ಹಾಸನ: ರೇವಣ್ಣ ಅವರೇ, ನೀವು ಚುನಾವಣಾ (Karnataka Election) ಪ್ರಚಾರದ ವೇಳೆ ನನ್ನ ಬಗ್ಗೆ ಏಕವಚನದಲ್ಲಿ ಅಶ್ಲೀಲ ಶಬ್ದಗಳನ್ನು ಉಪಯೋಗಿಸಿ ಮಾತನಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೀರಿ. ಇದು ಒಳ್ಳೆಯದಲ್ಲ. ನಾನು ಪ್ರತ್ಯುತ್ತರ ಕೊಡುತ್ತಿಲ್ಲ ಅಂತ ಹದ್ದು ಮೀರಿ ಮಾತನಾಡುತ್ತಿದ್ದೀರಿ. ನಾನು ಹೆಚ್ಚೂ ಕಮ್ಮಿ ನಿಮ್ಮ ವಯಸ್ಸಿನವನೇ ಆಗಿದ್ದೇನೆ. ಗೌರವದಿಂದ ಇದ್ದು, ಗೌರವದಿಂದ ಮಾತನಾಡುವುದನ್ನು ಕಲಿತುಕೊಳ್ಳಿ. ಈ ರೀತಿ ಮಾತನಾಡುವುದು ಒಳ್ಳೆಯದಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಅರಸೀಕೆರೆ ಕಾಂಗ್ರೆಸ್ ಅಭ್ಯರ್ಥಿ ಶಿವಲಿಂಗೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅರಸೀಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಏನ್ ನನ್ನನ್ನು ಬೈದು ಮತ ಪಡೆಯುತ್ತೇನೆ ಎಂದು ಅಂದುಕೊಂಡಿದ್ದೀರಾ? ಈ ಜನುಮದಲ್ಲಿ ಅದು ಸಾಧ್ಯವಿಲ್ಲ. ಗೌರವದಿಂದ ನೀವು ಇರಿ, ನಾನೂ ಇರುತ್ತೇನೆ. ಇದನ್ನು ಮುಂದುವರಿಸಿಕೊಂಡು ಹೋಗಬೇಡಿ, ನನಗೂ ಬಹಳ ಚೆನ್ನಾಗಿ ಭಾಷಣ ಮಾಡಲು ಬರುತ್ತದೆ. ನಾವು ನಿಮಗೆ ಬೈದಾಗ ನಿಮ್ಮ ಘನತೆ, ಗೌರವ ಏನಾಗುತ್ತದೆ? ಇದೆಲ್ಲ ಏತಕ್ಕೆ ಬೇಕು ನಿಮಗೆ? ಮಾತನಾಡುವುದನ್ನು ಮಾತನಾಡಿ ನನ್ನನ್ನು ಸೋಲಿಸಿ ಎಂದು ಮಾತನಾಡಿ, ಠೇವಣಿ ಕಳೆಯಿರಿ ಎಂಬುದಾಗಿ ಮಾತನಾಡಿ, ಅದನ್ನು ಅರಸೀಕೆರೆ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: M B Patil: ನಾನೂ ಸಿಎಂ ಆಗಲು ಸಮರ್ಥ, ಹೈಕಮಾಂಡ್ ಒಪ್ಪಿದರೆ ಆಗುವೆ; ಮನದಾಸೆ ಬಿಚ್ಚಿಟ್ಟ ಎಂ.ಬಿ.ಪಾಟೀಲ್
ಅರಸೀಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ದಿನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಮಾಜಿ ಸಚಿವ ಎಚ್.ಡಿ. ರೇವಣ್ಣ ಸತ್ಯವನ್ನು ಮರೆಮಾಚುವ ಮೂರ್ನಾಲ್ಕು ಆಪಾದನೆಗಳನ್ನು ನನ್ನ ಮೇಲೆ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಅಪಾರವಾದಂತಹ ಗೌರವವಿದೆ. ಆದರೆ, ಅವರು ಈ ಕೆಲಸ ಮಾಡಬಾರದು. ತೆಂಗಿನಮರ ನಾಶವಾದಾಗ ರೈತರಿಗೆ ಪರಿಹಾರ ನೀಡಿ ಎಂದು ಹೋರಾಟ ಮಾಡಿದ್ದರೆ, ನಾಟಕಕ್ಕೆ ತೆಂಗಿನಮರದ ಅಡಿ ಮಲಗಿದ್ದ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳುತ್ತಾರಲ್ಲವೇ? ಇದು ಅವರಿಗೆ ಗೌರವ ತರುವ ಕೆಲಸವಾ? ನಾನು ನಾಟಕಕ್ಕೆ ಮಲಗಿದ್ದೆನೋ ಅಥವಾ ಏನಕ್ಕೆ ಮಲಗಿದ್ದೆ ಎಂಬುದು ಅರಸೀಕೆರೆ ತಾಲೂಕಿನ ಜನಕ್ಕೆ ಗೊತ್ತಿದೆ. ಪಾಪ ಅವರಿಗೆ ಭಗವಂತ ಒಳ್ಳಯದನ್ನು ಮಾಡಲಿ, ನಾನೇನು ದ್ವೇಷ ಮಾಡಲ್ಲ ಎಂದು ಹೇಳಿದರು.
