ನವದೆಹಲಿ/ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (Sharavathi Project) ಟೆಂಡರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಎಲ್ & ಟಿ (L&T) ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಸುದೀರ್ಘ ವಿಚಾರಣೆಯ ನಂತರ ಎಸ್‌ಎಲ್‌ಪಿಯನ್ನು ವಜಾಗೊಳಿಸಿತು.
ರಾಜ್ಯವು ಸಾಕಷ್ಟು ಸಮಯವನ್ನು ನೀಡಿದೆ ಮತ್ತು ಇನ್ನೂ ಎಲ್ ಆ್ಯಂಡ್ ಟಿ ಬಿಡ್ ಸಲ್ಲಿಸಲು ಸಾಧ್ಯವಾಗಲಿಲ್ಲ. ಎಲ್ & ಟಿ ಭಾಗವಹಿಸಲು ಅರ್ಹತೆ ಹೊಂದಿಲ್ಲ. ಎಲೆಕ್ಟ್ರೋ-ಮೆಕ್ಯಾನಿಕಲ್ ಮತ್ತು ಹೈಡ್ರೋ-ಮೆಕ್ಯಾನಿಕಲ್ ಕೆಲಸಗಳಲ್ಲಿ ಅನುಭವದ ಕೊರತೆಯಿದೆ ಎಂದು ಪ್ರಕರಣದಲ್ಲಿ ವಿವರಿಸಲಾಗಿತ್ತು.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಆದೇಶವನ್ನು ಎಲ್ & ಟಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಉಚ್ಚ ನ್ಯಾಯಾಲಯವು ಎಲ್ & ಟಿ ಅರ್ಜಿಯಲ್ಲಿ ವಾಣಿಜ್ಯ ಹಿತಾಸಕ್ತಿ ಹೊಂದಿದೆ ಎಂದು ತಿಳಿಸಿ ಸಲ್ಲಿಕೆಯಾದ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಪ್ರಸ್ತುತ ಕೆಪಿಸಿಎಲ್ ಕೈಗೊಂಡಿರುವ ನಡೆಸುತ್ತಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ (Sharavathi Pumped Storage power Project) ಟೆಂಡರ್‌ನ್ನು ಎಂಇಐಎಲ್ ಕಡಿಮೆ ದರ ನಮೂದಿಸುವ ಮೂಲಕ ತನ್ನದಾಗಿಸಿಕೊಂಡಿದೆ.
8 ಸಾವಿರ ಕೋಟಿ ರೂ. ಯೋಜನೆ ಟೆಂಡರ್ ಊರ್ಜಿತ
ರಾಜ್ಯದ ವಿದ್ಯುತ್ ಸಮಸ್ಯೆ ನೀಗಲು ಸರ್ಕಾರವು 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲು ಮುಂದಾಗಿರುವ ‘ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಸಂಬಂಧಿಸಿರುವ ಟೆಂಡರ್ ಪ್ರಕ್ರಿಯೆಯನ್ನು ಏ.25ರಂದು ಹೈಕೋರ್ಟ್ ಊರ್ಜಿತಗೊಳಿಸಿತ್ತು.
ಯೋಜನೆಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸುವಂತೆ ಎಲ್ & ಟಿ ಕಂಪನಿಯು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಅರ್ಜಿ ವಿಚಾರಣೆ ನಡೆಸಿ, ಮೇಲ್ಮನವಿ ವಜಾಗೊಳಿಸಿದ್ದರು.
ಟೆಂಡರ್‌ಗೆ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಕೇವಲ 21 ದಿನ ನೀಡಲಾಗಿದೆ. ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎ) ಕೆಲ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ರೂಪಿಸಿದೆ ಎಂದು ಅರ್ಜಿದಾರರು ವಾದ ಮಂಡಿಸಿದ್ದರು. ಅಲ್ಲದೆ, 5 ವರ್ಷ ಯೋಜನಾ ಅವಧಿಯ 8,000 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗೆ ಕೇವಲ 21 ದಿನಗಳ ಟೆಂಡರ್ ಕೊನೆಗೊಳಿಸಲಾಗಿದೆ. ನೀತಿಸಂಹಿತೆಯಿಂದ ಪಾರಾಗಲು ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ. ತಮಗೆ ಟೆಂಡರ್ ಸಲ್ಲಿಕೆಗೆ 90 ದಿನ ಬೇಕಿತ್ತು. ಹೀಗಾಗಿ ಟೆಂಡರ್ ಅನೂರ್ಜಿತಗೊಳಿಸಬೇಕು ಎಂದು ಎಲ್ & ಟಿ ಕೋರಿತ್ತು.
ಇದನ್ನೂ ಓದಿ | Narendra Modi: ಪ್ರಧಾನಿ ಮೋದಿ ಅನರ್ಹತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ
30 ದಿನಗಳ ಟೆಂಡರ್ ಅವಧಿಯನ್ನು ಕಡಿತಗೊಳಿಸಲು ಪ್ರಾಧಿಕಾರಕ್ಕೆ ಅಧಿಕಾರವಿದೆ. ಈಗಾಗಲೇ ಬಿಡ್ ತೆರೆಯಲಾಗಿದ್ದು, ಲೆಟರ್ ಆಫ್ ಅವಾರ್ಡ್ ಕೂಡ ನೀಡಲಾಗಿದೆ. ಪ್ರಕ್ರಿಯೆಗೆ ತಡೆ ನೀಡಬಾರದು ಎಂದು ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಮನವಿ ಮಾಡಿದ್ದರು. ಹೀಗಾಗಿ ಟೆಂಡರ್ ಪ್ರಕ್ರಿಯೆಯನ್ನು ಹೈಕೋರ್ಟ್ ಊರ್ಜಿತಗೊಳಿಸುವ ಮೂಲಕ ಸರ್ಕಾರದ ಆದೇಶ ಎತ್ತಿ ಹಿಡಿದು, ಮೇಲ್ಮನವಿಯನ್ನು ವಜಾಗೊಳಿಸಿತ್ತು. ಪ್ರಸ್ತುತ ಟೆಂಡರ್ ಅನ್ನು ಕಡಿಮೆ ದರ ನಮೂದಿಸಿದ್ದ ಮೇಘ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಪಡೆದುಕೊಂಡಿದೆ.