ಬೆಂಗಳೂರು: ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಸುಮಾರು ೧ ಗಂಟೆ ಕಡಿಮೆಗೊಳಿಸಬಲ್ಲ ಮತ್ತು ಸರಕು ಸಾಗಣೆಗೆ ಭಾರಿ ಅನುಕೂಲಕಾರಿಯಾದ ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆಗೆ ಮತ್ತೆ ಜೀವ ಬಂದಿದೆ. ಕಳೆದ ಅಧಿವೇಶನ ಸಂದರ್ಭದಲ್ಲಿ ನೀಡಲಾದ ಒಂದು ಉತ್ತರದಲ್ಲಿ ಇದು ಕಾರ್ಯಸಾಧು ಯೋಜನೆಯಲ್ಲ ಎಂಬ ಅಭಿಪ್ರಾಯ ಮೂಡಿತ್ತು. ಆದರೆ, ಈಗ ಅದೇ ಕೇಂದ್ರ ಹೆದ್ದಾರಿ ಖಾತೆ ಸಚಿವರು ನೀಡಿರುವ ಇನ್ನೊಂದು ಉತ್ತರದಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಸೆಯನ್ನು ಜೀವಂತವಾಗಿಡಲಾಗಿದೆ.
ನಳಿನ್ ಕುಮಾರ್ ಅವರಿಗೆ ಬಂದ ಪತ್ರದಲ್ಲಿ ಏನಿದೆ?
ಶಿರಾಡಿ ಘಾಟಿ ರಸ್ತೆ ಅಭಿವೃಧ್ಧಿಗೆ ಸಂಬಂಧಿಸಿ ಕೇಂದ್ರ ಸಚಿವರು ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಬರೆದಿರುವ ಪತ್ರದಲ್ಲಿ ರಸ್ತೆ ದುರಸ್ತಿ ಮತ್ತು ಸುರಂಗ ಮಾರ್ಗದ ಉಲ್ಲೇಖಗಳಿವೆ.
ಶಿರಾಡಿ ಘಾಟ್ ವಿಭಾಗದ ಮಾರನಹಳ್ಳಿ ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು ರೂ. 1976 ಕೋಟಿ ಮೊತ್ತದ ಬಿಡ್ ನ್ನು ಆಹ್ವಾನಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಇವರಿಗೆ ಬರೆದ ಪತ್ರದಲ್ಲಿ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಚತುಷ್ಪಥ ಕಾಮಗಾರಿ ಒಟ್ಟಿಗೆ ಮಂಗಳೂರು- ಬೆಂಗಳೂರು ನಡುವಿನ ಸಂಚಾರಕ್ಕೆ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲಿರುವ ಶಿರಾಡಿ ಘಾಟ್ ಟನಲ್ ಯೋಜನೆಯನ್ನು ರೂ. 15,000 ಕೋಟಿ ವೆಚ್ಚದಲ್ಲಿ 23 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಏಪ್ರಿಲ್, 2023 ರೊಳಗೆ ಡಿಪಿಆರ್ ಅನ್ನು ಅಂತಿಮಗೊಳಿಸಿ ಮತ್ತು ಮೇ, 2023 ರಲ್ಲಿ ಬಿಡ್ ಗಳನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಸಕಲೇಶಪುರದಿಂದ ಮಾರನಹಳ್ಳಿಯ ಭಾಗದ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕೂಡಲೆ ದುರಸ್ತಿ ಮಾಡಲು ನಿರ್ಧರಿಸಲಾಗಿದ್ದು, .ದುರಸ್ತಿ ಕಾಮಗಾರಿಗೆ ರೂ. 12.20 ಕೋಟಿ ಬಿಡ್ ನ ಮೌಲ್ಯಮಾಪನ ಮಾಡಲಾಗುತ್ತಿದೆ. ಅಲ್ಲದೆ, ಅಸ್ತಿತ್ವದಲ್ಲಿರುವ ರಸ್ತೆ ನಿರ್ವಹಣೆಗೆ ಗುತ್ತಿಗೆದಾರರು ಪ್ಯಾಚ್ ವರ್ಕ್ ದುರಸ್ತಿಗೆ ಮುಂದಾಗಿದ್ದಾರೆ ಎಂದು ಗಡ್ಕರಿಯವರು ನಳಿನ್ ಕುಮಾರ್ ಕಟೀಲ್ ಇವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುರಂಗ ಮಾರ್ಗ ಯೋಜನೆ ಕಾರ್ಯಸಾಧುವಲ್ಲ ಎಂದು ಈ ಹಿಂದಿನ ಉತ್ತರದಲ್ಲಿ ಹೇಳಿದ್ದ ಗಡ್ಕರಿ ಅವರು ತುರ್ತಾಗಿ ಮತ್ತೆ ಡಿಪಿಆರ್ ಮಾತು ಆಡಿದ್ದಾರೆ. ಇದರ ಹಿನ್ನೆಲೆ ಏನು ಎನ್ನುವುದು ಸ್ಪಷ್ಟವಾಗಲಿಲ್ಲ.
ಇದನ್ನೂ ಓದಿ | Shiradi ghat | ಶಿರಾಡಿ ಘಾಟಿ ರಸ್ತೆ ಅವ್ಯವಸ್ಥೆ: ವಾರದಲ್ಲಿ ವಿಶೇಷ ಸಭೆ ಕರೆದು ಪರಿಹಾರ ಎಂದ ಸಿಎಂ ಬೊಮ್ಮಾಯಿ