Site icon Vistara News

Shivamogga Airport : ಲೋಕಾರ್ಪಣೆಗೊಂಡಿತು ರಾಜ್ಯದ 9ನೇ ವಿಮಾನ ನಿಲ್ದಾಣ, ಹಲವು ವಿಶೇಷಗಳ ತಾಣ

Vimana nildana

#image_title

ಶಿವಮೊಗ್ಗ: ಮಲೆನಾಡಿನ ಬಹುದಿನಗಳ ಕನಸಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಕನಸಿನ ನಿಲ್ದಾಣವಾದ ಈ ಏರ್‌ಪೋರ್ಟನ್ನು ಅವರ ೮೦ನೇ ಹುಟ್ಟುಹಬ್ಬದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ.

ಈ ವಿಮಾನ ನಿಲ್ದಾಣದ ವಿಶೇಷಗಳು ಇಲ್ಲಿವೆ

೧. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಗ್ರೀನ್ ಫೀಲ್ಡ್ ಡೊಮಾಸ್ಟಿಕ್ ಏರ್ ಪೋರ್ಟ್ ಎಂದು ಕರೆಯಲಾಗುತ್ತಿದೆ. ಇದು ರಾಜ್ಯದ ಒಂಬತ್ತನೇ ದೇಶೀಯ ವಿಮಾನ ನಿಲ್ದಾಣ. ಬೆಂಗಳೂರು, ಮಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ ಬಳಿಕ ಶಿವಮೊಗ್ಗ ಜಿಲ್ಲೆಗೆ ವಿಮಾನ ನಿಲ್ದಾಣ ಬಂದಿದೆ. ಇವುಗಳ ಪೈಕಿ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ

೨. ಶಿವಮೊಗ್ಗದಿಂದ ೧೪ ಕಿ.ಮೀ. ದೂರದಲ್ಲಿರುವ ಸೋಗಾನೆಯಲ್ಲಿರುವ ೬೬೩ ಎಕರೆ ಪ್ರದೇಶದಲ್ಲಿ ೪೪೯.೨೨ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಇದು.

೩. ಶಿವಮೊಗ್ಗ ವಿಮಾನ ನಿಲ್ದಾಣವು ಬೆಂಗಳೂರಿನ ಬಳಿಕ ಎರಡನೇ ಅತಿ ದೊಡ್ಡ ರನ್‌ ವೇ ಇರುವ ವಿಮಾನ ನಿಲ್ದಾಣವಾಗಲಿದೆ. ಇದರ ರನ್‌ವೇಯ ಉದ್ದ ೩,೨೦೦ ಮೀಟರ್‌ ಇದೆ. ಬೆಂಗಳೂರು ವಿಮಾನ ನಿಲ್ದಾಣದ ರನ್‌ ವೇ ಉದ್ದ ೪೦೦೦ ಮೀಟರ್‌ ಇದೆ.

೪. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ಮಧ್ಯ ಕರ್ನಾಟಕದ ಜನರ ಕನಸು ಸಾಕಾರವಾಗಿ ಈ ವಿಮಾನ ನಿಲ್ದಾಣ ಬಂದಿದೆ. ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆ ಮತ್ತು ಪ್ರವಾಸೋದ್ಯಮಕ್ಕೆ ಇದು ಕಾಣಿಕೆಯಾಗಲಿದೆ.

೫. ಗಂಟೆಗೆ ೩೦೦ರಷ್ಟು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ವಿಮಾನ ನಿಲ್ದಾಣವು ಬೋಯಿಂಗ್‌ ೭೩೭ ಮತ್ತು ಏರ್ ಬಸ್‌ ಎ೩೨೦ ಮಾದರಿಯ ವಿಮಾನಗಳನ್ನು ನಿರ್ವಹಿಸಬಲ್ಲ ಶಕ್ತಿ ಹೊಂದಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಸಾಗಿಬಂದ ಹಲವು ವಿಘ್ನಗಳ ಹಾದಿ

೧. ವಿಮಾನ ನಿಲ್ದಾಣದ ಕನಸು ಚಿಗುರಿದ್ದು ೨೦೦೬ರಲ್ಲಿ. ವಿಮಾನ ನಿಲ್ದಾಣಕ್ಕಾಗಿ 662 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 2008ರ ಜೂನ್ 20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

