ಶಿವಮೊಗ್ಗ: ಹಿಂದಿನ ಮೈಸೂರು ಮಹಾರಾಜರ ವೈಭವವನ್ನು ಕಾಣಬೇಕಾದರೆ ಅವರ ಹಾಗೆ ದೂರದರ್ಶಿತ್ವದ ಯೋಜನೆಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ರೂಪಿಸಬೇಕಾಗಿದೆ ಎಂದು ರಾಜವಂಶಸ್ಥ ಯಧುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.
ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜು ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಪ್ರಜೆಗಳ ಸಹಿತ ಆಡಳಿತ ವರ್ಗದವರು ಮೈಸೂರು ಸಂಸ್ಥಾನಕ್ಕಾಗಿ ಕೆಲಸ ಮಾಡುತ್ತಿದ್ದರು. ಅವರು ಅತ್ಯಂತ ಪ್ರಾಮಾಣಿಕತೆ ಹಾಗೂ ಆದರ್ಶಮಯವಾಗಿ ರಾಜರ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದರು. ಹಾಗಾಗಿ ಅಂದು ಮಹಾರಾಜರು ಕಟ್ಟಿದ ಸಂಸ್ಥೆಗಳು ನೂರಾರು ತಲೆಮಾರಿಗೆ ಉಪಯೋಗಕ್ಕೆ ಸಿಗುವಂತಾಗಿದೆ. ಅವರ ದೂರದರ್ಶಿತ್ವದ ಕೊಡುಗೆಗಳು ಶಿವಮೊಗ್ಗದಲ್ಲೂ ಕಾಣಬಹುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸ್ಥಾಪನೆ ಮಾಡಿದ್ದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೂರು ವರ್ಷ ಪೂರೈಸಿ ಇನ್ನೂ ಯಶಸ್ವಿಯಾಗಿ ಮುಂದುವರಿದಿದೆ. ಯಾವ ಬೀಜ ನೆಟ್ಟರೆ ಉತ್ತಮ ಫಲ ಸಿಗುತ್ತದೆ ಎಂಬ ಅರಿವು ಅವರಿಗಿತ್ತು. ಕಾಡು ಮತ್ತು ಪರಿಸರವನ್ನು ಉಳಿಸಿ, ವನ್ಯಜೀವಿಗಳನ್ನು ಸಂರಕ್ಷಿಸಿ, ಯಾರಿಗೂ ಧಕ್ಕೆಯಾಗದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ | Kiccha Sudeep | ನಿಮಗೆ ಫಾಲೋಯಿಂಗ್ ಬೇಕು, ನೆಗೆಟಿವಿಟಿ ಮಾತ್ರ ಬೇಡ ಎಂದರೆ ಹೇಗೆ? ಕಿಚ್ಚ ಸುದೀಪ್ ಪ್ರಶ್ನೆ
ಸಂಸ್ಥೆಗಳನ್ನು ಕಟ್ಟುವಾಗ ನೂರಾರು ವರ್ಷ ಯೋಚನೆ ಮಾಡಿ ಕಟ್ಟಬೇಕಾಗಿದೆ. ಗ್ರಾಮ ಮತ್ತು ನಗರಗಳಲ್ಲಿ ಪರಿಸರವನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಪೂರ್ವಜರ ಪದ್ಧತಿಯನ್ನು ಅನುಸರಿಸಬೇಕು. ಈಗ ಎಲ್ಲರಿಗೂ ಸುಲಭದ ಕೆಲಸ ಕೂಡ ಕಷ್ಟವಾಗಿದೆ. ಮನೆಯಿಂದ ಯಾರೂ ಕೈಚೀಲ ತೆಗೆದುಕೊಂಡು ಹೋಗಲ್ಲ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಸಂಪೂರ್ಣ ನಾಶವಾಗುತ್ತಿದೆ. ದೂರದಲ್ಲಿ ಸುಂದರವಾಗಿ ಕಾಣುತ್ತದೆ. ಹತ್ತಿರ ಬಂದಾಗ ಸ್ವಚ್ಛತೆಯಿಲ್ಲದಿರುವುದು ಗಮನಕ್ಕೆ ಬರುತ್ತದೆ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಈ ಕಾಲದಲ್ಲಿ ಎಲ್ಲರೂ ನಮ್ಮ ರಾಜ್ಯ, ದೇಶ ಬಗ್ಗೆ ಅಭಿಮಾನವಿಟ್ಟು ಕೆಲಸ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಯಧುವೀರ ಒಡೆಯರ್ ಅವರು ಸಂವಾದ ನಡೆಸಿದರು. ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ಡಿವಿಎಸ್ ಸಂಸ್ಥೆಯ ವತಿಯಿಂದ ಒಡೆಯರ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ | Aadhaar Address Change | ಕುಟುಂಬದ ಮುಖ್ಯಸ್ಥರ ವಿಳಾಸ ಬಳಸಿ ನಿಮ್ಮ ಆಧಾರ್ ವಿಳಾಸ ಬದಲಾವಣೆ ಹೇಗೆ? ಹೀಗೆ ಮಾಡಿ