Site icon Vistara News

‌Shivamogga Airport: ಲೋಕಾರ್ಪಣೆಗೆ ಮುನ್ನ ಶಿವಮೊಗ್ಗದ ಏರ್ಪೋರ್ಟ್‌ನಲ್ಲಿ ವಾಯುಪಡೆ ವಿಮಾನ ಲ್ಯಾಂಡಿಂಗ್‌, ಟ್ರಯಲ್‌ ರನ್‌ ಯಶಸ್ವಿ

Shivamogga Airport Trial Run

#image_title

ಶಿವಮೊಗ್ಗ: ಫೆಬ್ರವರಿ ೨೭ರಂದು ಲೋಕಾರ್ಪಣೆಗೊಳ್ಳಲಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮಂಗಳವಾರ ಮೊದಲ ವಿಮಾನ ಇಳಿದು ಸಂಭ್ರಮಕ್ಕೆ ಕಾರಣವಾಯಿತು. ಭಾರತೀಯ ವಾಯು ಸೇನೆಗೆ ಸೇರಿದ ವಿಮಾನ ಟ್ರಯಲ್‌ ರನ್‌ ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ರನ್‌ ವೇನಲ್ಲಿ ಇಳಿಯಿತು. ಯಾವುದೇ ಸಮಸ್ಯೆ ಇಲ್ಲದೆ ಲ್ಯಾಂಡಿಂಗ್‌ ನಡೆಸುವ ಮೂಲಕ ವಿಮಾನ ನಿಲ್ದಾಣ ಅತ್ಯಂತ ಸೇಫ್‌ ಆಗಿದೆ ಎಂಬ ಸಂದೇಶವೂ ರವಾನೆಯಾಗಿದೆ.

ಮಂಗಳವಾರ (ಫೆ.೨೧) ಮಧ್ಯಾಹ್ನ 2.16 ಕ್ಕೆ ಪ್ರಪ್ರಥಮ ವಿಮಾನ ಬಂದಿಳಿದಿದ್ದು, ಈ ವಿಮಾನದ ಪೈಲಟ್‌ಗೆ ಏರ್ಪೋರ್ಟ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೇ, ನಿಲ್ದಾಣಕ್ಕೆ ಬಂದ ವಿಮಾನಕ್ಕೆ ಫೈರ್ ಎಂಜಿನ್‌ ಮೂಲಕ ನೀರು ಸಿಂಪಡಿಸಿ, ಸ್ವಾಗತ ಕೋರಲಾಯಿತು. ವಿಮಾನವನ್ನು ಟರ್ಮಿನಲ್ ಹಿಂಭಾಗದಲ್ಲಿ ಕೆಲ ಸಮಯ ನಿಲ್ಲಿಸಿ ಬಳಿಕ ಕಳುಹಿಸಲಾಯಿತು.

ಶಿವಮೊಗ್ಗ ಆಗಸದಲ್ಲಿ ವಿಮಾನ ಹಾರಾಟ

ಸುಮಾರು ಅರ್ಧ ಗಂಟೆ ಬಳಿಕ ವಾಪಸ್ ಹೊರಟ ಭಾರತೀಯ ಸೇನೆಯ ವಿಮಾನ, ಕಾಚಿನಕಟ್ಟೆ ಗ್ರಾಮದ ಸುತ್ತ ಒಂದು ಸುತ್ತು ಹಾರಾಟ ನಡೆಸಿ, ಪುನಃ ರನ್ ವೇ ಮೇಲೆ ಹಾರಾಡಿ ಬೆಂಗಳೂರಿಗೆ ವಾಪಸ್ ತೆರಳಿತು. ಮೊದಲ ವಿಮಾನ ಹಾರಾಟ ಕಂಡ ಸ್ಥಳೀಯರು ಮತ್ತು ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸೋನು ನಿಗಮ್​ ಜತೆ ಸೆಲ್ಫಿಗಾಗಿ ಮುಗಿಬಿದ್ದು ಅವ್ಯವಸ್ಥೆ ಸೃಷ್ಟಿಸಿದ ಶಾಸಕನ ಪುತ್ರ; ಕ್ಷಮೆ ಕೇಳಿ ಟ್ವೀಟ್ ಮಾಡಿದ ಸಹೋದರಿ

Exit mobile version