ಶಿವಮೊಗ್ಗ: ʻʻಯಾವ ಕಾರಣಕ್ಕೂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ನನ್ನ ಹೆಸರು ಇಡುವುದು ಬೇಡ. ಇದಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಬೇಕು ಎಂದು ನಾನೇ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆʼʼ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಫೆ. ೨೭ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಆವತ್ತೇ ಯಡಿಯೂರಪ್ಪ ಅವರ ಹುಟ್ಟುಹಬ್ಬವೂ ಆಗಿದ್ದು, ಅವರಿಗೆ ಗೌರವಾರ್ಪಣೆ ರೂಪದಲ್ಲಿ ನಿಲ್ದಾಣಕ್ಕೆ ಹೆಸರಿಡಲು ಯೋಜನೆ ರೂಪಿಸಲಾಗಿದೆ. ಆದರೆ, ಯಡಿಯೂರಪ್ಪ ಮಾತ್ರ ಬೇಡ ಎಂದು ಹೇಳುತ್ತಿದ್ದು, ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲೂ ಇದೇ ಮಾತನ್ನು ಪುನರುಚ್ಚರಿಸಿದರು.
ಶಿವಮೊಗ್ಗ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಒಂದು ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಕೇಂದ್ರ ವಿಮಾನಯಾನ ಯಾನ ಇಲಾಖೆಗೂ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಇಷ್ಟಾದರೂ ಬಿ.ಎಸ್. ಯಡಿಯೂರಪ್ಪ ಅವರು ಆರಂಭದಿಂದಲೂ ತನ್ನ ಹೆಸರು ಬೇಡ ಎಂದು ಹೇಳುತ್ತಲೇ ಬಂದಿದ್ದಾರೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಅವರು ಸಿಎಂ ಅವರಿಗೆ ಪತ್ರ ಬರೆದು ʻನಿಲ್ದಾಣಕ್ಕೆ ನನ್ನ ಹೆಸರು ಬೇಡ, ಬೇರೆ ಗಣ್ಯಸಾಧಕರ ಹೆಸರು ಇಡಿʼ ಎಂದು ಮನವಿ ಮಾಡಿದ್ದರು. ಜತೆಗೆ ಕೆಲವು ದಿನಗಳ ಹಿಂದೆಯೂ ನನ್ನ ಹೆಸರು ಬೇಡ ಎಂದು ಸಿಎಂ ಅವರಿಗೆ ಮತ್ತೆ ತಿಳಿಸಿದ್ದೇನೆ ಎಂದರು.
ಇದೀಗ ಪತ್ರಿಕಾಗೋಷ್ಠಿಯನ್ನೇ ಕರೆದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಬಿ.ಎಸ್. ಯಡಿಯೂರಪ್ಪ. ನಿಲ್ದಾಣಕ್ಕೆ ನನ್ನ ಹೆಸರು ಬೇಡ, ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡುವಂತೆ ಸೋಮವಾರ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಅಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಹೆಸರಿಡಲು ನಿರ್ಧರಿಸಿ, ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ಶಿಫಾರಸು ಕಳುಹಿಸಿದ ಬಳಿಕವೂ ಯಡಿಯೂರಪ್ಪ ಅವರು ಹೆಸರು ಬೇಡ ಎಂದೇ ಹೇಳುತ್ತಿದ್ದಾರೆ. ಫೆ. ೮ರಂದು ಶಿವಮೊಗ್ಗಕ್ಕೆ ಬಂದ ಸಿಎಂ ಬೊಮ್ಮಾಯಿ ಅವರು ಯಡಿಯೂರಪ್ಪ ಅವರದೇ ಹೆಸರು ಎಂದು ಸ್ಪಷ್ಟಪಡಿಸಿದ್ದರು. ಆಗಲೂ ಯಡಿಯೂರಪ್ಪ ಬೇಡ ಎಂದಿದ್ದರು. ಇಷ್ಟರ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ ಯಡಿಯೂರಪ್ಪ ಹೆಸರಿಡುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ.
ಇದೆಲ್ಲವನ್ನೂ ಪರಿಗಣಿಸಿ ಮತ್ತು ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಬಿ.ಎಸ್. ಯಡಿಯೂರಪ್ಪ ಮಾಡಿದ್ದಾರೆ. ʻʻನನ್ನ ಹೆಸರು ಬೇಡ ಎಂದು ಹೇಳುತ್ತಲೇ ಬಂದಿದ್ದೇನೆ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ, ಕುವೆಂಪು ಅವರ ಹೆಸರು ಇಡೋಣʼʼ ಎಂದಿದ್ದಾರೆ ಬಿ.ಎಸ್. ಯಡಿಯೂರಪ್ಪ. ಇದನ್ನು ಸಿಎಂ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರ ಹೇಗೆ ಸ್ವೀಕರಿಸುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Shivamogga Airport : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿಎಸ್‌ವೈ ಪುನರುಚ್ಚಾರ