Site icon Vistara News

Karnataka Election 2023: ಈಶ್ವರಪ್ಪ ಆಶೀರ್ವಾದ ಪಡೆದ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ; ಗುರು ಜತೆ ತೆರಳಿ ನಾಮಪತ್ರ

Shivamogga BJP candidate Channabasappa seeks Eshwarappa blessings and file nomination Karnataka Election 2023 updates

ಶಿವಮೊಗ್ಗ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸುದ್ದಿಯಲ್ಲಿದ್ದ ಕ್ಷೇತ್ರದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರವೂ ಒಂದು. ಬಹುಮುಖ್ಯವಾಗಿ ಹಾಲಿ ಬಿಜೆಪಿ ಶಾಸಕ ಕೆ.ಎಸ್.‌ ಈಶ್ವರಪ್ಪ ಅವರು ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ. ಆದರೆ, ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದರೂ ಬುಧವಾರ ರಾತ್ರಿ ಈಶ್ವರಪ್ಪ ಅವರ ಆಪ್ತ ಚನ್ನಬಸಪ್ಪ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ (ಏಪ್ರಿಲ್‌ 20) ಈಶ್ವರಪ್ಪ ಮನೆಗೆ ಚನ್ನಬಸಪ್ಪ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಅವರೊಂದಿಗೇ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈಶ್ವರಪ್ಪ ಮನೆಗೆ ಭೇಟಿ

ಈಶ್ವರಪ್ಪ ಮನೆಗೆ ಬಂದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು ಈಶ್ವರಪ್ಪ ಅವರಿಗೆ ಹಾರ ಹಾಕಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ, ನೀನು ಗೆಲ್ಲುತ್ತೀಯ ಒಳ್ಳೆಯದಾಗಲಿ ಎಂದು ಈಶ್ವರಪ್ಪ ಶುಭ ಹಾರೈಸಿದರು. ಈ ವೇಳೆ ಚನ್ನಬಸಪ್ಪ ಮಾತನಾಡಿ, ಈಶ್ವರಪ್ಪ ಅವರು ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದೇ ವೇಳೆ ಈಶ್ವರಪ್ಪ ಪತ್ನಿಯ ಆಶೀರ್ವಾದವನ್ನೂ ಚನ್ನಬಸಪ್ಪ ಪಡೆದುಕೊಂಡರು.

ಇದನ್ನೂ ಓದಿ: Karnataka Elections : ಏಪ್ರಿಲ್‌ 24ರ ನಂತರವೇ ರಾಜ್ಯಕ್ಕೆ ಮೋದಿ, ಮಿಲಿಟರಿ ಹೋಟೆಲ್‌ನಿಂದಲೇ ಬಿಜೆಪಿ ಪ್ರಚಾರ ಆರಂಭ!

ನಮಗೆ ಇದು ನಿರೀಕ್ಷೆ ಇರಲಿಲ್ಲ- ಪತ್ನಿ ಉಷಾರಾಣಿ ಸಂತಸ

ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಪಕ್ಷದ ಹಿರಿಯ ಕಾರ್ಯಕರ್ತ ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಶಿವಮೊಗ್ಗದ ಶಾಂತಮ್ಮ ಲೇಔಟ್‌ನಲ್ಲಿರುವ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚನ್ನಬಸಪ್ಪ ಅವರ ಪತ್ನಿ ಉಷಾರಾಣಿ, ನಮಗೆ ಇದು ನಿರೀಕ್ಷೆ ಇರಲಿಲ್ಲ. ಪಕ್ಷ ಇವರಿಗೆ ಒಂದು ಅವಕಾಶ ನೀಡಿದೆ. ಅನೇಕ ವರ್ಷಗಳಿಂದ ಇವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಪಕ್ಷ ಇವರಿಗೆ ಅವಕಾಶ ನೀಡಿದೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಇನ್ನೂ ಅನೇಕರು ಆಕಾಂಕ್ಷಿಗಳಿದ್ದರು. ಆದರೆ ಇವರನ್ನು ಪಕ್ಷ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಭಾವುಕರಾಗಿ ಹೇಳಿದರು.

