ತುಮಕೂರು: ಫೆಬ್ರವರಿ ೨೧ರಂದು ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಅಧಿಕೃತವಾಗಿ ದಾಸೋಹ ದಿನವನ್ನು ಆಚರಣೆ ಮಾಡುತ್ತೇವೆ. ಇದನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾಗಿ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ಮಹಾ ಶಿವಯೋಗಿಗಳ 4ನೇ ವರ್ಷದ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದು, ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಬಳಿಕ ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪರಮಪೂಜ್ಯರ ಗದ್ದುಗೆಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದಿದ್ದೇನೆ. ಅವರು ಹಸಿದವರಿಗೆ ಅನ್ನ ನೀಡಿದವರು. ಈ ನಿಟ್ಟಿನಲ್ಲಿ ಸರ್ಕಾರದಿಂದ ದಾಸೋಹ ದಿನವನ್ನು ಆಚರಣೆ ಮಾಡಲಾಗುತ್ತದೆ. ಆದರೆ, ಅಂದು ಸಾರ್ವತ್ರಿಕ ರಜೆ ಇರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Elephant attack | ಪಟಾಕಿ ಸಿಡಿಸಿ ಓಡಿಸಲು ಯತ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನೇ ಬೆನ್ನಟ್ಟಿದ ಕಾಡಾನೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕು ವೀರಾಪುರದಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ವೀರಾಪುರಕ್ಕೆ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಪುನಃ ಆರಂಭಿಸಲಾಗುವುದು ಎಂದು ಹೇಳಿದರು.
ಅದ್ಧೂರಿ ಚಾಲನೆ
ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಮುಂಜಾನೆ 5.30ರಿಂದಲೇ ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆ ಹಾಗೂ ಇತರೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿವೆ. ಬೆಳಗ್ಗೆ 8 ಗಂಟೆಗೆ ಬೆಳ್ಳಿರಥದಲ್ಲಿ ಪೂಜ್ಯರ ಪುತ್ಥಳಿಯನ್ನಿಟ್ಟು ಮಠದ ಆವರಣದಲ್ಲಿ ಭಕ್ತರು ಹಾಗೂ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಯಿತು.
ದಾಸೋಹ ದಿನ
ಕೊರೊನಾ ಕಾರಣದಿಂದಾಗಿ ಕಳೆದ ಮೂರು ವರ್ಷ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಂಸ್ಮರಣೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಆಯೋಜಿಸಲು ಶ್ರೀ ಮಠವು ಸಿದ್ಧವಾಗಿದ್ದು, ಭಕ್ತರು ಕೈಜೋಡಿಸಿದ್ದಾರೆ. ಇದಲ್ಲದೆ, ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ರಾಜ್ಯ ಸರ್ಕಾರವು ಕಳೆದ ವರ್ಷವೇ ಘೋಷಿಸಿತ್ತು. ಈ ಕಾರಣದಿಂದ ಮಠದ ಭಕ್ತರು, ಅಭಿಮಾನಿಗಳು ಮತ್ತು ಹಳೇ ವಿದ್ಯಾರ್ಥಿಗಳು ನಾಡಿನಾದ್ಯಂತ ದಾಸೋಹ ದಿನವನ್ನಾಗಿ ಆಚರಿಸುತ್ತಿದ್ದಾರೆ.
ಇದನ್ನೂ ಓದಿ | Kashi Vishwanath Temple | ಪಾಪಗಳನ್ನ ತೊಳೆದು ಸರಿ ಮಾರ್ಗದಲ್ಲಿ ನಡೆಸುತ್ತಾನೆ!
ಈ ಪುಣ್ಯಸ್ಮರಣೆ ಸಮಾರಂಭಕ್ಕೆ ಮಠದ ಭಕ್ತವೃಂದ, ಅಭಿಮಾನಿಗಳು, ಹಳೇ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಸೇರಿ 5 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದ್ದು, ಈಗಾಗಲೇ ಲಕ್ಷಾಂತರ ಮಂದಿ ಶ್ರೀಮಠದತ್ತ ದಾವಿಸಿದ್ದಾರೆ. ಕೈಗಾರಿಕಾ ವಸ್ತು ಪ್ರದರ್ಶನದ ಆವರಣ, ಸಾದರ ಕೊಪ್ಪಲು, ಕೆಂಪಹೊನ್ನಯ್ಯ ಅತಿಥಿ ಗೃಹ , ಹೊಸ ಪ್ರಸಾದ ನಿಲಯ, ಹಳೇ ಪ್ರಸಾದ ನಿಲಯ ಹೀಗೆ ಐದು ಕಡೆ ಪ್ರಸಾದದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳಿಗೆ ಉಣಬಡಿಸಲು ವಿಶೇಷ ಖಾದ್ಯವನ್ನು ಕಳೆದ ಮೂರು ದಿನದಿಂದ ಬಾಣಸಿಗರ ತಂಡ ತಯಾರು ಮಾಡುತ್ತಿದೆ. 50 ಕ್ವಿಂಟಾಲ್ ಖಾರಾ ಬೂಂದಿ ಮತ್ತು 50 ಕ್ವಿಂಟಾಲ್ ಸಿಹಿ ಬೂಂದಿ ಸಿದ್ಧವಾಗಿದೆ.
ಪೊಲೀಸ್ ಬಿಗಿಭದ್ರತೆ
ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಬಂದೋಬಸ್ತ್‌ಗಾಗಿ 4 ಡಿವೈಎಸ್‌ಪಿ, 10 ಇನ್ಸ್‌ಪೆಕ್ಟರ್, 20 ಸಬ್ ಇನ್ಸ್‌ಪೆಕ್ಟರ್ ಸೇರಿ ಒಟ್ಟು 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಶಾಸಕ ಜ್ಯೋತಿ ಗಣೇಶ್ ಮತ್ತಿತರರು ಆಗಮಿಸಿದ್ದಾರೆ.
ಇದನ್ನೂ ಓದಿ | Vande Bharat Express: ದೇಶದ 7ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಮತ್ತು ಕಲ್ಲು ತೂರಾಟ; ಪುಡಿಯಾಯ್ತು ಗಾಜು