ಸಂತ್ರಸ್ತೆಯ ಹೇಳಿಕೆ
ಹಾಸ್ಟೆಲ್‌ನಲ್ಲಿದ್ದ ಒಂದು ಹುಡುಗಿ ಕೈಗೆ ರಶ್ಮಿ ಹೊಡೆದಿದ್ದು ರಕ್ತ ಸೋರಿತ್ತು. ನೀವು ಅನಾಥ ಮಕ್ಕಳಿಗೆ ಇಲ್ಲಿ ಊಟ ಸಿಗುತ್ತಿರುವುದೇ ಹೆಚ್ಚು. ರಕ್ತ ಬಂದರೆ ನಾನೇನು ಮಾಡಲಿ ಎಂದು ರಶ್ಮಿ ಹೇಳಿದ್ದರು. ಯಾರಾದರೂ ತಪ್ಪು ಮಾಡಿದರೆ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಆಕೆಯ ಜತೆಗೆ ಇರುವವರನ್ನು ಬಿಟ್ಟು ಬೇರೆಯವರಿಗೆ ಹೊಡೆಯುತ್ತಿದ್ದರು. ಮುರುಘಾಶ್ರೀ ಬಳಿಗೆ ಅವರು ನಮ್ಮನ್ನು ಕಳುಹಿಸುತ್ತಿದ್ದರು. ಅನಾರೋಗ್ಯವಾಗಿದ್ದ ಹಣ್ಣು ಕೊಡುತ್ತಾರೆಂದು ಹೇಳಿ ಕಳುಹಿಸುತ್ತಿದ್ದರು. ಮಠದ ಮುಂಭಾಗ ಸಿಸಿ ಕ್ಯಾಮರಾ ಇದೆ ಎಂದು ಹಿಂಬಾಗಿಲಿನಿಂದ ಕಳಿಸಿದ್ದರು. ನಿಮ್ಮ ತಂದೆಗೆ ಹುಷಾರಿಲ್ಲ ಅಲ್ವಾ, ನಾನು ಹೆಲ್ಪ್ ಮಾಡುತ್ತೇನೆ ಎಂದಿದ್ದರು. ಮುರುಘಾಶ್ರೀ ನೀಡಿದ ಹಣ್ಣು ತಿಂದ ಬಳಿಕ ತಲೆಸುತ್ತು ಬಂತು. ಎಚ್ಚರವಾದಾಗ ನನ್ನನ್ನು ಬೆತ್ತಲೆಗೊಳಿಸಿ ಮುರುಘಾಶ್ರೀ ಮದ್ಯ ಸೇವನೆ ಮಾಡುತ್ತಿದ್ದರು. ಯಾಕೆ ಹೀಗೆ ಮಾಡುತ್ತೀರೆಂದು ಕೇಳಿದ್ದಕ್ಕೆ ಬೈದು, ಹೊಡೆದರು.

ಯಾಕೆ ಅವರ ಬಳಿಗೆ ನನ್ನನ್ನು ಕಳುಹಿಸಿದಿರಿ ಎಂದು ಕೇಳಿದ್ದಕ್ಕೆ ವಾರ್ಡನ್ ರಶ್ಮಿ ಹೊಡೆದರು. ಹಾಸ್ಟೆಲ್‌ನಲ್ಲಿರುವ 113 ಮಕ್ಕಳಿಗೂ ಇದೇ ರೀತಿ‌ ಮಾಡುತ್ತಿದ್ದರು. 3-4 ತಿಂಗಳ ನಂತರ ಮತ್ತೆ ಕರೆದು ಚಾಕೊಲೆಟ್ ತಿನ್ನಿಸಿದರು. ತಲೆ ತಿರುಗಿ ಬಿದ್ದಾಗ ಮುರುಘಾಶ್ರಿ ಕುಡಿಯುತ್ತಿದ್ದರು. ನೀವು ತಂದೆ ಸಮಾನರು, ಹೀಗೆ ಮಾಡಬಾರದೆಂದು ಬೈದೆನು. ಮತ್ತೆ ಈ ರೀತಿ ಮಾಡಿದರೆ ದೂರು ಕೊಡುತ್ತೇನೆಂದು ಹೇಳಿದೆನು. ನನ್ನ ಕತ್ತು ಹಿಡಿದು ಕೊಠಡಿಯೊಳಗೆ ಕರೆದೊಯ್ದರು. ಬಾತ್ ರೂಮಿಗೆ ಹೋಗಿ ಬೆನ್ನು ಉಜ್ಜು ಎಂದು ಹಿಂಸೆ ನೀಡಿದರು.

