ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾದ ʼಶಕ್ತಿʼಯಿಂದ (Shakti Scheme) ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಂಕಷ್ಟ ಎದುರಾಗಿದೆ. ಐದು ಗ್ಯಾರಂಟಿ ಯೋಜನೆಗೆ ಈ ವರ್ಷ ಬರೋಬ್ಬರಿ 39,000 ಕೋಟಿ ರೂಪಾಯಿ ಹಣವನ್ನು ವ್ಯಯಿಸಬೇಕಿದೆ. ಇದಕ್ಕೆ ಹಣವನ್ನೂ ತೆಗೆದಿಟ್ಟಿದೆ. ಆ ನಿಟ್ಟಿನಲ್ಲಿ ಶಕ್ತಿ ಯೋಜನೆಗಾಗಿ ಒಂದು ಅಂದಾಜು ಮಾಡಿ ಹಣವನ್ನು ತೆಗೆದಿಟ್ಟಿದೆ. ಆದರೆ, ಈ ಅನುದಾನವು ನಿರೀಕ್ಷೆಯನ್ನು ಮೀರಿದ್ದು, ಹೊರೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ ಸಾರಿಗೆ ಇಲಾಖೆಗೆ ಬಾಕಿ ಹೊರೆ ಕಾದಿದೆಯೇ? ಎಂಬ ಅನುಮಾನ ಮೂಡಿದೆ. ಅಲ್ಲದೆ, ಸಾರಿಗೆ ನಿಗಮಗಳು (Transport Corporations) ಭಾರಿ ನಷ್ಟಕ್ಕೆ ಸಿಲುಕಿ ಸಂಬಳ ಕೊಡಲೂ ಪರದಾಡಬೇಕೇ? ಎಂಬ ಆತಂಕವೂ ಕಾಡತೊಡಗಿದೆ.
ಶಕ್ತಿ ಬಿಲ್ ಯದ್ವಾ ತದ್ವ ಏರಿಕೆಯಾಗುತ್ತಿರುವುದು ಸರ್ಕಾರಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ಈಗ ನಿಗದಿ ಮಾಡಿರುವ ಅಂದಾಜು ಮೊತ್ತವು ಬಜೆಟ್ ಅನುದಾನವನ್ನೂ ಮೀರುತ್ತಿದೆ. 2023ರ ಜೂನ್ 11ರಂದು ಜಾರಿಯಾದ ಈ ಯೋಜನೆಗೆ ಮಹಿಳೆಯರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಚಿತ ಬಸ್ ಪ್ರಯಾಣ ಹೆಚ್ಚಾಗಿದೆ.
ಇದನ್ನೂ ಓದಿ: Lok Sabha Election 2024 : ಲೋಕಸಭೆ ಟಾರ್ಗೆಟ್ 20: ರಾಜ್ಯ ಕೈ ನಾಯಕರಿಗೆ ಡೆಲ್ಲಿ ಫಾರ್ಮುಲಾ!
ಜೂನ್‌ನಲ್ಲಿ 10.58 ಕೋಟಿ ಮಹಿಳೆಯರು ಪ್ರಯಾಣಿಸಿ 248.3 ಕೋಟಿ ರೂ. ವೆಚ್ಚವಾಗಿತ್ತು. ಜುಲೈಯಲ್ಲಿ 18.8 ಕೋಟಿ ಮಹಿಳೆಯರು ಪ್ರಯಾಣಿಸಿದ್ದರು. ಇದರ ಮೊತ್ತ 440 ಕೋಟಿ ರೂಪಾಯಿ ಆಗಿತ್ತು. ಯೋಜನೆ ಜಾರಿಯಾದಾಗಿನಿಂದ 28.33 ಕೋಟಿ ರೂಪಾಯಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಒಟ್ಟು ಮೊತ್ತ 663 ಕೋಟಿ ರೂಪಾಯಿ ಆಗಿದೆ. ಇಷ್ಟನ್ನೂ ಸಾರಿಗೆ ಇಲಾಖೆಗೆ ಸರ್ಕಾರ ನೀಡಬೇಕು.
ಇಟ್ಟಿದ್ದು 2,800 ಕೋಟಿ ರೂ. ಅಷ್ಟೇ!