೨. ಗುತ್ತಿಗೆ ಪಡೆದ ಸಂಸ್ಥೆ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಕೆಲವೇ ದಿನಗಳಲ್ಲಿ ಕಾಮಗಾರಿ ಸ್ಥಗಿತವಾಯಿತು. ಗುತ್ತಿಗೆ ಪಡೆದ ಸಂಸ್ಥೆಯ ಮುಖ್ಯಸ್ಥ ಹಣಕಾಸು ಹಗರಣವೊಂದರಲ್ಲಿ ಸಿಲುಕಿದ್ದರಿಂದ ವಿಮಾನ ನಿಲ್ದಾಣದ ಕೆಲಸ ನಿಂತು ಹೋಗಿತ್ತು.

೩. ರನ್ ವೇ ನಿರ್ಮಾಣಕ್ಕಾಗಿ ಸ್ವಲ್ಪ ದೂರದವರೆಗೆ ನೆಲ ಸಮತಟ್ಟು ಮಾಡಿದ್ದು, ವಿನಾಯಕ ನಗರದ ಪಕ್ಕದಲ್ಲಿ ಕಚೇರಿಗಾಗಿ ಕಟ್ಟಡ ನಿರ್ಮಿಸಿದ್ದು ಹೊರತು ಉಳಿದ್ಯಾವ ಕಾಮಗಾರಿಯು ಆಗಿರಲಿಲ್ಲ. ಇದೇ ಕಾರಣಕ್ಕೆ 2015ರಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನವನ್ನು ರದ್ದುಗೊಳಿಸಿತು. ಹೀಗಾಗಿ ಮರು ಟೆಂಡರ್ ಕರೆಯಲಾಯಿತು.

೪. ೨೦೧೯ರಲ್ಲಿ ಯಡಿಯೂರಪ್ಪ ಅವರು ಪುನಃ ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಮಾನ ನಿಲ್ದಾಣದ ಕನಸು ಪುನಃ ಚಿಗುರೊಡೆಯಿತು. 2020ರ ಜೂನ್ 15ರಂದು ಕಾಮಗಾರಿಗೆ ಪುನಃ ಚಾಲನೆ ನೀಡಲಾಯಿತು. ಕೇಂದ್ರದ ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭವಾಯಿತು. ಹೈಟೆಕ್ ಟರ್ಮಿನಲ್, 3.2 ಕಿ.ಮೀ. ರನ್ ವೇ, ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಯೋಜನೆಗೆ ಅಳವಡಿಸಲಾಯಿತು.

೫. ಶಿವಮೊಗ್ಗ ವಿಮಾನ ನಿಲ್ದಾಣದ ವೈಶಿಷ್ಟ್ಯಗಳಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಅಗ್ನಿಶಾಮಕ ಠಾಣೆ ಕಟ್ಟಡ, ಟ್ಯಾಕ್ಸಿವೇ, ಏಪ್ರನ್, ಅಪ್ರೋಚ್ ರಸ್ತೆ, ಪೆರಿಫೆರಲ್ ರಸ್ತೆ ಮತ್ತು ಕಾಂಪೌಂಡ್ ಗೋಡೆ ಸೇರಿವೆ. ಚೆಕ್ ಇನ್ ಕೌಂಟರ್, ವೇಯ್ಟಿಂಗ್ ಲಾಂಜ್, ಕೆಫೆಟೇರಿಯಾ, ವಿಐಪಿ ಲಾಂಜ್, ಸೆಕ್ಯೂರಿಟಿ ಚೆಕಿಂಗ್ ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಈ ವಿಮಾನ ನಿಲ್ದಾಣದಲ್ಲಿವೆ.

೬. ಕಮಲದಳದಂತೆ ಕಾಣುವ ವೈಮಾನಿಕ ದೃಶ್ಯ ಹೊಂದಿರುವ ಈ ವಿಮಾನ ನಿಲ್ದಾಣದಿಂದ ಇನ್ನೊಂದು ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಇದನ್ನೂ ಓದಿ : Shivamogga Airport: ಮಲೆನಾಡು ಯುವಕರ ಉದ್ಯೋಗದ ಮಹಾದ್ವಾರ ತೆರೆದಿದೆ: ಸಿಎಂ ಬಸವರಾಜ ಬೊಮ್ಮಾಯಿ

Exit mobile version