ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ(Sharavathi Submergence) ಸಮಸ್ಯೆ ವಿಚಾರ ಇದೀಗ ಚುನಾವಣಾ ಅಸ್ತ್ರವಾಗಿ ಹೊರಹೊಮ್ಮಿದೆ. ಪ್ರಮುಖ ರಾಜಕೀಯ ಪಕ್ಷಗಳು, ಸಂತ್ರಸ್ತರ ಸಮಸ್ಯೆಯನ್ನು ಮುಂದಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿವೆ. ಒಂದು ಕಡೆ ಸಂತ್ರಸ್ತರ ಸಮಸ್ಯೆಯನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಟ ಆರಂಭಿಸಿದ್ದರೆ, ಮತ್ತೊಂದು ಕಡೆ, ಬಿಜೆಪಿ ಕೂಡ ಸೇರಿಗೆ ಸವ್ವಾ ಸೇರು ಎಂಬಂತೆ, ಸಂತ್ರಸ್ತರ ಸಭೆ ನಡೆಸಿದೆ.
ಅಗತ್ಯವಿದ್ದರೆ ಮತ್ತೊಮ್ಮೆ ಡೆಲ್ಲಿಗೆ ಹೋಗುತ್ತೇನೆ: ಮಾಜಿ ಸಿಎಂ ಯಡಿಯೂರಪ್ಪ
ಕಾಂಗ್ರೆಸ್ ಸಭೆ ನಡೆಸಿದ ಬೆನ್ನಲ್ಲೇ ಮುಳುಗಡೆ ಸಂತ್ರಸ್ತರ ಸಮಾವೇಶವನ್ನು ಜಿಲ್ಲಾ ಬಿಜೆಪಿ ವತಿಯಿಂದ ಈಡಿಗರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮುಳುಗಡೆ ಸಂತ್ರಸ್ತರ ಸಮಸ್ಯೆ 15-20 ದಿನಗಳಲ್ಲಿ ಪರಿಹರಿಸಲಾಗುತ್ತದೆ. ಅಧಿಕಾರದಲ್ಲಿದ್ದಾಗ ಯಾವುದೇ ಕಾಳಜಿ ವಹಿಸದ ಕಾಂಗ್ರೆಸ್‌ನವರು ಈಗ ಪಾದಯಾತ್ರೆಯಂತಹ ರಾಜಕೀಯ ಗಿಮಿಕ್ ಮಾಡಬಾರದು, ನ. 27 ರಂದು ಸಿಎಂ ತೀರ್ಥಹಳ್ಳಿಗೆ ಬರಲಿದ್ದಾರೆ. ಅವರ ಮುಖಾಂತರವೇ ಪರಿಹರಿಸಲಾಗುತ್ತದೆ. ಅಗತ್ಯವಿದ್ದರೆ ಮತ್ತೊಮ್ಮೆ ದೆಹಲಿಗೆ ಹೋಗುತ್ತೇನೆ ಎಂದರು.
ಇದನ್ನೂ ಓದಿ | Election 2023 | ಸಿಎಂ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಪೈಪೋಟಿ; ಡಜನ್ ಮೀರಿದ ಅರ್ಜಿ !
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು 1962ರಲ್ಲಿಯೇ ರಾಜಕೀಯಕ್ಕೆ ಬಂದಿದ್ದರು. ಆಗಿನಿಂದ ಕಾಗೋಡು ಬೇರೆ ಬೇರೆ ಸಚಿವ ಸ್ಥಾನದಲ್ಲಿ ಇದ್ದರು. ಆಗಿನಿಂದ ಈಗಿನವರೆಗೆ ಸಮಸ್ಯೆ ಬಗೆಹರಿಸಲಿಲ್ಲ. ಈಗ ಈ ಎಲ್ಲಾ ಸಮಸ್ಯೆಗೆ ಹಾಲಪ್ಪ, ಜ್ಞಾನೇಂದ್ರ, ಯಡಿಯೂರಪ್ಪ ರಾಘವೇಂದ್ರ ಕಾರಣವೆಂದು ಹೇಳುತ್ತಿದ್ದಾರೆ. ಈಗ ಮುಖ್ಯಮಂತ್ರಿಯವರನ್ನು ಕರೆಸಿ ಅವರ ಗಮನ ಸೆಳೆಯಬೇಕಿದೆ. ಸಮಸ್ಯೆಯನ್ನು ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ. 60 ವರ್ಷದಿಂದ ಇರುವ ಸಮಸ್ಯೆ ಪರಿಹರಿಸಿಲ್ಲ. ಈಗ ಯಡಿಯೂರಪ್ಪನವರ ನೇತೃತ್ವದಲ್ಲಿ ಪರಿಹರಿಸಬೇಕಿದೆ. 24,757 ಎಕರೆ ಜಮೀನು ಮೂರು ಅಣೆಕಟ್ಟುಗಳಿಂದ ಕಳೆದುಕೊಂಡಿದ್ದೇವೆ. ಈಗ ಸ್ವಾಧೀನದಲ್ಲಿರುವ ಜಮೀನಿಗೆ ದಾಖಲೆಗಳು ಇಲ್ಲ. ಆ ದಾಖಲೆಗಳನ್ನು ಪಡೆಯುವ ಕೆಲಸ ಆಗಬೇಕಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕೇಂದ್ರ ಅರಣ್ಯ ಸಚಿವರು ಧನಾತ್ಮಕ ಭರವಸೆ ನೀಡಿದ್ದಾರೆ. ಹೀಗಾಗಿ ಶೀಘ್ರದಲ್ಲಿ ಸಂತ್ರಸ್ತರ ಸಮಸ್ಯೆ ಪರಿಹಾರವಾಗುವ ನಂಬಿಕೆ ಇದೆ. ಸುದೀರ್ಘ ಅಧಿಕಾರ ನಡೆಸಿಕೊಂಡು ಬಂದವರು ಇಲ್ಲಿಯವರೆಗೂ ಸಮಸ್ಯೆ ಪರಿಹಾರ ಮಾಡಿಲ್ಲ. ಈಗ ಪರಿಹಾರ ಮಾಡಲು ಪಾದಯಾತ್ರೆ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ. ನಿಮ್ಮ ಜೀವನದಲ್ಲಿ ಈ ಸಮಸ್ಯೆ ಪರಿಹರಿಸಲು ಆಗಿಲ್ಲ. ಈಗ ನಾವು ಪರಿಹರಿಸುತ್ತೇವೆ. ಶುಗರ್ ಕಡಿಮೆ ಮಾಡಿಕೊಳ್ಳಲು ಪಾದಯಾತ್ರೆ ಮಾಡಿ. ಸಮಸ್ಯೆ ಪರಿಹರಿಸುವ ಸಲುವಾಗಿ ರಾಜಕೀಯ ಗಿಮಿಕ್ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಇದೇ ನವೆಂಬರ್ 27ರಂದು ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮವಿದ್ದು, ಶರಾವತಿ ಸಂತ್ರಸ್ತರ ಮನವಿಗಾಗಿ ಪ್ರತ್ಯೇಕ ವೇದಿಕೆ ಸಿದ್ದಗೊಳಿಸಿ, ಮುಖ್ಯಮಂತ್ರಿಗಳಿಗೆ ಮನವಿ ಕೊಡಿಸಲಾಗುವದು. ಹಾಗಾಗಿ ಮುಳಗಡೆ ರೈತರು ಅಲ್ಲಿಗೆ ಬನ್ನಿ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ | Voter data | ಚಿಲುಮೆ ಸಂಸ್ಥೆ ಕಾರ್ಯಾಚರಣೆ ಹೊಸತಲ್ಲ, ಕಾಂಗ್ರೆಸ್, ಜೆಡಿಎಸ್ ಆಡಳಿತವಿದ್ದಾಗಲೂ ಸಮೀಕ್ಷೆ ನಡೆಸಿತ್ತು!
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 1980ರ ಅರಣ್ಯ ಕಾಯ್ದೆ ಬರುವುದಕ್ಕಿಂತ ಮೊದಲು ಸಂತ್ರಸ್ತರ ಸಮಸ್ಯೆ ಪರಿಹರಿಸಲು ಅವಕಾಶ ಇತ್ತು, ಆದರೆ ಮಾಡಿಲ್ಲ. ಪುನರ್ವಸತಿಗಾಗಿ ಈಗ ಕೆಲಸ ಮಾಡಿದರೆ ಕೇಂದ್ರದ ಪೂರ್ವಾನುಮತಿ ಬೇಕಿದೆ. ಚುನಾವಣಾ ಉದ್ದೇಶಕ್ಕೆ ಕಾಟಾಚಾರಕ್ಕೆ ಡಿನೋಟಿಫಿಕೇಶನ್ ಮಾಡಿದ್ದರಿಂದಾಗಿ ಇಷ್ಟೆಲ್ಲಾ ಸಮಸ್ಯೆ ಆಗಿದೆ. ಕೇಂದ್ರ ಅರಣ್ಯ ಸಚಿವರನ್ನು ಯಡಿಯೂರಪ್ಪ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿದ್ದು, ಪ್ರಸ್ತಾವನೆ ಕಳಿಸಿದರೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಂದಿನ 15-20 ದಿನದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಶೋಕ ನಾಯ್ಕ, ಮಾಜಿ ಶಾಸಕ ವಿ.ಸ್ವಾಮಿರಾವ್ ಮಾತನಾಡಿದರು. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಇದ್ದರು.
ನ.28 ರಂದು ಕಾಂಗ್ರೆಸ್‌ನಿಂದ ಪಾದಯಾತ್ರೆ ಮತ್ತು ಬಹಿರಂಗ ಸಭೆ
ಮಲೆನಾಡಿನಲ್ಲಿ ಅರಣ್ಯ ಹಕ್ಕು ಕಾಯ್ದೆ, ಶರಾವತಿ ಸಂತ್ರಸ್ತರ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಹೋರಾಟ ರೂಪಿಸಿದೆ. ಈ ಸಂಬಂಧ, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನೇರ ಆರೋಪ ಮಾಡುತ್ತಿದೆ. ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಕಾಂಗ್ರೆಸ್ ಜಾಗೃತ ಸಮಿತಿ ರಚನೆ ಮಾಡಿ, ಬೃಹತ್ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ.
ಈ ಸಂಬಂಧ ಶಿವಮೊಗ್ಗದ ಈಡಿಗರ ಭವನದಲ್ಲಿ ನ.15ರಂದು ಮೊದಲ ಜಾಗೃತ ಸಮಿತಿ ಸಭೆ ನಡೆಸಿದ್ದು, ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲಾ, ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಈ ಹೋರಾಟದಲ್ಲಿ ಕಾಂಗ್ರೆಸ್ ತಯಾರಿ ಕೂಡ ನಡೆಸಿದೆ. ಈ ನಿಟ್ಟಿನಲ್ಲಿ ನ. 28 ರಂದು ಸಂತ್ರಸ್ತರ ಪಾದಯಾತ್ರೆ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ.
ಇದನ್ನೂ ಓದಿ | JDS Pancharatna | ಬೇರೆಯವರ ಮನೆ ಮುಂದೆ ಕಾಯುವಂತೆ ಮಾಡಬೇಡಿ ಎಂದ HDK: ಸಿದ್ದರಾಮಯ್ಯ, ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