ರಾಯಚೂರು/ಗದಗ: ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಅಬ್ಬರ ಜೋರಾಗಿದೆ. ವೀಕೆಂಡ್ ಬಂದರೆ ಪುಣ್ಯಕ್ಷೇತ್ರಗಳಿಗೆ ದಾಳಿ ಮಾಡುವ ಮಹಿಳೆಯರು ಬಸ್‌ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರಷ್ ಇದೆ. ಸದ್ಯ ಶಕ್ತಿ ಯೋಜನೆ (Shakti Scheme) ಎಫೆಕ್ಟ್ ಯುವತಿಯೊಬ್ಬಳು ಬಸ್ ಸೀಟ್ ಹಿಡಿಯಲು ಸಾಹಸವನ್ನೇ ಮಾಡಿಬಿಟ್ಟಳು.
ರಾಯಚೂರಿನ ಲಿಂಗಸಗೂರು ಬಸ್ ನಿಲ್ದಾಣದಲ್ಲಿ ಭಾನುವಾರ ಆಗಿದ್ದರಿಂದ ಬಸ್ ಫುಲ್ ಆಗಿತ್ತು. ಬಸ್‌ನ ಎರಡು ಬಾಗಿಲಿನಲ್ಲಿ ಜನರು ಜೇನುಹುಳಗಳಂತೆ ತುಂಬಿದ್ದರು. ಹೀಗಾಗಿ ಯುವತಿಯೊಬ್ಬಳು ಸೀಟ್‌ಗಾಗಿ ಕಿಟಕಿಯಿಂದ ಬಸ್‌ನೊಳಗೆ ತೂರಲು ಮುಂದಾಗಿದ್ದಳು.
ವಿಂಡೋ ಸೀಟ್ ಬಳಿ ನಿಂತ ಯುವತಿ, ವ್ಯಕ್ತಿಯೊಬ್ಬ ಕೆಳಗೆ ಕೂರುತ್ತಿದ್ದಂತೆ ಆತನ ಬೆನ್ನ ಮೇಲತ್ತಿ ಕಿಟಕಿಯೊಳಗೆ ನುಗ್ಗಿದ್ದಳು. ಕೆಲಹೊತ್ತು ಕಿಟಕಿಯಲ್ಲಿ ನೇತಾಡಿದ ಯುವತಿ, ಒಳಗೆ ಹೋಗಲು ಆಗದೆ ಪರದಾಡಿದ್ದಳು. ಬಳಿಕ ಮತ್ತೊಬ್ಬ ಮಹಿಳೆ ಸಹಾಯಕ್ಕೆ ಬಂದರು. ಅಂತೂ ಇಂತೂ ಒದ್ದಾಡಿಕೊಂಡು ಆ ಯುವತಿ ಸೀಟ್ ಗಿಟ್ಟಿಸಿಕೊಂಡಳು. ಈ ವಿಡಿಯೊವನ್ನು ಅಲ್ಲಿದ್ದವರು ತಮ್ಮ ಮೊಬೈಕ್‌ನಲ್ಲಿ ಸೆರೆಹಿಡಿದಿದ್ದರು.
ನೂಕು ನುಗ್ಗಲಿನಲ್ಲಿ ಸಿಲುಕಿ ಕಂಡಕ್ಟರ್ ಒದ್ದಾಟ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಕ್ತಿ ಯೋಜನೆ ಎಫೆಕ್ಟ್‌ಗೆ ಜನರು ಮಾತ್ರವಲ್ಲ ಕಂಡಕ್ಟರ್ ಕೂಡ ಪರದಾಟ ಅನುಭವಿಸಿದ್ದಾರೆ. ನೂಕುನುಗ್ಗಲಿನಲ್ಲಿ ಬಸ್ ಹತ್ತಲು ಕಂಡಕ್ಟರ್ ಪರದಾಬೇಕಾಯಿತು. ಕಂಡಕ್ಟರ್‌ನನ್ನೇ ನೂಕಿ ಬಸ್ ಹತ್ತಲು ಪ್ರಯಾಣಿಕರು ಹರಸಾಹಸ ಪಟ್ಟರು.
ಬಸ್ ಫುಲ್ ರಶ್ ಆಗಿದ್ದರೂ ಬಾಗಿಲಲ್ಲೇ ನಿಂತು ಕಂಡಕ್ಟರ್ ಸೇರಿದಂತೆ ಪ್ರಯಾಣಿಕರು ಅಪಾಯಕಾರಿ ಪ್ರಯಾಣ ಮಾಡುವ ವಿಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ. ಲಕ್ಷ್ಮೇಶ್ವರ ಪಟ್ಟಣದ ಡಿಪೋಗೆ ಸೇರಿದ ಬಸ್‌ನಲ್ಲಿ ಫುಲ್ ರಶ್ ಇದ್ದ ಕಾರಣಕ್ಕೆ ಅರ್ಧಕ್ಕೆ ಪ್ರಯಾಣಿಕ ಹಾಗೂ ವಿದ್ಯಾರ್ಥಿನಿ ಅರ್ಧಕ್ಕೆ ಇಳಿದು ಹೋದರು. ಉಳಿದವರು ಅಪಾಯವನ್ನೂ ಲೆಕ್ಕಿಸದೇ ಬಾಗಿಲಲ್ಲೇ ನಿಂತು ಪ್ರಯಾಣಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