Site icon Vistara News

Shimogga tense| ಮಾಹಿತಿ ಪಡೆದ ಸಿಎಂ, ಎಸ್‌ಡಿಪಿಐ ಆರೋಪಿಗಳನ್ನು ಉಗ್ರರೆಂದು ಪರಿಗಣಿಸಲು ನಳಿನ್‌ ಆಗ್ರಹ

nalin kumar kateel 3

ಬೆಂಗಳೂರು: ಶಿವಮೊಗ್ಗದಲ್ಲಿ ಸಂಭವಿಸಿದ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ವಿವಾದಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಶಿವಮೊಗ್ಗ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಎಸ್‌ಡಿಪಿಐ ಸೇರಿದ ಆರೋಪಿಗಳನ್ನು ಉಗ್ರರೆಂದು ಎಂದು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡ ಬಳಿಕ ಡಿಜಿ ಐಪಿಪಿ ಪ್ರವೀಣ್‌ ಸೂದ್‌ ಅವರ ಜತೆ ಫೋನ್‌ನಲ್ಲಿ ಮಾತನಾಡಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿದರು ಎಂದು ಗೊತ್ತಾಗಿದೆ.

ಕಟೀಲ್‌ ಕೆಂಡಾಮಂಡಲ
ವೀರ್‌ ಸಾವರ್ಕರ್‌ ಅವರ ವಿಚಾರದಲ್ಲಿ ಎಸ್‌ಡಿಪಿಐ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೆಂಡಾಮಂಡಲರಾಗಿದ್ದಾರೆ. ʻʻದೇಶದ ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ಅತಿ ಹೆಚ್ಚು ಶಿಕ್ಷೆ ಅನುಭವಿಸಿದ್ದವರು ವೀರ ಸಾವರ್ಕರ್. ಎರಡೆರಡು ಬಾರಿ ಕರಿ ನೀರು ಶಿಕ್ಷೆಗೆ ಒಳಗಾಗಿದ್ದ ಸಾವರ್ಕರ್‌ ಇದಕ್ಕಾಗಿ ಮನೆ, ಸಂಬಂಧಗಳನ್ನೆಲ್ಲ ಕಳೆದುಕೊಂಡವರು. ಸ್ವಾತಂತ್ರ್ಯನಂತರ ನೆಹರು ಪ್ರಧಾನಿಯಾಗಿದ್ದಾಗ ಸಾವರ್ಕರ್‌ರನ್ನು ಎರಡು ಬಾರಿ ಬಂಧಿಸಲಾಗಿತ್ತುʼʼ ಎಂದು ನೆನಪಿಸಿಕೊಂಡ ಅವರು, ಎಸ್‌ಡಿಪಿಐ ಕಾರ್ಯಕರ್ತರು ಸಾವರ್ಕರ್ ಫ್ಲೆಕ್ಸ್ ಕೆಳಗಿಳಿಸಿದ್ದಲ್ಲದೆ ಭಾರತದ ಧ್ವಜವನ್ನು ನೆಲಕ್ಕೆ ಹಾಕಿದ್ದಾರೆ. ಇಂಥವರನ್ನು ಉಗ್ರರೆಂದು ಗುರುತಿಸಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಎಸ್‌ಡಿಪಿಐ ನಿಷೇಧಕ್ಕೆ ಯತ್ನ
ಎಸ್‌ಡಿಪಿಐ ಸಂಘಟನೆ ಹಿಂದೆ ಕಾಂಗ್ರೆಸ್‌ ಇದೆ ಎಂದು ಅವರು ಆರೋಪಿಸಿದರು. ಇದೊಂದು ರಾಜಕೀಯ ಪಕ್ಷವಾಗಿದ್ದು, ಅದನ್ನು ನಿಷೇಧಿಸಲು ದಾಖಲೆಗಳು ಬೇಕಾಗುತ್ತವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ದಾಖಲೆಗಳನ್ನು ಸಂಗ್ರಹಿಸುತ್ತಿವೆ. ಇದರ ಬಗ್ಗೆ ಸರಕಾರ ಗಂಭೀರವಾಗಿವೆ ಎಂದರು ನಳಿನ್‌.

ಶಿವಮೊಗ್ಗದಲ್ಲಿ ಏನಾಗಿದೆ?
ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತದಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ದಿನಕ್ಕೆ ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕಲಾಗುತ್ತದೆ. ಈ ಬಾರಿ ಅದಕ್ಕಿಂತ ಮೊದಲೇ ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ದು ಮುಸ್ಲಿಮರನ್ನು ಕೆರಳಿಸಿತ್ತು. ಸಾವರ್ಕರ್‌ ಫ್ಲೆಕ್ಸ್‌ ತೆಗೆದು ಟಿಪ್ಪು ಫ್ಲೆಕ್ಸ್‌ ಹಾಕಲು ಹೋದಾಗ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಬಳಿಕ ಪೊಲೀಸರು ಬಂದು ಎರಡೂ ಫ್ಲೆಕ್ಸ್‌ಗಳನ್ನು ತೆಗೆಸಿದ್ದಾರೆ. ಆ ಬಳಿಕ ನಗರದಲ್ಲಿ ಇಬ್ಬರು ಅಮಾಯಕ ಯುವಕರ ಮೇಲೆ ಚೂರಿಯಿಂದ ಇರಿಯಲಾಗಿದೆ.‌

ಇದನ್ನೂ ಓದಿ |Shivamogga Clash | ಶಿವಮೊಗ್ಗ ಉದ್ವಿಗ್ನ; ಹಲವೆಡೆ ಹೈ ಅಲರ್ಟ್‌

Exit mobile version