ಏನು ಇವರು ಬೆಳೆಸಿರೋದು?
ರೇವಣ್ಣ ಅವರು ಏಕವಚನದಲ್ಲಿ ಕಳ್ಳನನ್ನು ಬೆಳೆಸಿಬಿಟ್ಟೆ ಅಂದಿದ್ದಾರೆ. ಏನು ಇವರು ಬೆಳೆಸಿರೋದು? ಏನ್ ಬೆಳೆಸಿ ಇವರು ಕೊಟ್ಟಿರೋದು ಎಷ್ಟು? ಇವರು ಯಾವುದು, ಏನು ಕೊಟ್ಟಿದ್ದಾರೆ? ನಾನ್ ಹೇಗೆ ಬೆಳೆದಿದ್ದೇನೆ ಎಂಬುದು ನನಗೆ ಗೊತ್ತಿದೆ. ಈ ಕ್ಷೇತ್ರದ ಜನಕ್ಕೆ ಗೊತ್ತಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹದಿಮೂರು ಸಾವಿರ ಮತಗಳಷ್ಟೇ ಬರುತ್ತಿದ್ದವು, ಆ ವಿವರವನ್ನು ತೆಗೆದು ನೋಡಲಿ. ಎರಡು ಸಾರಿ ಜೆಡಿಎಸ್ ಅಭ್ಯರ್ಥಿಗೆ ಇಪ್ಪತ್ತೊಂದು ಸಾವಿರ ಮತ ಬಂದಿರೋದಷ್ಟೇ. ನಾನು ಚುನಾವಣೆಗೆ ಸ್ಪರ್ಧೆ ಮಾಡಿದಾಗಲೇ 80 ಸಾವಿರ ಮತಗಳು ಬಂದಿದೆ. ಅವು ಹೇಗೆ ಬಂದವು? ಮೂರೇ ವರ್ಷಕ್ಕೆ ಮತ ಹೆಚ್ಚಾದವಲ್ವಾ? ಅದು ಹೇಗೆ ಎಂದು ಇವರು ತಿಳಿದಿಕೊಳ್ಳಬೇಕು ಎಂದು ಶಿವಲಿಂಗೇಗೌಡ ಹೇಳಿದರು.