ಹಿಂದುತ್ವವನ್ನು ಮುಂದುವರಿಸಿಕೊಂಡು‌ ಹೋಗ್ತೇನೆ- ಚನ್ನಬಸಪ್ಪ

ಪಕ್ಷ ಟಿಕೆಟ್ ಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳಷ್ಟು ದಿನದಿಂದ ಕೆಲಸ ಮಾಡುತ್ತಿದ್ದೆ. ಪಕ್ಷ ಈ ಸಂದರ್ಭದಲ್ಲಿ ನನ್ನನ್ನು ಗುರುತಿಸಿದೆ. ಈಶ್ವರಪ್ಪ ಅವರು ನಮ್ಮನ್ನು ಬೆಳೆಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹೋಗುತ್ತೇನೆ. ಯಡಿಯೂರಪ್ಪ ಅವರು ಹೋರಾಟದ ಕಾರ್ಯವೈಖರಿಯನ್ನು ಹೇಳಿಕೊಟ್ಟವರು. ಕಾರ್ಯಕರ್ತರು ಬಹಳ ಸಂತೋಷದಿಂದ ಇದ್ದಾರೆ. ಕಾರ್ಯಕರ್ತರ ಪರಿಶ್ರಮದ ಪರಿಣಾಮ ಟಿಕೆಟ್ ದೊರೆತಿದೆ. ಶಿವಮೊಗ್ಗ ಹಿಂದುತ್ವದ ನೆಲೆಯಾಗಿದೆ. ಹಿಂದುತ್ವಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದೇವೆ. ಅದನ್ನು ಮುಂದುವರಿಸಿಕೊಂಡು‌ ಹೋಗುತ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ವಾಜಪೇಯಿ ಅವರ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಅನೇಕ ಮಂದಿ ಆಕಾಂಕ್ಷಿಗಳು ಇದ್ದರು. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದರಿಂದ ಖುಷಿಯಾಗಿದೆ. ಆಕಾಂಕ್ಷಿಗಳು ಎಲ್ಲರೂ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ ಎಂದು ಚನ್ನಬಸಪ್ಪ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಚನ್ನಬಸಪ್ಪ ಗೆಲ್ಲುವವರೆಗೂ ಸುಮ್ಮನೆ ಕೂರುವುದಿಲ್ಲ- ಈಶ್ವರಪ್ಪ

ಶಿವಮೊಗ್ಗ ನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ವರಿಷ್ಠರ ಆಯ್ಕೆಯನ್ನು ಯಾರೂ ಪ್ರಶ್ನೆ ಮಾಡುವ ಹಾಗೆ ಇಲ್ಲ. ಚನ್ನಬಸಪ್ಪ ಗೆಲ್ಲುವವರೆಗೂ ಸುಮ್ಮನೆ ಕೂರುವುದಿಲ್ಲ. ಇವತ್ತಿಗೆ ಇದು ಮುಗಿದು ಹೋಗಿಲ್ಲ. ಪಕ್ಷದ ನಾಯಕರು ಎಲ್ಲವನ್ನೂ ಅಳೆದೂ ತೂಗಿ ನಿರ್ಧಾರ ಮಾಡಿರುತ್ತಾರೆ ಎಂದು ಈಶ್ವರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಚನ್ನಬಸಪ್ಪ ಬಿಜೆಪಿ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತ. ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಗರಸಭಾ ಅಧ್ಯಕ್ಷನಾಗಿ, ಪಾಲಿಕೆ ಆಡಳಿತ ಪಕ್ಷದ ನಾಯಕ, ಪಾಲಿಕೆ ಸದಸ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡಿದ ಅನುಭವ ಇದೆ. ಆಡಳಿತ ಅನುಭವ ಇರುವ ವ್ಯಕ್ತಿಗೆ ಬಿಜೆಪಿ ಮಣೆ ಹಾಕಿದೆ. ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧವಾಗಿರಬೇಕು. ಹೆಚ್ಚು ಅಂತರದಿಂದ ಚನ್ನಬಸಪ್ಪ ಅವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Elections : ಮಂಗಳೂರು ಉತ್ತರ ಟಿಕೆಟ್‌ ವಂಚಿತ ಮೊಯ್ದಿನ್‌ ಬಾವಾ ಕಾಂಗ್ರೆಸ್‌ಗೆ ಗುಡ್‌ಬೈ, ಜೆಡಿಎಸ್‌ ಸೇರ್ಪಡೆ

ಚನ್ನಬಸಪ್ಪ ಗೆಲುವಿಗೆ ಶ್ರಮಿಸುತ್ತೇನೆ- ಕಾಂತೇಶ್‌

ಬಿಜೆಪಿ ಪಕ್ಷ ನಮ್ಮ ತಂದೆಗೆ 37 ವರ್ಷ ಅವಕಾಶ ನೀಡಿದೆ. ಬೂತ್ ಕಾರ್ಯಕರ್ತನಿಂದ ಹಿಡಿದು ಉಪ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟಿದೆ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಪಕ್ಷ ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಿದೆ. ಅವರು ಪ್ರಾಮಾಣಿಕ ಕಾರ್ಯಕರ್ತರಾಗಿದ್ದಾರೆ. ನಮ್ಮ ತಂದೆಯವರ 7 ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಈ ಬಾರಿ ಅವರಿಗೆ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರ ಗೆಲುವಿಗೆ ಶ್ರಮಿಸುತ್ತೇನೆ. ಇದೇ ಕೊನೆಯ ಚುನಾವಣೆಯಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ನಿರೀಕ್ಷೆ ಇದೆ ಎಂದು ಈಶ್ವರಪ್ಪ ಪುತ್ರ ಕಾಂತೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version