ಜೋಗ (ಸಾಗರ): ರಾಜ್ಯಕ್ಕೆ ವಿದ್ಯುತ್ ಕೊಡುವ ಜೋಗದ ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆಗೆ ಉಪಯೋಗ ಆಗುವಂತೆ ಮೊದಲು ಕಟ್ಟಲಾಗಿದ್ದೇ ಮಡೆನೂರು ಡ್ಯಾಮ್ (Madenur Dam). ಇದು ಕರ್ನಾಟಕದ ಅಗೋಚರ ಡ್ಯಾಂ (Karnataka Dam) ಎಂದೂ ಕರೆಯಲ್ಪಡುತ್ತದೆ. ಇದಕ್ಕೆ ಇದರದ್ದೇ ಆದ ಮಹತ್ವವೂ ಇದೆ. ಇದು ಈಗ ಇತಿಹಾಸದ ಪುಟ ಸೇರಿ ಆರು ದಶಕವೇ ಕಳೆದಿದೆ. ಯಾವಾಗ ಶರಾವತಿ ನದಿಗೆ (Sharavathi river) ಅಡ್ಡಲಾಗಿ ಲಿಂಗನಮಕ್ಕಿ ಡ್ಯಾಂ (Linganamakki Dam) ನಿರ್ಮಾಣವಾಯಿತೋ, ಅದರ ಪ್ರವಾಹದೊಳಗೆ ಇದು ಹುದುಗಿ ಹೋಯಿತು. ಜೋಗದಲ್ಲಿ ವಿದ್ಯುತ್ ಉತ್ಪಾದನೆಗೆ ಶಕ್ತಿ ತುಂಬುತ್ತಿದ್ದ ಈ ಡ್ಯಾಂನ ಶಕ್ತಿಯು ನೀರಿನೊಳಗೆ ಮುಳುಗಿ ಹೋಯಿತು!
ಈ ಮಡೆನೂರು ಡ್ಯಾಮ್‌ಗೆ ಹಿರೇಭಾಸ್ಕರ ಡ್ಯಾಂ ಎಂದೂ ಕರೆಯುತ್ತಾರೆ. ಶರಾವತಿ ನದಿಗೆ ಕಟ್ಟಲ್ಪಟ್ಟ ಮೊಟ್ಟ ಮೊದಲ ಡ್ಯಾಮ್ ಇದು ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ. ಅತ್ಯಂತ ಕಲಾತ್ಮಕ ಶೈಲಿಯಲ್ಲಿ ಎಂಜಿನಿಯರಿಂಗ್ ಕೌಶಲ್ಯವನ್ನು ಬಳಸಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಸರ್.ಎಂ. ವಿಶ್ವೇಶ್ವರಯ್ಯನವರ ಪ್ಲ್ಯಾನ್ ಪ್ರಕಾರ ಈ ಅಣೆಕಟ್ಟು ರೂಪುಗೊಂಡಿದೆ.
ಇದನ್ನೂ ಓದಿ: Free Bus: ನಾಳೆ ಮಹಿಳೆಯರಲ್ಲಿ ‘ಶಕ್ತಿ’ ಸಂಚಾರ! ಉಚಿತ ಪ್ರಯಾಣಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್‌ಕಾರ್ಡ್ ಸಿಗೋದು ಯಾವಾಗ?
1949ರಲ್ಲಿ ಲೋಕಾರ್ಪಣೆಗೊಂಡ ಜೋಗದ ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆಗೆ ಈ ಜಲಾಶಯದಿಂದ ನೀರನ್ನು ಒದಗಿಸಲಾಗುತ್ತಿತ್ತು. ನಂತರ 1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದ ನಂತರ ಸಂಪೂರ್ಣವಾಗಿ ಈ ಡ್ಯಾಮ್ ಮುಳುಗಡೆ ಆಯಿತು. ಈಗ ಲಿಂಗನಮಕ್ಕಿ ಜಲಾಶಯ ಬರಿದಾಗುವ ಹಂತಕ್ಕೆ ಬಂದಿರುವುದರಿಂದ ಈ ಡ್ಯಾಮ್ ಅನ್ನು ಕಾಣಬಹುದಾಗಿದೆ. ಒಂದು ವೇಳೆ ಪ್ರವಾಸಿಗರು ಈ ಅದ್ಭುತ ಎಂಜಿನಿಯರಿಂಗ್ ಕೌಶಲ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಇದು ಸಕಾಲ.
1746 ಅಡಿಗೆ ಕುಸಿತ ಕಂಡ ಶರಾವತಿ
ಈ ವರ್ಷ ಮಳೆ ಕೊರತೆಯಿಂದ ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1746 ಅಡಿಗೆ ಕುಸಿತ ಕಂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 1750-55 ಅಡಿಯಷ್ಟು ನೀರಿನ ಮಟ್ಟ ಇದ್ದಾಗ ಈ ಮಡೆನೂರು ಡ್ಯಾಂ ಕಾಣುತ್ತದೆ. 2003ರಲ್ಲಿ ಒಮ್ಮೆ ಜಲಾಶಯದಲ್ಲಿ 1733 ಅಡಿಗೆ ನೀರಿನ ಮಟ್ಟ ಕುಸಿದಿತ್ತು. ಇದೇ ಇಲ್ಲಿಯವರೆಗಿನ ಕನಿಷ್ಠ ಮಟ್ಟದ ದಾಖಲೆಯಾಗಿದೆ. ಆದರೆ, ಈ ಬಾರಿ ಇದಕ್ಕಿಂತ 13 ಅಡಿ ಮಾತ್ರವೇ ಹೆಚ್ಚಿದ್ದು, ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಮಳೆ ಬಾರದಿದ್ದರೆ?
