ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘ ಕರೆದಿದ್ದ ತುರ್ತು ಸಭೆಯಲ್ಲಿ ಯಾವುದೇ ಚರ್ಚೆಗಳನ್ನು ನಡೆಸದೆ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದನ್ನು ವಿರೋಧಿಸಿದ ಎನ್‌ಪಿಎಸ್ ನೌಕರರ ಸಂಘದ (NPS Employees) ಸದಸ್ಯರ ಮೇಲೆ ಸರ್ಕಾರಿ ನೌಕರರ ಸಂಘದ ಕೆಲವರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸರ್ಕಾರಿ ನೌಕರರ ಸಂಘದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ, ಅನಿರ್ದಿಷ್ಟಾವಧಿ ಹೋರಾಟವು ಎನ್‌ಪಿಎಸ್ ರದ್ದತಿಯ ಆದೇಶ ಮತ್ತು ಜುಲೈ ೧ ರಿಂದ ಜಾರಿಗೆ ಬರುವಂತೆ ಶೇ.೪೦ ಹೆಚ್ಚಳದೊಂದಿಗೆ ೭ನೇ ವೇತನ ಆಯೋಗದ ಅಧಿಕೃತ ಆದೇಶಗಳೊಂದಿಗೆ ಹೋರಾಟ ಅಂತ್ಯಗೊಳ್ಳಬೇಕು ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ. ಈ ವಿಷಯವನ್ನು ಮಾತನಾಡಲು ಅವಕಾಶ ಕೋರಿದ ಎನ್‌ಪಿಎಸ್ ನೌಕರರ ಮೇಲೆ ಹಲ್ಲೆ ನಡೆಸಿ, ಕೆಲ ಮಹಿಳಾ ನೌಕರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | 7th Pay Commission : ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗುವ ಹೋರಾಟ ಪ್ರಕಟಿಸಿದ ಸರ್ಕಾರಿ ನೌಕರರ ಸಂಘ
ಏಕಪಕ್ಷೀಯವಾಗಿ ಎನ್‌ಪಿಎಸ್ ನೌಕರರ ಮೇಲೆ ಹಲ್ಲೆ ನಡೆಸಿರುವುದು ಮತ್ತು ಸಭೆಯಿಂದ ಹೊರದೂಡಿರುವುದು ಖಂಡನೀಯ. ಈ ದೌರ್ಜನ್ಯವನ್ನು ಖಂಡಿಸಿ ಎನ್‌ಪಿಎಸ್ ನೌಕರರ ಸಂಘದ ಪ್ರತಿನಿಧಿಗಳು ಮತ್ತು ಸದಸ್ಯರು ರಸ್ತೆಯಲ್ಲಿಯೇ ಅನಿವಾರ್ಯವಾಗಿ ಕುಳಿತು ಕೆಲಕಾಲ ಪ್ರತಿಭಟಿಸಬೇಕಾಯಿತು. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.