ನಾನೇನು ಮಾಜಿ ಪ್ರಧಾನ ಮಂತ್ರಿ ಮಗ ಅಲ್ಲ
ಲೋಕಸಭಾ ಚುನಾವಣೆಯಲ್ಲಿ ಎಷ್ಟು ಮತ ಕೊಡಿಸಿದ್ದೇನೆ ಎಂಬುದು ಗೊತ್ತಿದೆಯಾ? ಅದೆಲ್ಲ ಸುಳ್ಳಾ? ಅಂಕಿಅಂಶವನ್ನು ತೆಗೆದು ನೋಡಲಿ. ಈ ಸಾರಿ ಅರಸೀಕೆರೆಯಲ್ಲಿ ಚುನಾವಣೆ ಮಾಡಲಿ ಗೊತ್ತಾಗುತ್ತದೆ. ನನಗೂ ನೋವಿದೆ. ನಾನು ನಿಮ್ಮನ್ನು ಏಕವಚನದಲ್ಲಿ ಕರೆಯಬಹುದು. ಆದರೆ, ಹಾಗೇ ಕರೆಯುವುದಿಲ್ಲ. ರೇವಣ್ಣ ಅವರೇ ನಿಮ್ಮನ್ನು ನಾನು ಏಕವಚನದಲ್ಲಿ ಕರೆಯುವುದಿಲ್ಲ. ನಿಮ್ಮ ಬಗ್ಗೆ ಮಾತನಾಡಲ್ಲ, ಏಕವಚನ ನನಗೂ ಬರುತ್ತದೆ. ಸಭೆ, ಸಮಾರಂಭಗಳಲ್ಲಿ ಗೌರವದಿಂದ ಮಾತನಾಡಿ. ನೀವೇನು ಎಲ್ಲವನ್ನೂ ತಂದು ಹಾಕಿಲ್ಲ, ನಾನು ಕಷ್ಟಪಟ್ಟು ಮೇಲೆ ಬಂದಿದ್ದೀನಿ. ನಾನೇನು ಮಾಜಿ ಪ್ರಧಾನ ಮಂತ್ರಿ ಮಗ ಅಲ್ಲ, ಯಾವ ರಾಜಕಾರಣಿ ವಂಶಸ್ಥನೂ ಅಲ್ಲ. ಸಾಮಾನ್ಯ ಹಳ್ಳಿ ರೈತನ ಮಗನಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ರೇವಣ್ಣ ಅವರೇ ಇವತ್ತು ನಾನು ಸಭೆ ಕರೆದರೆ ಐವತ್ತರಿಂದ ಅರವತ್ತು ಸಾವಿರ ಜನ ಸೇರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಅಗೌರವದಿಂದ ಮಾತನಾಡುವುದನ್ನು ನಿಲ್ಲಿಸಿ. ನಾವು ಸಣ್ಣತನಕ್ಕೆ ಹೋದರೆ, ಸಣ್ಣ ಬೆಳವಣಿಗೆಯಾದರೆ ನಿಮಗೆ ಒಳ್ಳೆಯದಲ್ಲ. ನಿಮಗೂ ಗೌರವ ತರವಂಥದ್ದಲ್ಲ ಎಂದು ಹೇಳಿದರು.
ಇದನ್ನೂ ಓದಿ: Basavaraj Bommai: ಭಾನುವಾರದಿಂದ ಸಿಎಂ ಬೊಮ್ಮಾಯಿ ದಂಡಯಾತ್ರೆ ಆರಂಭ: ಅಭ್ಯರ್ಥಿಗಳ ಪರ ʼಜಯವಾಹಿನಿʼ ರೋಡ್ ಶೋ
ಅದೆಲ್ಲ ನಿಮಗೆ ಯಾಕ್ರೀ?
ನಾನು ಸಭೆ ಸಮಾರಂಭಗಳಲ್ಲಿ ಗೌರವದಿಂದ ಇದ್ದೇನೆ. ನೀವು ಈ ರೀತಿ ಸಣ್ಣತನದಿಂದ ಮಾತನಾಡಿದರೆ ನಾನೂ ಮಾತನಾಡಬೇಕಾಗುತ್ತದೆ. ದೇವೇಗೌಡರ ಬಗ್ಗೆ ನಾನು ಮಾತನಾಡಲ್ಲ. ಅವರು ಏನೇ ಅಂದರೂ ಆಶೀರ್ವಾದ ಅಂತ ತಿಳಿದುಕೊಳ್ಳುತ್ತೇನೆ. ನಾಟಕಕಾರ ಯಾಕ್ರೀ ಬೇಕು ನಿಮಗೆ? ನಿಮ್ಮ ಪಕ್ಷದಲ್ಲಿ ಯಾಕ್ರೀ ಉಳಿಯಬೇಕು? ನಾವು ನಾಟಕ ಮಾಡಿಕೊಂಡು ಎಲ್ಲೆಲ್ಲೋ ಹೋಗಿ ಭಿಕ್ಷೆ ಎತ್ತುತ್ತೇವೆ. ಅದೆಲ್ಲ ನಿಮಗೆ ಯಾಕ್ರೀ? ಎಂದು ಶಿವಲಿಂಗೇಗೌಡ ಪ್ರಶ್ನೆ ಮಾಡಿದರು.