ಶಿವಮೊಗ್ಗ: ಹೊಸದಾಗಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಜುಲೈ 20ರೊಳಗೆ ಬಾಕಿ ಇರುವ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಆಗಸ್ಟ್ 11 ರಂದು ಏರ್‌ಪೋರ್ಟ್ (Shivamogga Airport) ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ಹೊಸ ವಿಮಾನ ನಿಲ್ದಾಣಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಏರ್‌ಪೋರ್ಟ್‌ಗೆ ಆಂಬ್ಯುಲೆನ್ಸ್ ಹಾಗೂ ಇತರ ವಾಹನಗಳ ಸೇವೆ ಆರಂಭಿಸಲಾಗುತ್ತದೆ. ಹಾಗೆಯೇ ಕಾಫಿ ಕೆಫೆಯನ್ನು ಕೂಡ ತೆರೆಯಲಾಗುತ್ತದೆ. ಜತೆಗೆ ತಾಂತ್ರಿಕ ಹಾಗೂ ತಾಂತ್ರಿಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಜುಲೈ 20ರ ವೇಳೆಗೆ ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಶಿವಮೊಗ್ಗ ಏರ್‌ಪೋರ್ಟ್ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಐಐಡಿಸಿ) ಅನುಮತಿ ನೀಡಿದೆ. ಹೀಗಾಗಿ ಶಿವಮೊಗ್ಗ ಏರ್‌ಪೋರ್ಟ್, ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಮೊದಲ ವಿಮಾನ ನಿಲ್ದಾಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ 20 ವಿಮಾನಗಳು ಏರ್‌ಪೋರ್ಟ್‌ಗೆ ಬಂದಿಳಿದಿದ್ದವು. ಇದರಿಂದ 12 ಲಕ್ಷ ಆದಾಯ ಬಂದಿದೆ. ಎಲ್ಲ ಅಂದುಕೊಂಡಂತೆ ಆದರೆ, ಆಗಸ್ಟ್ 11ರಂದು ಬೆಂಗಳೂರಿನಿಂದ ವಿಮಾನ ತೆರಳಿ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಇಳಿಯಲಿದೆ. ಈ ಐತಿಹಾಸಿಕ ಕ್ಷಣ ನೋಡಲು ಗಣ್ಯರು, ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ | Chandrayaan 3: ಚಂದ್ರಯಾನ 3 ಉಡಾವಣೆ ಯಶಸ್ವಿ; ಆದರೂ, ಆಗಸ್ಟ್ 23ರವರೆಗೆ ನಾವೇಕೆ ಕಾಯಬೇಕು?
ಫೆ. 27ರಂದು ಉದ್ಘಾಟನೆಯಾಗಿತ್ತು ಏರ್‌ಪೋರ್ಟ್
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ವಿಧಾನಸಭೆ ಚುನಾವಣೆ ವೇಳೆ ಗಣ್ಯರ ಓಡಾಟಕ್ಕೆ ವಿಮಾನ ನಿಲ್ದಾಣ ನೆರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಲ್ಲಿ ಬಂದಿಳಿದಿದ್ದರು. ಉದ್ಘಾಟನೆ ಆದಾಗಿನಿಂದಲೂ ಇಲ್ಲಿಂದ ವಿಮಾನ ಕಾರ್ಯಾಚರಣೆ ಆರಂಭವಾಗುವುದನ್ನು ಮಲೆನಾಡಿನ ಜನರು ಕಾಯುತ್ತಿದ್ದಾರೆ. ಅಂತೂ ಐದು ತಿಂಗಳ ನಂತರ ಈ ಕನಸು ನನಸಾಗಲು ಮುಹೂರ್ತ ನಿಗದಿ ಆಗಿದೆ.
450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಶಿವಮೊಗ್ಗದಿಂದ 8.8 ಕಿ.ಮೀ ದೂರದಲ್ಲಿರುವ ಸೋಗಾನೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 450 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಗಂಟೆಗೆ 300 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ | Chandrayaan 3: ದೇಶದ ಕನಸು ಆಗಸಕ್ಕೆ; ಫ್ರಾನ್ಸ್ನಿಂದಲೇ ಚಂದ್ರಯಾನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ
ಈ ವಿಮಾನ ನಿಲ್ದಾಣದ ವಿಶೇಷಗಳು ಇಲ್ಲಿವೆ
1. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಗ್ರೀನ್ ಫೀಲ್ಡ್ ಡೊಮಾಸ್ಟಿಕ್ ಏರ್ ಪೋರ್ಟ್ ಎಂದು ಕರೆಯಲಾಗುತ್ತಿದೆ. ಇದು ರಾಜ್ಯದ ಒಂಬತ್ತನೇ ದೇಶೀಯ ವಿಮಾನ ನಿಲ್ದಾಣ. ಬೆಂಗಳೂರು, ಮಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ ಬಳಿಕ ಶಿವಮೊಗ್ಗ ಜಿಲ್ಲೆಗೆ ವಿಮಾನ ನಿಲ್ದಾಣ ಬಂದಿದೆ. ಇವುಗಳ ಪೈಕಿ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
2. ಶಿವಮೊಗ್ಗದಿಂದ ೧೪ ಕಿ.ಮೀ. ದೂರದಲ್ಲಿರುವ ಸೋಗಾನೆಯಲ್ಲಿರುವ 663 ಎಕರೆ ಪ್ರದೇಶದಲ್ಲಿ 449.22 ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಇದು.
3. ಶಿವಮೊಗ್ಗ ವಿಮಾನ ನಿಲ್ದಾಣವು ಬೆಂಗಳೂರಿನ ಬಳಿಕ ಎರಡನೇ ಅತಿ ದೊಡ್ಡ ರನ್ ವೇ ಇರುವ ವಿಮಾನ ನಿಲ್ದಾಣವಾಗಲಿದೆ. ಇದರ ರನ್‌ವೇಯ ಉದ್ದ 3,200 ಮೀಟರ್ ಇದೆ. ಬೆಂಗಳೂರು ವಿಮಾನ ನಿಲ್ದಾಣದ ರನ್ ವೇ ಉದ್ದ 4000 ಮೀಟರ್ ಇದೆ.
4. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ಮಧ್ಯ ಕರ್ನಾಟಕದ ಜನರ ಕನಸು ಸಾಕಾರವಾಗಿ ಈ ವಿಮಾನ ನಿಲ್ದಾಣ ಬಂದಿದೆ. ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆ ಮತ್ತು ಪ್ರವಾಸೋದ್ಯಮಕ್ಕೆ ಇದು ಕಾಣಿಕೆಯಾಗಲಿದೆ.
5. ಗಂಟೆಗೆ 300ರಷ್ಟು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ವಿಮಾನ ನಿಲ್ದಾಣವು ಬೋಯಿಂಗ್ 737 ಮತ್ತು ಏರ್ ಬಸ್ ಎ 320 ಮಾದರಿಯ ವಿಮಾನಗಳನ್ನು ನಿರ್ವಹಿಸಬಲ್ಲ ಶಕ್ತಿ ಹೊಂದಿದೆ.