Site icon Vistara News

Karnataka Election 2023: ಅರಸೀಕೆರೆ ಜೆಡಿಎಸ್‌ ಶಾಸಕತ್ವಕ್ಕೆ ಶಿವಲಿಂಗೇಗೌಡ ರಾಜೀನಾಮೆ; ಶೀಘ್ರ ಕಾಂಗ್ರೆಸ್‌ ಸೇರ್ಪಡೆ

Shivalingegowda resigns as Arsikere JDS mla Joining Congress soon Karnataka Elections 2023 updates

ಶಿರಸಿ/ಹಾಸನ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ರಾಜಿನಾಮೆ ಪರ್ವ ಆರಂಭವಾಗಿದ್ದು, ಅರಸಿಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ (KM Shivalinge gowda) ಭಾನುವಾರ (ಏ. 2) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಹಾಸನದಿಂದ‌ 300ಕ್ಕೂ ಹೆಚ್ಚಿನ ಬೆಂಗಲಿಗರೊಂದಿಗೆ ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷರ ಕಚೇರಿಗೆ ಆಗಮಿಸಿದ ಅವರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡುತ್ತಿರುವ ಶಿವಲಿಂಗೇಗೌಡ

ಜೆಡಿಎಸ್‌ನಿಂದ ಮಾನಸಿಕವಾಗಿ ದೂರಾಗಿದ್ದ ಶಿವಲಿಂಗೇಗೌಡ

ಕಳೆದ ಕೆಲವು ತಿಂಗಳುಗಳಿಂದ ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿ, ಮುಂದಿನ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಎದುರಿಸಲು ಸಿದ್ಧತೆ ನಡೆಸಿಕೊಂಡಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಜೆಡಿಎಸ್‌ ಜತೆಗಿನ ತಮ್ಮ ರಾಜಕೀಯ ಪ್ರಯಾಣವನ್ನು ಕೊನೆಗೊಳಿಸಿದರು.

ಇದನ್ನೂ ಓದಿ: Karnataka Election 2023: ಗುಬ್ಬಿ ಸಂಭಾವ್ಯ ಕೈ ಅಭ್ಯರ್ಥಿ ಎಸ್.ಆರ್. ಶ್ರೀನಿವಾಸ್‌ಗೆ ಜೆಡಿಎಸ್‌ ಪ.ಪಂ ಸದಸ್ಯರ ಬೆಂಬಲ; ದಳಕ್ಕೆ ಆಘಾತ

ಅರಕಲಗೂಡು ಶಾಸಕರಾಗಿದ್ದ ಎ.ಟಿ. ರಾಮಸ್ವಾಮಿ ಅವರು ಎರಡು ದಿನದ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶನಿವಾರ ದಿಲ್ಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಈಗ ಶಿವಲಿಂಗೇಗೌಡರು ಅಧಿಕೃತವಾಗಿ ಪಕ್ಷ ತೊರೆದಿದ್ದಾರೆ. ಜೆಡಿಎಸ್‌ಗೆ ತನ್ನ ಭದ್ರಕೋಟೆಯಲ್ಲಿಯೇ ಈಗ ಎರಡನೇ ಹೊಡೆತ ಬಿದ್ದಂತಾಗಿದೆ.

ರಾಜೀನಾಮೆ ಅಂಗೀಕಾರವಾದ ಕೂಡಲೇ ಅವರು ಶಾಸಕತ್ವದಿಂದ ಮುಕ್ತಿ ಹೊಂದಲಿದ್ದು, ಕಾಂಗ್ರೆಸ್‌ ಸೇರ್ಪಡೆ ಮಾರ್ಗ ನಿರಾಳವಾಗಲಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಲಿರುವ ಎರಡನೇ ಪಟ್ಟಿಯಲ್ಲಿ ಶಿವಲಿಂಗೇಗೌಡ ಅವರ ಹೆಸರು ಇದೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ತಮ್ಮ ವಿಶಿಷ್ಟ ಶೈಲಿಯ ಗ್ರಾಮ್ಯ ಮಾತು ಮತ್ತು ನೇರ ನಡೆನುಡಿಗಳಿಂದ ಹೆಸರಾಗಿರುವ ಶಿವಲಿಂಗೇಗೌಡರು ಕಳೆದ ಕೆಲವು ಸಮಯದಿಂದ ಜೆಡಿಎಸ್‌ ಬಗ್ಗೆ ಆಸಕ್ತಿ ಹೊಂದಿರಿಲಿಲ್ಲ. ಅವರು ಪಕ್ಷದ ಸಭೆಗಳಿಂದಲೂ ದೂರ ಉಳಿದಿದ್ದರು. ಅದರಲ್ಲೂ ಬಿಜೆಪಿಯ ಎನ್‌.ಆರ್‌ ಸಂತೋಷ್‌ ಅವರು ತಾನೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಓಡಾಡಲು ಆರಂಭಿಸಿದ ಬಳಿಕ ಶಿವಲಿಂಗೇಗೌಡ ಅವರು ಯಾಕೋ ಕಾಂಗ್ರೆಸ್‌ ಕಡೆಗೆ ವಾಲಿದ್ದರು. ಎನ್‌.ಆರ್‌. ಸಂತೋಷ್‌ ಅವರು ರಾಗಿ ಕಳವು ಸೇರಿದಂತೆ ಇತರ ಆರೋಪಗಳನ್ನು ಮಾಡಿದಾಗ ತುಂಬ ನೋವನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ ತಮ್ಮ ನೆರವಿಗೆ ಬಂದಿಲ್ಲ ಎನ್ನುವ ನೋವೂ ಅವರಿಗಿತ್ತು.

