Site icon Vistara News

Shivamogga Clash| ಮುಸ್ಲಿಂ ಮುಖಂಡ ಆಡಿದ ಪ್ರಚೋದನಾಕಾರಿ ಮಾತು ಪ್ರೇಮ್‌ ಸಿಂಗ್‌ಗೆ ಇರಿಯಲು ಪ್ರೇರಣೆ?

ಶಿವಮೊಗ್ಗ: ಶಿವಮೊಗ್ಗ ನಗದ ಅಮೀರ್‌ ಅಹ್ಮದ್‌ ಸರ್ಕಲ್‌ನಲ್ಲಿ ನಡೆದ ವೀರ್‌ ಸಾವರ್ಕರ್‌ ಫ್ಲೆಕ್ಸ್‌ ವಿವಾದದ ಬಳಿಕ ಕೆ.ಆರ್‌. ಪುರಂನ ರಸ್ತೆಯಲ್ಲಿ ನಡೆದ ಚೂರಿ ಇರಿತದ ಹಿಂದಿನ ಕಾರಣಗಳು ಒಂದೊಂದಾಗಿ ಬಯಲಾಗುತ್ತಿವೆ.

ಆವತ್ತು ಮುಖಂಡರೊಬ್ಬರು ಆಕ್ರೋಶಿತ ಮುಸ್ಲಿಂ ಯುವಕರನ್ನು ಉದ್ದೇಶಿಸಿ ಆಡಿದ ಮಾತೇ ಹಿಂಸೆಗೆ ಪ್ರಚೋದನೆ ನೀಡಿತೇ ಎನ್ನುವ ಪ್ರಶ್ನೆ ಎದುರಾಗಿದೆ. ಪೊಲೀಸರು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆವತ್ತು ಏನಾಗಿತ್ತು?
ಆಗಸ್ಟ್‌ ೧೫ರಂದು ಅಮೀರ್‌ ಅಹ್ಮದ್‌ ವೃತ್ತದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿ.ಡಿ. ಸಾವರ್ಕರ್‌ ಅವರು ಫ್ಲೆಕ್ಸ್‌ ಹಾಕಿದ್ದರು. ಆದರೆ, ಪ್ರತಿಬಾರಿಯೂ ತಾವು ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕೋ ಜಾಗದಲ್ಲಿ ಈ ಬಾರಿ ಸಾವರ್ಕರ್‌ ಫ್ಲೆಕ್ಸ್‌ ಇರುವುದನ್ನು ಕಂಡು ಮುಸ್ಲಿಂ ಯುವಕರು ಸಿಟ್ಟುಗೊಂಡರು. ತಕ್ಷಣವೇ ತಾವು ರೆಡಿ ಮಾಡಿದ್ದ ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ನ್ನು ತಂದರು. ಸಾವರ್ಕರ್‌ ಫ್ಲೆಕ್ಸ್‌ ತೆಗೆದು ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ತಡೆದು ಎಲ್ಲರನ್ನೂ ಓಡಿಸಿದರು.

ಈ ಹಂತದಲ್ಲಿ ಒಂದು ಕಡೆ ಮುಸ್ಲಿಂ ಯುವಕರ ಗುಂಪು ಒಂದು ಕಡೆ ಜಮಾವಣೆಯಾದರೆ, ಹಿಂದೂಗಳು ಇನ್ನೊಂದು ಕಡೆ ಜಮಾವಣೆಯಾಗಿದ್ದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಎರಡೂ ಗುಂಪುಗಳನ್ನು ಚದುರಿಸುವ ಪ್ರಯತ್ನ ನಡೆಸಿದರು.

ಈ ವೇಳೆ, ಮುಸ್ಲಿಂ ಯುವಕರ ಗುಂಪನ್ನು ಉದ್ದೇಶಿಸಿ ಮುಖಂಡನೊಬ್ಬ ಆಡಿದ ಮಾತು ಅವರನ್ನು ಪ್ರಚೋದಿಸಿತು ಎಂದು ಹೇಳಲಾಗುತ್ತಿದೆ. ಆ ವ್ಯಕ್ತಿಯ ಮಾತು ಕೇಳಿ ಯುವಕರು ಉದ್ರಿಕ್ತರಾಗಿ ಕಿರುಚುವುದು, ಕೇಕೆ ಹಾಕಿ ಕುಣಿಯುವುದು ವಿಡಿಯೊದಲ್ಲಿ ದಾಖಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಪ್ರೇಮ್‌ ಸಿಂಗ್‌ ಮೇಲೆ ಚೂರಿಯಿಂದ ಇರಿಯಲಾಗಿದೆ.

ಆ ಮುಖಂಡ ಉರ್ದು ಭಾಷೆಯಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದ್ದಾನೆ. ʻʻಅಲ್ಲಾಹ್ ಹೆಸರಿನಲ್ಲಿ ಕಲ್ಲೆತ್ತಿಕೊಳ್ಳಿʼʼ ಎನ್ನುವ ಆತ ಎದುರು ಗುಂಪಿನವರ ತಾಯಂದಿರ ಬಗ್ಗೆಯೂ ಕೆಟ್ಟ ಮಾತು ಆಡಿದ್ದಾನೆ. ʻʻಎದುರಾಳಿ ಕಡೆಯವರು ನಮಗೆ ಏನೂ ಮಾಡಲಾರರುʼʼ ಎನ್ನುವ ಮುಖಂಡನ ಮಾತು ಕೇಳಿದ ಕೂಡಲೇ ಯುವಕರ ಗುಂಪು ಕೇಕೆ ಹಾಕಿ ಕುಣಿಯುತ್ತದೆ. ಇದಾದ ಕೆಲವೇ ನಿಮಿಷಗಳಲ್ಲಿ ಮನೆ ಮುಂದೆ ನಿಂತಿದ್ದ ಅಮಾಯಕ ವ್ಯಾಪಾರಿ ಪ್ರೇಮ್ ಸಿಂಗ್ ಮೇಲೆ ನಡೆದ ಹಲ್ಲೆ ಮತ್ತು ಚೂರಿ ಇರಿತ ನಡೆಯುತ್ತದೆ.

ಇದೀಗ ಪೊಲೀಸರು ಈ ವಿಡಿಯೊ, ಅದರಲ್ಲಾಡಿರುವ ಮಾತು ಮತ್ತು ಆಡಿದ ಮುಖಂಡನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ| Shivamogga Clash | ಸಿದ್ದರಾಮಯ್ಯ ಪ್ರಚೋದನೆಯೇ ಸಾವರ್ಕರ್‌ ಬಗ್ಗೆ ವಿರೋಧ ಹೆಚ್ಚಲು ಕಾರಣ ಎಂದ ಆರಗ

Exit mobile version