ಬೆಂಗಳೂರು: ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಆರೋಪದಡಿ ಶಿವಾಜಿನಗರದ ಮಹಿಳಾ ಠಾಣೆಯ (Shivajinagar Police Station) ಇನ್‌ಸ್ಪೆಕ್ಟರ್ ಸುಮಾ (Inspector Suspended) ಅಮಾನತಾಗಿದ್ದಾರೆ. ಅಮಾನತು ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಇನ್‌ಸ್ಪೆಕ್ಟರ್ ಸುಮಾ ಯಾವುದೇ ಪ್ರಕರಣ ಇದ್ದರೂ ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದರು ಎಂಬ ಆರೋಪವು ಇದೆ. ಹಣ ಕೊಟ್ಟರಷ್ಟೇ ಕೆಲಸ ಆಗುತ್ತೆ ಎಂದು ಹೇಳುತ್ತಿದ್ದರು. ಈ ಹಿಂದೆ ಡಿಸಿಪಿ ಭೀಮಾಶಂಕರ್ ಗುಳೇದ್ ಕೂಡ ಸುಮಾ ಅವರಿಗೆ ಎಚ್ಚರಿಕೆ ನೀಡಿದ್ದರೂ, ಕ್ಯಾರೆ ಎಂದಿರಲಿಲ್ಲ. ಮಾತ್ರವಲ್ಲದೆ, ಹಿರಿಯ ಅಧಿಕಾರಿಗಳು ಬಗೆಹರಿಸಲು ಸೂಚಿಸಿದ ಪ್ರಕರಣಗಳಲ್ಲೂ ಸಹ ಹಣದ ಬೇಡಿಕೆಯನ್ನು ಇಡುತ್ತಿದ್ದರು ಎಂದು ಕೂಡ ಆರೋಪ ಕೇಳಿ ಬಂದಿದೆ. ಸದ್ಯ, ಹಿರಿಯ ಅಧಿಕಾರಿಗಳ ಜತೆ ದುರ್ವರ್ತನೆ ಹಾಗೂ ಲಂಚ ಆರೋಪ, ಕರ್ತವ್ಯ ಲೋಪದ ಕಾರಣದಿಂದಾಗಿ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಇದೆಂಥ ಅನ್ಯಾಯ! ಹುಟ್ಟುಹಬ್ಬದ ಕೇಕ್ ಕತ್ತರಿಸಲು ರೆಡಿಯಾಗಿದ್ದ ಬಾಲಕ ಕಾಂಪೌಂಡ್ ಕುಸಿದು ದುರ್ಮರಣ
ಪಿಎಸ್‌ಐ ಸವಿತಾ ಕೇಸ್‌ನಲ್ಲೂ ಶಾಮೀಲು ಶಂಕೆ
ಈ ಹಿಂದೆ ಆರೋಪಿಯೊಬ್ಬರ ನಿರೀಕ್ಷಣಾ ಜಾಮೀನು ಪ್ರಕ್ರಿಯೆಗೆ ಆಕ್ಷೇಪ ಸಲ್ಲಿಸದಿರಲು, ಪಿಎಸ್‌ಐ ಸವಿತಾ ಕನಮಡಿ 20 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ದೂರುದಾರರು ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದರು. ಕೊನೆಗೆ 10 ಸಾವಿರ ರೂಪಾಯಿ ನೀಡುವಂತೆ ಪಿಎಸ್‌ಐ ಸವಿತಾ ಕೇಳಿದ್ದರು.
ಈ ಬಗ್ಗೆ ಲೋಕಾಯುಕ್ತಕ್ಕೆ ಅನಂತ್ ಕುಮಾರ್ ಎಂಬುವವರು ದೂರು ನೀಡಿದ್ದರು. ಲಂಚ ಸ್ವೀಕರಿಸುತ್ತಿದ್ದಾಗಲೇ ಮಹಿಳಾ ಪಿಎಸ್ಐ ಸೇರಿ ಮೂವರು ಪೊಲೀಸರು ಲೋಕಾಯುಕ್ತ ಅಧಿಕಾರಿಗಳಿಗೆ (Lokayukta Raid) ಸಿಕ್ಕಿಬಿದ್ದಿದ್ದರು. ಈ ಕೇಸ್‌ನಲ್ಲೂ ಇನ್‌ಸ್ಪೆಕ್ಟರ್ ಸುಮಾ ಹೆಸರು ಕೇಳಿ ಬಂದಿತ್ತು, ಈಗ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