Site icon Vistara News

ಮಂಗಳೂರು ಸ್ಫೋಟ | ಉಡುಪಿಗೂ ಬಂದಿದ್ನಾ ಉಗ್ರ ಶಾರಿಕ್; ಕೃಷ್ಣ ಮಠ ಟಾರ್ಗೆಟ್ ಆಗಿತ್ತಾ?

ಮಂಗಳೂರು ಸ್ಫೋಟ

ಉಡುಪಿ: ಮಂಗಳೂರು ಸ್ಫೋಟದ ರೂವಾರಿ ದೇವಾಲಯಗಳ ನಗರಿ ಉಡುಪಿಯಲ್ಲಿ ಓಡಾಡಿದ್ದ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಮಂಗಳೂರು ಪೊಲೀಸರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣ ಮಠಕ್ಕೆ ಶಾರಿಕ್ ಬಂದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ವಿವಿಧೆಡೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಶಾರಿಕ್‌ ಸುತ್ತಾಡಿದ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಥಬೀದಿಯಿಂದ ಮಾಡಿದ ಮೊಬೈಲ್ ಫೋನ್ ಕರೆಯಿಂದ ವಿಷಯ ಬಯಲಿಗೆ ಬಂದಿದೆ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರಿಕ್ ಕೈಯಿಂದ ಮೊಬೈಲ್ ಪಡೆದು ಸಂಬಂಧಿಕರಿಗೆ ಕರೆ ಮಾಡಿದ್ದರು. ತನಿಖೆಯ ವೇಳೆ ಈ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ಹೀಗಾಗಿ ನಗರದಲ್ಲಿ ವಿವಿಧೆಡೆ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಶಾರಿಕ್‌ ಸಂಬಂಧಿತ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ ಎನ್ನಲಾಗಿದೆ.

ಸ್ಯಾಟಲೈಟ್‌ ಫೋನ್ ಸಕ್ರಿಯ
ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ ಪ್ರದೇಶದಲ್ಲಿ ಶಾರಿಕ್‌ನ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದದ್ದು ಕಂಡುಬಂದಿದೆ. ಈ ಬಗ್ಗೆ ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಜಿಲ್ಲಾ ಆಂತರಿಕ ವಿಭಾಗಕ್ಕೆ ಮಾಹಿತಿ ಸಿಕ್ಕಿದೆ. ನ.9ರಂದು ಸ್ಯಾಟಲೈಟ್ ಫೋನ್ ಸಕ್ರಿಯಗೊಂಡಿತ್ತು ಎನ್ನಲಾಗಿದೆ. ಮಂದಾರ್ತಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿ ಫೋನ್‌ ಆ್ಯಕ್ಟಿವ್ ಆಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಇಲ್ಲಿನ ಗೇರುಬೀಜ ಕಾರ್ಖಾನೆ ಬಳಿಯ ಲೊಕೇಶನ್ ಟ್ರೇಸ್ ಆಗಿದೆ.

2020ರಲ್ಲೂ ಜಿಲ್ಲೆಯಲ್ಲಿ ಸ್ಯಾಟಲೈಟ್‌ ಫೋನ್ ಸದ್ದು ಮಾಡಿತ್ತು. ಕೊಲ್ಲೂರು, ಜಡ್ಡಿನಗುಡ್ಡೆ, ಹೆರ್ಮುಂಡೆ ಭಾಗದಲ್ಲಿ ಸ್ಯಾಟಲೈಟ್ ಫೋನ್ ಆಗಿದ್ದ ಬಗ್ಗೆ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಲಭ್ಯವಾಗಿತ್ತು. ಆದರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಗ ಯಾವುದೇ ಪುರಾವೆಗಳು ದೊರಕಿರಲಿಲ್ಲ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಮೈಸೂರಿನಲ್ಲಿ ಹೊಸ ಬಾಡಿಗೆ ನೀತಿ, ಪೊಲೀಸ್‌ ಠಾಣೆಯಿಂದ ಕ್ಲಿಯರೆನ್ಸ್‌ ಸರ್ಟಿಫಿಕೆಟ್‌ ಕಡ್ಡಾಯ!

Exit mobile version