ಶಿವಮೊಗ್ಗ: ಡಿಸಿಸಿ ಬ್ಯಾಂಕ್‌ನ (Shimoga DCC Bank) ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರ ನಿರ್ದೇಶಕ ಸ್ಥಾನ ರದ್ದನ್ನು ನಿಬಂಧಕರ ನ್ಯಾಯಾಲಯವು ತೆರವುಗೊಳಿಸಿದೆ. ಹೀಗಾಗಿ ಅವರು ಮತ್ತೆ ಬ್ಯಾಂಕಿನ ನಿರ್ದೇಶಕರಾಗಲಿದ್ದಾರೆ. ಇದರಿಂದಾಗಿ ಮಂಜುನಾಥ ಗೌಡರಿಗೆ ಮತ್ತೆ ಬ್ಯಾಂಕಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿದೆ.
2020 ರ ಅಕ್ಟೋಬರ್‌ನಲ್ಲಿ ನಿರ್ದೇಶಕ ಸ್ಥಾನವನ್ನು ರದ್ದು ಪಡಿಸಿ ಸಹಕಾರ ಇಲಾಖೆಯ ಜಂಟಿ ನಿಬಂಧಕರು ಹೊರಡಿಸಿದ್ದ ಆದೇಶ ಈಗ ವಜಾಗೊಂಡಿದೆ.
2014 ರಲ್ಲಿ ಡಿಸಿಸಿ ಬ್ಯಾಂಕ್ ಗಾಂಧಿಬಜಾರ್ ಶಾಖೆಯಲ್ಲಿ ನಡೆದ 62.77 ಕೋಟಿ ಮೊತ್ತದ ಚಿನ್ನ ಅಡಮಾನ ಸಾಲದ ಹಗರಣ ಹಿನ್ನೆಲೆಯಲ್ಲಿ ಅವರ ನಿರ್ದೇಶಕ ಸ್ಥಾನವನ್ನು ಮೊದಲಿಗೆ ವಜಾಗೊಳಿಸಲಾಗಿತ್ತು. ಇದನ್ನು ಮಂಜುನಾಥಗೌಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ನಿರ್ದೇಶಕರ ಆದೇಶಕ್ಕೆ ತಡೆ ನೀಡಿತ್ತು. ಹೀಗಾಗಿ ಮತ್ತೆ ಮಂಜುನಾಥ ಗೌಡ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹೈಕೋರ್ಟ್‌ನ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಪ್ರಕರಣದ ವಿಚಾರಣೆಗೆ ಚಿತ್ರದುರ್ಗ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿತ್ತು. ತನಿಖೆಯಲ್ಲಿ ಹಗರಣದ ಕುರಿತು ಮಾಹಿತಿ ಲಭ್ಯವಾಗಿದ್ದರಿಂದ ಮತ್ತೆ ಅವರ ನಿರ್ದೇಶಕತ್ವವನ್ನು ರದ್ದು ಪಡಿಸಲಾಗಿತ್ತಲ್ಲದೆ, ಮುಂದಿನ ಐದು ವರ್ಷ ಯಾವುದೇ ಸಹಕಾರ ಸಂಘದ ಸದಸ್ಯತ್ವ ಪಡೆಯದಂತೆ ಸೂಚಿಸಲಾಗಿತ್ತು. ಈ ಬಗ್ಗೆಯೂ ವಿಚಾರಣೆ ನಡೆಸಿದ್ದ ಹೈಕೋರ್ಟ್ ನಿಬಂಧಕರ ನ್ಯಾಯಾಲಯದಲ್ಲಿಯೇ ಮೇಲ್ಮನವಿ ಸಲ್ಲಿಸುವಂತೆ ಮಂಜುನಾಥಗೌಡರಿಗೆ ಸಲಹೆ ನೀಡಿತ್ತು.
ಹೀಗಾಗಿ ಮಂಜುನಾಥಗೌಡ ನಿಬಂಧಕರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈಗ ಈ ರದ್ದು ಆದೇಶವೂ ವಜಾಗೊಂಡಿದೆ. ಹೀಗಾಗಿ ಮಂಜುನಾಥಗೌಡ ಮತ್ತೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲಿದ್ದು, ಬ್ಯಾಂಕಿನ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಬಹುದಾಗಿದೆ.
ಇದನ್ನೂ ಓದಿ: Shivamogga News: ಸ್ಮಾರ್ಟ್ ಸಿಟಿಗಾಗಿ ಶಿವಮೊಗ್ಗದಲ್ಲಿ ಕನ್ನಡ ಧ್ವಜಕಟ್ಟೆ ತೆರವು; ಹೋರಾಟಗಾರರ ವಿರೋಧ