ನವ ದೆಹಲಿ: ಬೆಳಗಾವಿ ಗಡಿ ವಿವಾದಕ್ಕೆ (Border Dispute) ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಮನ್ವಯ ಸಭೆ ಬುಧವಾರ ಸಂಜೆ ದಿಲ್ಲಿಯಲ್ಲಿ ನಡೆಯಿತು. ಗಡಿ ವಿವಾದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ತಟಸ್ಥ ನಿಲುವಿಗೆ ಬದ್ಧವಾಗಿರಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಅವರು ಈ ನಿರ್ಧಾರಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿದರು.
”ರಾಜ್ಯಗಳ ನಡುವಿನ ಗಡಿ ವಿವಾದವು ರಸ್ತೆಯಲ್ಲಿ ನಿಂತು ಬಗೆಹರಿಸಿಕೊಳ್ಳಲಾಗದು. ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ಈ ವಿಷಯ ಇತ್ಯರ್ಥವಾಗುವವರೆಗೂ ಉಭಯ ರಾಜ್ಯಗಳು ತಾಳ್ಮೆಯಿಂದ ಇರಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಮನ್ವಯ ಸಮಿತಿಯೊಂದನ್ನು ರಚಿಸಲಾಗುವುದು. ಉಭಯ ರಾಜ್ಯಗಳ ತಲಾ ಮೂವರು ಸಚಿವರು ಈ ಸಮಿತಿಯಲ್ಲಿ ಇರಲಿದ್ದಾರೆ,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆಯ ಬಳಿಕ ತಿಳಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಳ್ಳುವ ತನಕ ಎರಡೂ ರಾಜ್ಯಗಳು ಗಡಿ ವಿಚಾರವನ್ನು ಪ್ರಸ್ತಾಪಿಸಬಾರದು. ಗಡಿ ವಿವಾದದ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ನಾಗರಿಕರಿಗೆ, ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಜತೆಗೆ ಶಾಂತಿ ಕಾಪಾಡಲು ಎಚ್ಚರಿಕೆ ವಹಿಸಲು ಹೇಳಲಾಗಿದೆ ಎಂದು ಅಮಿತ್ ಶಾ ಅವರು ಹೇಳಿದರು.
ಫೇಕ್ ಟ್ವೀಟ್ ಮಾಡಿದವರ ಬಹಿರಂಗ
ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಜಗಳ ಹುಟ್ಟುಹಾಕಲು ನಾಯಕರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ಪ್ರಚೋದನಕಾರಿ ಹೇಳಿಕೆ ನೀಡಲಾಗಿದೆ. ಈ ರೀತಿ ನಕಲಿ ಟ್ವೀಟ್‌ಗಳ ಬಗ್ಗೆ ಪೊಲೀಸ್ ದೂರು ದಾಖಲಿಸಿ ಅಂಥವರ ಹೆಸರನ್ನು ಬಹಿರಂಗಗೊಳಿಸಲಾಗುತ್ತದೆ ಎಂದು ಅಮಿತ್ ಶಾ ಹೇಳಿದರು.
ದಿಲ್ಲಿಯಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಗೋವಿಂದ ಕಾರಜೋಳ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಜತೆ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಪಾಲ್ಗೊಂಡಿದ್ದರು. ಸಭೆಗೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಸಚಿವ ಅಮಿತ್ ಶಾ ಅವರನ್ನು ಸನ್ಮಾನಿಸಿದರು.
ಸಮಿತಿಯಲ್ಲಿ ಕರ್ನಾಟಕ-ಮಹಾರಾಷ್ಟ್ರದ ತಲಾ ಮೂವರು ಸಚಿವರು: ಸಿಎಂ ಬೊಮ್ಮಾಯಿ
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಮರಸ್ಯ ನಿರ್ವಹಣೆಗೆ ತಲಾ ಮೂರು ಸಚಿವರನ್ನು ನೇಮಿಸಿಕೊಳ್ಳಲು ಸೂಚಿಸಿದ್ದಾರೆ. ಗಡಿ ವಿವಾದದ ವಿಷಯಗಳನ್ನು ಬಗ್ಗೆ ಆದಷ್ಟು ಬೇಗನೆ ಚರ್ಚಿಸಿ ಬಗೆಹರಿಸಿಕೊಳ್ಳಲು ಕೇಂದ್ರ ಗೃಹ ಸಚಿವರು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಕೇಂದ್ರ ಗೃಹ ಸಚಿವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು, ಸಭೆ ನಡೆಸಲಾಯಿತು. ಗಡಿವಿಚಾರದ ಬಗ್ಗೆ ಮಹಾರಾಷ್ಟ್ರದವರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ ಬಗ್ಗೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚಿಸಲಾಗಿದೆ. ಎರಡೂ ಪಕ್ಷಗಳ ವಿಚಾರಗಳನ್ನು ಚರ್ಚಿಸಿದ ನಂತರ ಕೇಂದ್ರ ಗೃಹ ಸಚಿವರು ಕೆಲವೊಂದು ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.
ಗಡಿವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ
ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇದ್ದು, ಜನರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಗಡಿ ವಿಚಾರದ ಬಗ್ಗೆ ಸಂವಿಧಾನಬದ್ಧವಾಗಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಾಗಲಿ, ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲೀ, ವ್ಯಾಪಾರ ವಹಿವಾಟುಗಳಿಗೆ ತೊಂದರೆ ಕೊಡುವುದಾಗಲೀ ಮಾಡಬಾರದು. ಎರಡು ರಾಜ್ಯಗಳ ನಡುವೆ ಬರುವ ಸಣ್ಣಪುಟ್ಟ ವಿಚಾರಗಳ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಎರಡೂ ರಾಜ್ಯಗಳು ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿರಬೇಕು. ಗಡಿವಿಚಾರದ ವಾಸ್ತವಾಂಶ, ಪರವಿರೋಧ ನಿಲುವುಗಳೇನೇ ಇದ್ದರೂ, ಎರಡೂ ರಾಜ್ಯಗಳ ರಾಜಕೀಯ ಪಕ್ಷಗಳು ಗಡಿವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೇ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸಚಿವರು ಸ್ಪಷ್ಟವಾದ ನಿರ್ದೇಶನವನ್ನು ನೀಡಿದ್ದಾರೆ. ಜನವರಿಯಲ್ಲಿ ಗಡಿವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬರಲಿದ್ದು, ಮೇಂಟನಬಿಲಿಟಿ ಬಗ್ಗೆಯೂ ಪ್ರಸ್ತಾಪ ಆಗಲಿದೆ ಎಂದರು
ಹಿರಿಯ ಪೊಲೀಸ್ ಅಧಿಕಾರಿ ನೇಮಕಕ್ಕೆ ಸಲಹೆ
ಸಾಮಾನ್ಯವಾಗಿ ಆಗುವ ಕಲ್ಲು ತೂರಾಟ ನಿಯಂತ್ರಿಸಬೇಕು. ಸಾಮಾನ್ಯ ಪೊಲೀಸರಿಗಿಂತಲೂ ಇದೇ ವಿಷಯದ ಬಗ್ಗೆ ಲಕ್ಷ್ಯ ನೀಡಲು ಹಿರಿಯ ಐ.ಪಿ.ಎಸ್ ಅಧಿಕಾರಿಯನ್ನು ನೇಮಿಸಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ | Border dispute | ಅಮಿತ್ ಶಾಗೆ ವಿವರ ನೀಡಿದ ಬೊಮ್ಮಾಯಿ, ಸೋಮವಾರ ರಾಜ್ಯದ ಸಂಸದರಿಂದ ಶಾ ಭೇಟಿ