ಉಡುಪಿ: ಗ್ರಾಮ ಪಂಚಾಯಿತಿಗಳು, ಊರಿನ ಜನ ಮನಸು ಮಾಡಿದರೆ ಎಂಥ ಕ್ರಾಂತಿಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಉದಾಹರಣೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದ ಅಂಗನವಾಡಿಯಲ್ಲಿ ಆಗಿರುವ ಬದಲಾವಣೆ. 35 ವರ್ಷದ ಹಿಂದೆ ನಿರ್ಮಾಣವಾಗಿದ್ದ ಅಂಗನವಾಡಿ ಕಟ್ಟಡ ಶಿಥಿಲವಾಗಿದ್ದರಿಂದ ಊರಿನ ಜನರೇ ಸರಕಾರದ ಜತೆ ಕೈಜೋಡಿಸಿ ಎಲ್ಲರ ಕಣ್ಮನ ಸೆಳೆಯುವ ಚಂದದ ಸೌಧವೊಂದು ಎದ್ದು ನಿಲ್ಲುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿರುವ ಸೌಲಭ್ಯಗಳನ್ನು ನೋಡಿದರೆ ಯಾವ ಖಾಸಗಿ ಪ್ರಿಸ್ಕೂಲ್‌ಗಿಂತಲೂ ಕಡಿಮೆ ಏನಿಲ್ಲ. ಹೌದು, ಶಿರ್ವ ಅಂಗನವಾಡಿ ಈಗ ಹೈಟೆಕ್ ಆಗಿದೆ.
ಸ್ಥಳೀಯ ದಾನಿಗಳಾದ ದಿ. ಅಚ್ಯುತ ಕಾಮತ್ ಅವರು ಗ್ರಾ.ಪಂ.ಗೆ ದಾನವಾಗಿ ನೀಡಿದ ಆರು ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಿದ್ದ ಅಂಗನವಾಡಿ ಕಟ್ಟಡ ತೀರಾ ಜೀರ್ಣಾವಸ್ಥೆಗೆ ಬಂದಿತ್ತು. ಈ ಅಂಗನವಾಡಿ ಕಟ್ಟಡಕ್ಕೆ ಹೊಸ ರೂಪ ನೀಡಲು ಸಂಕಲ್ಪ ಮಾಡಿದ್ದು ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರಾದ ಕೆ.ಆರ್. ಪಾಟ್ಕರ್. ಅವರು ಕಳೆದ ಆರು ವರ್ಷಗಳಿಂದ ಪ್ರಯತ್ನಿಸಿ ಈಗ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಮುಖ ಕಾರಣರಾಗಿದ್ದಾರೆ.
ಹೊಸ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 16.5 ಲಕ್ಷ ರೂ. ನೀಡಿ ಹೊಸ ರೂಪಕ್ಕೆ ಬುನಾದಿಯಾಗಿದೆ. ಬಹುಶಃ ಅಷ್ಟಕ್ಕೇ ಸುಮ್ಮನಿದ್ದರೆ ಅಲ್ಲಿ ಮತ್ತೊಂದು ಕಟ್ಟಡ ನಿರ್ಮಾಣವಾಗಿರುತ್ತಿತ್ತು ಅಷ್ಟೆ. ಆದರೆ, ಅಷ್ಟೇ ಸಾಲದು. ಮಕ್ಕಳು ಕಲಿಯುವ ಜಾಗ ಜೀವಂತಿಕೆಯಿಂದ ನಳನಳಿಸಬೇಕು, ಖಾಸಗಿ ಶಾಲೆಗಳಲ್ಲಿ ಇರುವಂತೆಯೇ ಆಧುನಿಕ ಸೌಲಭ್ಯಗಳೂ ಇರಬೇಕು ಎಂದು ಬಯಸಿದರು ಪಾಟ್ಕರ್. ಅದಕ್ಕಾಗಿ ಅವರು ಮೊರೆ ಹೋಗಿದ್ದು ಊರಿನ ಜನರನ್ನು.
