ಶಿವಮೊಗ್ಗ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅನಿರೀಕ್ಷಿತವಲ್ಲ. ಆದರೆ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋತಿದೆ. ಅಲ್ಲದೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಸೋತಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗ ಸಂಚಾಲಕ ಆರ್. ಎಂ. ಮಂಜುನಾಥ್ ಗೌಡ ಹೇಳಿದರು.
ತೀರ್ಥಹಳ್ಳಿ ಆರ್ಯ ಈಡಿಗರ ಸಭಾ ಭವನದಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಹದಗೆಟ್ಟಿದೆ. ರೈತರು ಪರದಾಡುತ್ತಿದ್ದಾರೆ ಯುವಕರಿಗೆ ಉದ್ಯೋಗ ಇಲ್ಲವಾಗಿದೆ. ಅಡಕೆ ಬೆಳೆಗಾರ ಸಂಕಟದಲ್ಲಿದ್ದಾನೆ. ಆದರೆ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನರ ನಿಜವಾದ ಸಮಸ್ಯೆ ಮರೆಸಿ ಕೇವಲ ಧರ್ಮ, ಜಾತಿ ವಿಷಯ ಎತ್ತಿಕೊಂಡು ರಾಜಕೀಯ ಮಾಡುತ್ತಿವೆ. ಆದರೂ ಜನತೆ ಮತ ನೀಡುತ್ತಿರುವುದು ಅಚ್ಚರಿ ಎಂದರು.
ಮುಖ್ಯ ಅತಿಥಿಯಾಗಿದ್ದ ಸಾಗರ ಕ್ಷೇತ್ರದ ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲ ಕೃಷ್ಣ ಮಾತನಾಡಿ, ಮಂಜುನಾಥ್ ಗೌಡರು ಸಹಕಾರ ಕ್ಷೇತ್ರದ ಶಕ್ತಿ. ಅವರ ವಿರುದ್ಧ ನಡೆಸಲಾದ ಎಲ್ಲ ಷಡ್ಯಂತ್ರಗಳನ್ನು ಮೀರಿ ಬೆಳೆದಿದ್ದಾರೆ. ಆದರೂ ಅವರನ್ನು ಮಣಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಅಡಕೆ ಬೆಳೆಗಾರರು ಎಲೆ ಚುಕ್ಕಿ ರೋಗದ ಕಾರಣ ತೀವ್ರ ಸಂಕಟದಲ್ಲಿದ್ದಾರೆ. ಆದರೆ ಬೊಮ್ಮಾಯಿ ಸರ್ಕಾರ ಕೇವಲ ಸುಳ್ಳು ಆಶ್ವಾಸನೆ ನೀಡುತ್ತ ಕಾಲ ಕಳೆಯುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಳೆ ರೋಗ ಪರಿಹಾರಕ್ಕೆ 90 ಕೋಟಿ ರೂ. ನೀಡಿತ್ತು. ಆದರೆ ಈಗಿನ ಸರ್ಕಾರ ಕೇವಲ 19 ಲಕ್ಷ ರೂ. ನೀಡಿ ಕೈತೊಳೆದುಕೊಂಡಿದೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲ ಶೆಟ್ಟಿ, ಮಟ್ಟಿನಮನೆ ರಾಮಚಂದ್ರ, ಕಾಂಗ್ರೆಸ್ ಮುಖಂಡರಾದ ಬಂಡಿ ರಾಮಚಂದ್ರ, ಹಾರೋಗೋಳಿಗೆ ಪದ್ಮನಾಭ, ಸಹಕಾರ ಧುರೀಣರಾದ ವಿದ್ಯಾಧರ, ಜಗದೀಶ್, ದುಗ್ಗಪ್ಪ ಗೌಡ, ಕೊಲ್ಲೂರಯ್ಯ, ಕಾಂಗ್ರೆಸ್ ಮುಖಂಡರಾದ ಪಲ್ಲವಿ, ಜಿನಾ ವಿಕ್ಟರ್, ಶ್ರುತಿ ವೆಂಕಟೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ | Shahrukh Khan | ಮೆಕ್ಕಾ ಬಳಿಕ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶಾರುಖ್ ಖಾನ್: ವಿಡಿಯೊ ವೈರಲ್!