ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ನಿರ್ಮಿಸಿರುವ ಶಿವಾಜಿ ಪ್ರತಿಮೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು, ಧಾರ್ಮಿಕ ವಿಧಿ ವಿಧಾನದಂತೆ ಪ್ರತಿಮೆಯನ್ನು (Shivaji Statue) ಉದ್ಘಾಟನೆ ಮಾಡಿಲ್ಲ ಎಂದು ಆರೋಪಿಸಿರುವ ಎಂಇಎಸ್ ಮುಖಂಡರು, ಭಾನುವಾರ ಪ್ರತಿಮೆ ಶುದ್ಧೀಕರಣ ಕಾರ್ಯ ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾರ್ಚ್ 2ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ನಂತರ ಮಾ.5ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಮೆಯನ್ನು ಮರು ಲೋಕಾರ್ಪಣೆ ಮಾಡಿದ್ದರು. ಇದೀಗ ಶಿವಾಜಿ ಮಹಾರಾಜರ ಪ್ರತಿಮೆ ಶುದ್ಧೀಕರಣ ಹೆಸರಲ್ಲಿ ಎಂಇಎಸ್ ಕಾರ್ಯಕ್ರಮ ಮಾಡಿದೆ.
ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿ ಪಡೆದಿದ್ದ ಎಂಇಎಸ್ ಮುಖಂಡರು ಪ್ರತಿಮೆ ಶುದ್ಧೀಕರಣ ಮಾಡಿದ್ದಾರೆ. ಶಿವಾಜಿ ಬೃಹತ್ ಪ್ರತಿಮೆಗೆ ಕ್ಷೀರಾಭಿಷೇಕ ನೆರವೇರಿಸದಂತೆ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಚಿಕ್ಕ ಉತ್ಸವ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಿ ಶುದ್ಧೀಕರಣ ಮಾಡಲಾಗಿದೆ.
ಇದನ್ನೂ ಓದಿ | Tippu Sulthan: ಮೊದಲು ಬೋರೇಗೌಡನನ್ನು ನೋಡಿ; ಆಮೇಲೆ ಉರಿಗೌಡ-ನಂಜೇಗೌಡ ಎಂದ ಎಚ್.ಡಿ.ಕೆ
ಶುದ್ಧೀಕರಣ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ರಾಯಗಡದಿಂದ ಅರ್ಚಕರನ್ನು ಕರೆತರಲಾಗಿತ್ತು. ಹಾಗೆಯೇ ಮಹಾರಾಷ್ಟ್ರದ ಪಂಡರಾಪುರದ ಚಂದ್ರಭಾಗಾ, ಭೀಮಾ, ಭಾಮಾ, ಇಂದ್ರಾಯಣಿ, ರಾಜಹಂಸಗಡ ರಾಮಶೇಜ ಸಾಲ್ಹೇರ, ಪನ್ಹಾಳಗಡ, ರಾಯಗಡ, ಗಂಗಾಸಾಗರದಿಂದ ಜಲವನ್ನು ತಂದು ಶಿವಾಜಿ ಉತ್ಸವ ಮೂರ್ತಿಗೆ ಅಭಿಷೇಕ ಹಾಗೂ ಪೂಜೆಯನ್ನು ನಡೆಸಲಾಯಿತು. ಈ ವೇಳೆ ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್, ಮಹಾನಗರ ಪಾಲಿಕೆ ಸದಸ್ಯ ರವಿ ಸಾಳುಂಕೆ ಸೇರಿ ನೂರಾರು ಎಂಇಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.