ದೇಶ ವಿದೇಶಗಳಲ್ಲಿ ನೆಲೆಸಿರುವ ತನ್ನ ಸ್ನೇಹಿತರು, ಪರಿಸರದ ಸಂಘಸಂಸ್ಥೆಗಳಿಂದ ಸಹಕಾರವನ್ನು ಕೋರಿದರು. ವಾಟ್ಸ್ ಆಪ್ ಮೂಲಕ ಸಂದೇಶಗಳನ್ನು ಮನೆ ಮನೆಗೆ ಕಳುಹಿಸಿದರು. ಪಾಟ್ಕರ್ ಅವರ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಬೆಂಬಲವೂ ದೊರೆಯಿತು. ಲೋಕೋಪಯೋಗಿ ಇಲಾಖೆಯ 16.5 ಲಕ್ಷ ರೂ.ಗೆ ಸ್ಥಳೀಯವಾಗಿ ಕೊಡುಗೆಯಾಗಿ ದೊರೆತದ ನಾಲ್ಕು ಲಕ್ಷ ರೂ. ಜತೆಯಾಗಿ ಕ್ರಾಂತಿಗೆ ಸಾಧ್ಯವಾಯಿತು. ಒಟ್ಟು 20.5 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ತಲೆ ಎತ್ತಿ ನಿಲ್ಲುವಂತಾಯಿತು.
ಏನೇನಿದೆ ಅಂಗನವಾಡಿಯಲ್ಲಿ?
ಅಂಗನವಾಡಿ ಕಟ್ಟಡದ ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದೆ. ಕೊಠಡಿಗಳು ಹವಾ ನಿಯಂತ್ರಿತ ವ್ಯವಸ್ಥೆಯಿಂದ ತಂಪಾಗಿವೆ. ಗೋಡೆ ಬರಹ, ಕಾರ್ಟೂನ್ ಚಿತ್ರಗಳು ಮಕ್ಕಳ ಕಲ್ಪನಾ ಶಕ್ತಿಯನ್ನು ಹಿಗ್ಗಿಸುತ್ತಿವೆ. ಕೇಬಲ್ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾರ್ಟೂನ್ ನೋಡುವ ಭಾಗ್ಯ ಸಿಕ್ಕಿದೆ. ಹೈಟೆಕ್ ಪ್ರಿಸ್ಕೂಲ್ ಲ್ಲಿರುವ ಬಹುತೇಕ ಎಲ್ಲಾ ವ್ಯವಸ್ಥೆಗಳನ್ನು ಈ ಅಂಗನವಾಡಿಯಲ್ಲಿ ಕಲ್ಪಿಸಲಾಗಿದೆ.
ಅಂಗನವಾಡಿ ಸುತ್ತ ಪುಟ್ಟ ಕೈತೋಟವಿದ್ದು, ಅದರಲ್ಲಿ ಒಳಗಿರುವ ಮಕ್ಕಳಷ್ಟೇ ಸುಂದರವಾದ ಹೂವುಗಳು ಅರಳುತ್ತವೆ. ಜತೆಗೆ ತರಕಾರಿಗಳನ್ನು ಬೆಳೆಯಲಾಗುತ್ತದೆ. ಬೆಳೆದ ತರಕಾರಿಗಳು ಮಕ್ಕಳ ಆರೋಗ್ಯ ಸುಧಾರಣೆಗೂ ಸಹಕಾರಿ ಆಗುತ್ತಿವೆ.
ಈ ಎಲ್ಲ ಸಾಧನೆಯ ಹಿಂದೆ ಇರುವ ಇನ್ನೂ ಮೂವರು ಶಕ್ತಿಗಳೆಂದರೆ, ಅಂಗನವಾಡಿ ಕಾರ್ಯಕರ್ತೆ ವಿನಯಾ ಹರೀಶ್ ಕುಂದರ್, ಸಹಾಯಕಿ ಸಂಧ್ಯಾ ಆಚಾರ್ಯ ಮತ್ತು ಮೇಲ್ವಿಚಾರಕಿ ಶೈಲಾ ಅವರು.
ಇದನ್ನೂ ಓದಿ: ಸುಸಜ್ಜಿತ ಸ್ಮಾರ್ಟ್ ಅಂಗನವಾಡಿ ನಿರ್ಮಾಣ: ಮಕ್ಕಳು ಫುಲ್ ಹ್ಯಾಪಿ ಹ್ಯಾಪಿ