ಹೀಗೇ ಮುಂದುವರಿದರೆ ಈ ಆರ್ಥಿಕ ವರ್ಷದ 9 ತಿಂಗಳಲ್ಲಿ 4,202 ಕೋಟಿ ರೂ. ಬೇಕಾಗುತ್ತದೆ. ಆದರೆ, ಸರ್ಕಾರ ಬಜೆಟ್‌ನಲ್ಲಿ 2,800 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಸಾಮಾನ್ಯ ನಿಧಿಯಿಂದ 1988 ಕೋಟಿ ರೂ., ಎಸ್‌ಸಿ ನಿಧಿಯಿಂದ 560 ಕೋಟಿ ರೂ., ಎಸ್‌ಟಿ ನಿಧಿಯಿಂದ 252 ಕೋಟಿ ರೂ. ಸೇರಿ ಒಟ್ಟು 2,800 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಆದರೆ, ಈಗಿನ ಅಂದಾಜಿನ ಪ್ರಕಾರ ಇನ್ನೂ 1400 ಕೋಟಿ ರೂ. ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಕಳೆದ ತಿಂಗಳ ಬಾಕಿಯನ್ನೇ ನೀಡಿಲ್ಲ ಸರ್ಕಾರ!
ಶಕ್ತಿ ಯೋಜನೆಯ ಜೂನ್ ತಿಂಗಳ ಬಾಕಿ ಹಣವನ್ನು ಸರ್ಕಾರ ಇನ್ನೂ ಪಾವತಿ ಮಾಡಿಲ್ಲ. ಪ್ರತಿ ತಿಂಗಳು 7ರಂದು ಬಿಎಂಟಿಸಿ ವೇತನ ಪಾವತಿ ಮಾಡುತ್ತದೆ. ಇನ್ನು ಪ್ರತಿ ತಿಂಗಳು 1ರಂದು ಕೆಎಸ್‌ಆರ್‌ಟಿಸಿ ವೇತನ ಪಾವತಿ ಮಾಡುತ್ತದೆ. ಇಂದಿನವರೆಗೂ ಜೂನ್ ತಿಂಗಳ ಬಾಕಿಯಾದ 248 ಕೋಟಿ ರೂಪಾಯಿ ಪಾವತಿ ಆಗಿಲ್ಲ. ಈಗಾಗಲೇ ಜುಲೈ ಮುಗಿಯುತ್ತಾ ಬಂದರೂ ಜೂನ್ ಬಾಕಿ ಪಾವತಿಸಿಲ್ಲ. ಕಳೆದ ಬಾರಿ ಹೇಗೊ ವೇತನ ಕೊಟ್ಟಿರುವ ಸಾರಿಗೆ ಕಾರ್ಪೊರೇಷನ್‌ಗಳಿಗೆ ಈಗ ಸಮಸ್ಯೆಯಾಗಿದೆ. ಈ ಬಾರಿ ವೇತನ ಕೊಡುವುದು ಅಸಾಧ್ಯ ಎಂಬ ಪರಿಸ್ಥಿತಿ ಇದೆ ಎಂದು ವಿಸ್ತಾರ ನ್ಯೂಸ್‌ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Gruha lakshmi scheme : ಮುಂದಿನ ವರ್ಷ ಗೃಹಲಕ್ಷ್ಮಿ ಭಾಗ್ಯ ಇಲ್ಲ? ಆರ್ಥಿಕ ಇಲಾಖೆ ಹೇಳಿದ್ದೇನು?
ಈಗಾಗಲೇ ಬಜೆಟ್ ಹೊಂದಿಸಲಾಗದೆ ಸಿಎಂ ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಶಾಸಕರಿಗೆ ಅನುದಾನ ನೀಡದಿರುವುದು ಅಸಮಾಧಾನಕ್ಕೂ ಕಾರಣವಾಗಿದೆ. ಈ ಹೆಚ್ಚುವರಿ ಹೊರೆಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ? ಬಾಕಿ ನೀಡಲಾಗದೆ ಸಾರಿಗೆ ಇಲಾಖೆಯನ್ನು ಸಾಲಕ್ಕೆ ತಳ್ಳುತ್ತದೆಯೇ ಸರ್ಕಾರ ಎಂಬ ಅನುಮಾನ ಮೂಡಿದೆ.