ಬೆಂಗಳೂರು/ದೇವನಹಳ್ಳಿ/ಶಿವಮೊಗ್ಗ: ಮಲೆನಾಡಿನ ಬಹುನಿರೀಕ್ಷೆಯ ಶಿವಮೊಗ್ಗ ವಿಮಾನ ನಿಲ್ದಾಣದ (Shivamogga Airport) ಅಧಿಕೃತ ಕಾರ್ಯಾಚರಣೆ, ವಿಮಾನಯಾನ ಸೇವೆಗಳು (Air services) ಇಂದು (ಆಗಸ್ಟ್ 31ರಂದು) ಆರಂಭವಾಗಿದೆ. ವಿಮಾನಯಾನ ಸೇವೆಯ ಮೊದಲ ವಿಮಾನ ಬೆಳಗ್ಗೆ 9.55ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ (Bangalore International airport) ನಿಲ್ದಾಣದಿಂದ ಶಿವಮೊಗ್ಗಕ್ಕೆ ಪ್ರಯಾಣ ಆರಂಭಿಸಿದ್ದು, 11.05ಕ್ಕೆ ಸೋಗಾನೆ ವಿಮಾನ ನಿಲ್ದಾಣವನ್ನು ತಲುಪಲಿದೆ. ಅಲ್ಲಿಗೆ ಮಲೆನಾಡಿನ ಮಹಾ ನಿರೀಕ್ಷೆಯೊಂದು ನಿಜವಾದಂತಾಗಲಿದೆ.
ಬೆಂಗಳೂರಿನಿಂದ 9.50ಕ್ಕೆ ಹೊರಟ ವಿಮಾನದಲ್ಲಿ ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಯಾಣಿಸಿದ್ದಾರೆ. ವಿಶೇಷವೆಂದರೆ ಅವರ ಜತೆಗೆ ಕೆಲವು ರೈತರು ಮೊದಲ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.
ಇಂಡಿಗೋ ವಿಮಾನದಲ್ಲಿ ರೈತರ ಜತೆ ಪಯಣಿಸಿದ ಬಿಎಸ್‌ವೈ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟ ಮೊದಲ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸಲು ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಶಿವಮೊಗ್ಗ ನಿಲ್ದಾಣ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟ, ಸಹಕಾರ ಕೊಟ್ಟ ರೈತರಿಗೆ ಧನ್ಯವಾದ ತಿಳಿಸುತ್ತೇನೆ. ಇಂದು ನಮ್ಮ ಜೊತೆ ಕೆಲ ರೈತರನ್ನು ಸಹ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದರು.
ಇದು ಆರಂಭ ಎಂದ ಎಂ.ಬಿ. ಪಾಟೀಲ್
ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಇಂದು ಶಿವಮೊಗ್ಗಕ್ಕೆ ಮೊದಲ ವಿಮಾನ ಐತಿಹಾಸಿಕ ಕ್ಷಣವಾಗಿದೆ. ಇಂದಿನಿಂದ ಒಂದೊಂದೆ ವಿಮಾನ ಶಿವಮೊಗ್ಗಕ್ಕೆ ಹಾರಾಟ ನಡೆಸಲಿದೆ. ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಡಲಿದ್ದು, ಮುಂದೆ ಗೋವಾ, ತಿರುಪತಿ ಸೇರಿದಂತೆ ಇನ್ನಿತರ ಕಡೆ ಶಿವಮೊಗ್ಗದಿಂದ ಪ್ರಯಾಣ ಬೆಳೆಸಲಿದೆ ಎಂದು ಹೇಳಿದರು.
ಮಾಜಿ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ʻʻಇದೊಂದು ಐತಿಹಾಸಿಕ ಕ್ಷಣ. ಶಿವಮೊಗ್ಗ ಜನ ಖುಷಿ ಪಡುವ ದಿನ. ಇದೊಂದು ಅಭಿವೃದ್ಧಿ ದಿನʼʼ ಎಂದರು. ಇದರಿಂದ ಕೈಗಾರಿಕೆ ಸ್ಥಾಪನೆಗೆ ಅನುಕೂಲ ಆಗಲಿದೆ. ಮಧ್ಯ ಕರ್ನಾಟಕಕ್ಕೆ ಲಾಭವಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಸ್ವಾಗತ ಭರ್ಜರಿ
ವಿಮಾನ ಬೆಳಗ್ಗೆ 11.05ಕ್ಕೆ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಇಳಿದಾಗ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಇತರ ನಾಯಕರು ಸ್ವಾಗತ ಮಾಡಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತದೆ.
ಮಲೆನಾಡಿನ ಮೊದಲ ವಿಮಾನ ನಿಲ್ದಾಣ
ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣ ಇದಾಗಿದ್ದು, ಇದಕ್ಕಾಗಿ 450 ಕೋಟಿ ರೂ. ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್‍ಪೋರ್ಟ್ ನಿರ್ಮಾಣವಾಗಿದ್ದು, ಇದರಲ್ಲಿ ಏರ್‍ಬಸ್ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೂ ಸಂಪರ್ಕ
ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಕನೆಕ್ಟಿಂಗ್ ವಿಮಾನಗಳು ಲಭ್ಯ ಇರಲಿವೆ. ಜತೆಗೆ, ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ
ಮೂಲ ಯೋಜನೆಯಲ್ಲಿ ಈ ಏರ್‍ಪೋರ್ಟ್‌ನಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಇರಲಿಲ್ಲ. ಈಗ ಅದನ್ನು ಪರಿಷ್ಕರಿಸಿ, ಆ ಅನುಕೂಲವನ್ನೂ ನೀಡಲಾಗಿದೆ. 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್ ಮತ್ತು 3,050 ಮೀಟರ್ ಉದ್ದದ ರನ್‌ವೇಯನ್ನು ಇದು ಒಳಗೊಂಡಿದೆ. ಮುಂದಿನ ಮೂರು ವಾರಗಳ ವಿಮಾನಯಾನ ಟಿಕೆಟ್ ಮುಂಗಡವಾಗಿ ಬುಕಿಂಗ್ ಆಗಿದ್ದು, ಒಳ್ಳೆಯ ಬೇಡಿಕೆ ವ್ಯಕ್ತವಾಗಿದೆ.