Site icon Vistara News

ಮುರುಘಾ ಮಠದಲ್ಲಿ ಅ.4ರಿಂದ ಸರಳ ಶರಣ ಸಂಸ್ಕೃತಿ ಉತ್ಸವ; ಆಹ್ವಾನ ಪತ್ರಿಕೆಯಲ್ಲಿ ಮುರುಘಾಶ್ರೀಗಳ ಹೆಸರು ಮಾಯ

ಮುರುಘಾ ಮಠದಲ್ಲಿ

ಚಿತ್ರದುರ್ಗ: ಮುರುಘಾ ಮಠದ ಕಾರ್ಯಕ್ರಮದವೊಂದರ ಆಹ್ವಾನ ಪತ್ರಿಕೆಯಲ್ಲಿ ಶಿವಮೂರ್ತಿ ಮುರುಘಾ ಶರಣರ ಹೆಸರೇ ಮಾಯವಾಗಿದೆ. ದಸರಾ ಸಂದರ್ಭದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಯೋಜಿಸಲು ನಿರ್ಧರಿಸಲಾಗಿದ್ದು, ಪೋಕ್ಸೊ ಪ್ರಕರಣದಲ್ಲಿ ಮುರುಘಾಶ್ರೀ ಬಂಧನವಾದ ಹಿನ್ನೆಲೆಯಲ್ಲಿ ಅವರ ಹೆಸರು ಹಾಗೂ ಭಾವಚಿತ್ರ ಕೈಬಿಡಲಾಗಿದೆ.

ಮುರುಘಾಮಠದಿಂದ 9 ದಿನ ಆಯೋಜಿಸುತ್ತಿದ್ದ ಶರಣ ಸಂಸ್ಕೃತಿ ಉತ್ಸವವನ್ನು ಈ ಬಾರಿ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಅಕ್ಟೋಬರ್ 4ರಿಂದ‌ 6ರವರೆಗೆ ವಿವಿಧ ಶ್ರೀಗಳ ಸಮ್ಮುಖದಲ್ಲಿ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಅ.4ರಂದು ಬಸವತತ್ವ ಧ್ವಜಾರೋಹಣ, ಉತ್ಸವ ಉದ್ಘಾಟನೆ, ಅ.5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ, ಕೋಟೆಯಲ್ಲಿನ ಮಠದಲ್ಲಿ ರಾಜವಂಶಸ್ಥರಿಂದ ಭಕ್ತಿ ಸಮರ್ಪಣೆ, ಅ.5ರಂದು ಮುರುಘಾ ಶಾಂತವೀರಶ್ರೀ ಭಾವಚಿತ್ರದೊಂದಿಗೆ ಪೀಠಾರೋಹಣ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರ ಶ್ರೀಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷ ಬಸವಪ್ರಭು ಶ್ರೀ, ಕಾರ್ಯಾದ್ಯಕ್ಷ ಎಸ್.ಲಿಂಗಮೂರ್ತಿ ಮತ್ತಿತರರು ಇದ್ದರು.

ಮುರುಘಾ ಮಠಕ್ಕೆ ಹಿಂದುಳಿದ, ದಲಿತ ಸಮುದಾಯದವರನ್ನು ಸ್ವಾಮೀಜಿ ಮಾಡಿ

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್

ಮುರುಘಾಮಠ ಶೂನ್ಯ ಪೀಠ ಪರಂಪರೆಯ ಮಠವಾಗಿದ್ದು, ಸರ್ವ ಸಮುದಾಯದ ಭಕ್ತರನ್ನು ಹೊಂದಿದೆ. ಶೂದ್ರ ಸಮಾಜದ ಅಲ್ಲಮಪ್ರಭು ಶೂನ್ಯ ಪೀಠದ ಪ್ರಥಮ ಅಧ್ಯಕ್ಷರಾಗಿದ್ದರು. ಹೀಗಾಗಿ ಮುರುಘಾಮಠವನ್ನು ವೀರಶೈವ ಲಿಂಗಾಯತ ಸಮಾಜಕ್ಕೆ ಸೀಮಿತ ಮಾಡುವುದು ಬೇಡ. ಮಠಕ್ಕೆ ಹಿಂದುಳಿದ, ದಲಿತ ಸಮುದಾಯದವರನ್ನು ಸ್ವಾಮೀಜಿ ಮಾಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.

ಮುರುಘಾಮಠ ಶೂನ್ಯ ಪೀಠ ಎಂಬುದನ್ನು ಅಳಿಸಿ ಹಾಕಿ, ವೀರಶೈವ ಲಿಂಗಾಯತ ಮಠ ಎಂಬ ಬೋರ್ಡ್ ಹಾಕುವ ಹುನ್ನಾರ ನಡೆದಿದೆ. ನಾಯಕ ಸಮುದಾಯದ ಭರಮಣ್ಣ ನಾಯಕ ಮಠ ಕಟ್ಟಿಸಿಕೊಟ್ಟಿದ್ದಾರೆ ಎಂದ ಅವರು, ಮಠಕ್ಕೆ ನಿರಂತರವಾಗಿ ಒಂದೇ ಸಮುದಾಯದ ಸ್ವಾಮೀಜಿ ನೇಮಕ ಏಕೆ? ಶೂದ್ರ ಸಮುದಾಯದವರು ಏಕೆ ಸ್ವಾಮೀಜಿ ಆಗಬಾರದು? ಇದಕ್ಕಾಗಿ ಶ್ರೀ ಮುರುಘಾ ಪರಂಪರೆ ಕಲ್ಯಾಣ ಸಮಿತಿ ರಚಿಸಿ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಮುರುಘಾಶ್ರೀ ಬದಲಾಯಿಸಬೇಕು ಎಂಬುದು ನಮ್ಮ ಅಭಿಪ್ರಾಯ ಅಲ್ಲ. ಕೆಲವರು ಸಂದರ್ಭ ಸೃಷ್ಟಿಸಿ ಸ್ವಾಮೀಜಿ ಬದಲಾವಣೆಗೆ ಹೊರಟಿದ್ದಾರೆ. ಹೊಸ ಸ್ವಾಮೀಜಿ ಮಾಡುವುದಾದರೆ ಶೂದ್ರ ಸಮುದಾಯದವರನ್ನೇ ಮಾಡಬೇಕು. ಹಿಂದುಳಿದ, ದಲಿತ ಸಮುದಾಯದವರಿಗೆ ಅವಕಾಶ ನೀಡಬೇಕು. ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ಹಿನ್ನೆಲೆಯಲ್ಲಿ ಕೆಲವರು ವೀರಶೈವ ಲಿಂಗಾಯತ ಸಮಾಜದ ಸಭೆ ನಡೆಸಿದ್ದಾರೆ. ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಸೆ.29ರಂದು ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಸಭೆ ನಡೆದಿದೆ. ಮುರುಘಾ ಮಠ ಕೇವಲ ಲಿಂಗಾಯತ ಸಮಾಜಕ್ಕೆ ಸೀಮಿತವಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ | Navaratri 2022 | ಭೂತ, ಪ್ರೇತ ಇತ್ಯಾದಿ ಭಯ ದೂರವಾಗಲು ನವರಾತ್ರಿಯ 7ನೇ ದಿನ ಈ ದೇವಿಯನ್ನು ಪೂಜಿಸಿ

Exit mobile version