ಈ ವರ್ಷ ದಾಖಲೆ ಪ್ರಮಾಣದಲ್ಲಿ ಲಿಂಗನಮಕ್ಕಿ ಜಲಾಶಯದ ನೀರು ಖಾಲಿ ಆಗುವ ಹಂತದಲ್ಲಿ ಇದೆ. ಇನ್ನು ಐದಾರು ದಿನದಲ್ಲಿ ಮಳೆ ಬಾರದಿದ್ದರೆ ಜಲಾಶಯ ಸಂಪೂರ್ಣ ಖಾಲಿಯಾಗಲಿದ್ದು, ರಾಜ್ಯಕ್ಕೆ ಶೇಕಡಾ 42ರಷ್ಟು ವಿದ್ಯುತ್ ಒದಗಿಸುವ ಶರಾವತಿ ಜಲವಿದ್ಯುದಾಗರ ಕೂಡ ಬಂದ್ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇದರ ಮಧ್ಯೆ ಲಿಂಗನಮಕ್ಕಿ ಜಲಾಶಯದ ನೀರು ಖಾಲಿಯಾಗಿರುವುದರಿಂದ ಈಗ ಈ ಮಡೆನೂರು ಡ್ಯಾಮ್ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಡ್ಯಾಮ್ ನೀರಿನಲ್ಲಿ ಮುಳುಗಿ ಆರು ದಶಕಗಳಿಗೂ ಹೆಚ್ಚು ಕಾಲವಾಗಿದೆ. ವರ್ಷ ಪೂರ್ತಿ ನೀರಿನಲ್ಲಿ ಮುಳುಗಿದ್ದರೂ ಇವತ್ತಿನವರೆಗೂ ಇದು ಅತ್ಯಂತ ಸುಭದ್ರವಾಗಿದೆ.
ಏನಿದರ ಆಳ-ಅಗಲ?
ಈ ಹಿರೇಭಾಸ್ಕರ ಅಣೆಕಟ್ಟೆಯು 114 ಅಡಿ ಎತ್ತರವಿದೆ. ಗ್ರಾವಿಟಿ ಮಾದರಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದರ ಗಾರೆ ಕಟ್ಟೆಯು 1150 ಅಡಿ ಉದ್ದವನ್ನು ಹೊಂದಿದೆ. ಎರಡು ಭಾಗದಲ್ಲಿ ಮಣ್ಣಿನ ಒಡ್ಡು ಇದ್ದು, ಅವು 1150 ಮತ್ತು 980 ಅಡಿ ಇದೆ. ಡ್ಯಾಂನ ತಳದಲ್ಲಿ 87 ಅಡಿ ಅಗಲವಿದ್ದರೆ, ಮೇಲ್ಭಾಗದಲ್ಲಿ 21.6 ಅಡಿ ಅಗಲವಿದೆ. ಎಲ್ಲ ಡ್ಯಾಂಗಳಲ್ಲಿ ಇರುವಂತೆ ಇಲ್ಲೂ ಸಹ ಡ್ಯಾಂನ ಮೇಲ್ಭಾಗವನ್ನು ಸಂಚಾರಕ್ಕೆ ಹಾದಿಯನ್ನು ಮಾಡಲಾಗಿದೆ. ಆಗಿನ ಕಾಲದಲ್ಲಿ ಒಟ್ಟು 1.12 ಕೋಟಿ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: H.D. Kumaraswamy: ಇದು 40+5 ಪರ್ಸೆಂಟ್ ಕಮಿಷನ್ ಸರ್ಕಾರ: ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್!
ಹೋಗುವುದು ಹೇಗೆ?
ಹೊಳೆಬಾಗಿಲಿನಿಂದ ತುಮರಿ – ವಳಗೆರೆ ಮಾರ್ಗವಾಗಿ 13 ಕಿ.ಮೀ. ಕ್ರಮಿಸಬೇಕು. ಇಲ್ಲಿ ವಾಹನಗಳ ಮೂಲಕ ಸಾಗಬಹುದಾಗಿದೆ. ಆದರೆ, ಹೊಳೆಬಾಗಿಲಿನಿಂದ ನಿಂತು ನೋಡಿದರೂ 3 ಕಿ.ಮೀ. ದೂರದಲ್ಲಿ ಈ ಡ್ಯಾಂ ಕಾಣ ಸಿಗುತ್ತದೆ. ಆದರೆ, ಹತ್ತಿರ ಹೋಗಿ ನೋಡುವುದಿದ್ದರೆ ಹೀಗೆ ಕ್ರಮಿಸಬೇಕಿದೆ.