ಇದನ್ನೂ ಓದಿ: Siddaramaiah: ಕೋಲಾರದಿಂದ ಸ್ಪರ್ಧೆಯನ್ನು ಖಚಿತಪಡಿಸಿದ ಸಿದ್ದರಾಮಯ್ಯ: ಮಾನಸಿಕವಾಗಿ ಸಿದ್ಧ ಎಂದ ಮಾಜಿ ಸಿಎಂ

ಎಚ್‌.ಡಿ ಕುಮಾರಸ್ವಾಮಿ ಮತ್ತು ಎಚ್‌.ಡಿ. ರೇವಣ್ಣ ಸೇರಿದಂತೆ ಎಲ್ಲರ ಜತೆಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದ ಶಿವಲಿಂಗೇಗೌಡ ಅವರು ಹಲವು ಸುತ್ತಿನಲ್ಲಿ ಅಭಿಮಾನಿಗಳ ಸಭೆ ನಡೆಸಿ ಅಂತಿಮವಾಗಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದರು. ಇನ್ನು ರಾಜೀನಾಮೆ ಅಂಗೀಕಾರವಾದ ಬಳಿಕ ದೊಡ್ಡ ಸಮಾರಂಭ ಏರ್ಪಡಿಸಿ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ.

ಎರಡು ಬಾರಿ ಶಾಸಕರಾದ ಶಿವಲಿಂಗೇಗೌಡ

65 ವರ್ಷದ ಶಿವಲಿಂಗೇಗೌಡ ಅವರು 2001ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದವರು. ಬಳಿಕ 2013 ಮತ್ತು 2018ರಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕರಾಗಿದ್ದಾರೆ. ಅರಸೀಕೆರೆಯ ಕುಡುಕುಂದಿ ಗ್ರಾಮದವರಾದ ಇವರು ಹಾಸನ ಆರ್ಟ್‌ ಕಾಲೇಜಿನ ಬಿಎ ವಿದ್ಯಾರ್ಥಿ. ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಸ್ವಚ್ಛ ರಾಜಕಾರಣಿ ಎಂಬ ಹೆಸರು ಅವರಿಗೆ ಇದೆ.

ಇದನ್ನೂ ಓದಿ: PM Narendra Modi: ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿ ನಂ.1, ಆದರೂ ಕೊಂಚ ತಗ್ಗಿದ ಪಾಪ್ಯುಲಾರಿಟಿ

ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ

ಶಿವಲಿಂಗೇಗೌಡ ಅವರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುವುದು ಬಹುತೇಕ ನಿಶ್ಚಿತ. ಅವರಿಗೆ ಸಿದ್ದರಾಮಯ್ಯ ಅವರು ಬೆಂಬಲವಾಗಿ ನಿಂತಿದ್ದಾರೆ. ಡಿ.ಕೆ. ಶಿವಕುಮಾರ್‌ ಬೆಂಬಲವೂ ಇದೆ. ಆದರೆ, ಸ್ಥಳೀಯವಾಗಿ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತ ಎಚ್‌.ಡಿ. ಕುಮಾರಸ್ವಾಮಿ ಅವರು ಅರಸೀಕೆರೆಗೆ ಆಗಲೇ ಅಶೋಕ್‌ ಬಾಣಾವರ ಅವರು ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

Exit mobile version