ಇದನ್ನೂ ಓದಿ | Murugha Seer | ಪೋಷಕರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನ; ಸ್ಟ್ಯಾನ್ಲಿ ನೀಡಿದ ದೂರಿನಲ್ಲೇನಿದೆ?

ಹಾಸ್ಟೆಲ್‌ಗೆ ಹೋದಾಗ ವಾರ್ಡನ್ ರಶ್ಮಿ ಹೊಡೆದರು. ನಾನು ಮತ್ತು ಗೆಳತಿ ಹಾಸ್ಟೆಲ್‌ನಿಂದ ಹೊರಗಡೆ ಬಂದೆವು. ಮುರುಘಾಶ್ರೀ ಚಾಕು ಹಿಡಿದು ಹೆದರಿಸಿದ್ದರು, ನಮ್ಮ ಕಡೆ ಸಿಎಂ ಇದ್ದಾರೆಂದಿದ್ದರು. ನಿಮಗೆ ಏನೂ ಮಾಡಲು ಆಗಲ್ಲ ಎಂದು ಹೆದರಿಸಿದ್ದರು. ಹೊರಗಡೆ ಬಾಯಿ ಬಿಟ್ಟರೆ ನಿಮ್ಮ ಅಪ್ಪ-ಅಮ್ಮ ಇಬ್ಬರನ್ನೂ ಸಾಯಿಸುತ್ತೇನೆಂದಿದ್ದರು. ಹಿಂದೆ ಒಬ್ಬಳು ಬಾಲಕಿ ಸಾವಿಗೀಡಾದ ವಿಷಯ ಹೇಳಿ ಹೆದರಿಸಿದ್ದರು.

ಮುರುಘಾಶ್ರೀಗೆ ವಕೀಲ ಗಂಗಾಧರ, ವಾರ್ಡನ್ ರಶ್ಮಿ, ಮಠದ ಉತ್ತರಾಧಿಕಾರಿ (ಬಸವಾದಿತ್ಯ -17), ಮಠದ ಕಾರ್ಯದರ್ಶಿ ಪರಮಶಿವಯ್ಯ ಸಪೋರ್ಟ್ ಮಾಡುತ್ತಿದ್ದರು. ನಾವಿಬ್ಬರೂ ಹಾಸ್ಟೆಲ್‌ನಿಂದ ಬೆಂಗಳೂರಿಗೆ ತೆರಳಿದೆವು. ಬಳಿಕ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್, ಪತ್ನಿ ಸೌಭಾಗ್ಯ ನಮ್ಮನ್ನು ಕಾಟನ್ ಪೇಟೆ ಠಾಣೆಯಿಂದ ಕರೆದುಕೊಂಡು ಬಂದರು. ಕೆಲ ದಿನಗಳ ಕಾಲ ಸೌಭಾಗ್ಯ ನಿವಾಸ ಮತ್ತೆ ಕೆಲವು ದಿನ ನಮ್ಮ ಮನೆಗಳಲ್ಲಿ ಇದ್ದೆವು. ಆಗಸ್ಟ್‌ 26ರಂದು ಮುರುಘಾಶ್ರೀ ಸೇರಿ ಐವರ ವಿರುದ್ಧ ದೂರು ಸಲ್ಲಿಸಿದೆವು.

ನನಗೆ ಮುರುಘಾಶ್ರೀ ಮಗಳಂತೆ ನೋಡಿಕೊಂಡಿದ್ದರು. ನಾನು ಮುರುಘಾಶ್ರೀಗಳನ್ನು ತಂದೆಯಂತೆ ಕಂಡಿದ್ದೆನು. ವಾರ್ಡನ್ ರಶ್ಮಿ ಮುರುಘಾಶ್ರೀ ರೂಮಿನಿಂದ ದುಡ್ಡು ಕದಿಯಲು ಹೇಳುತ್ತಿದ್ದರು. ಕದ್ದು ತರದಿದ್ದರೆ ವಾರ್ಡನ್ ರಶ್ಮಿ ಹೊಡೆಯುತ್ತಿದ್ದರು. ವಾರಕ್ಕೊಮ್ಮೆ ಮುರುಘಾಶ್ರೀ ರೂಮಿಗೆ ಹೋಗಬೇಕಿತ್ತು. ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ತೊಡೆ ಮೇಲೆ ಕೂರಿಸಿಕೊಂಡು ನನಗೆ ‘ಡೊಣಗಾ’ ಎಂದು ಕರೆಯುತ್ತಿದ್ದರು ಎಂದು ಮತ್ತೊಬ್ಬ ಸಂತ್ರಸ್ತ ಬಾಲಕಿ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ | Uniform civil code | ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ ಜಾರಿಗೆ ಚಿಂತನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

Exit mobile version