ಶಿವಮೊಗ್ಗ: ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಎಲ್ಲೆಡೆ ಆರೋಗ್ಯ (Health everywhere) ಮತ್ತು ಎಲ್ಲರಿಗೂ ಆರೋಗ್ಯ” ಘೋಷ ವಾಕ್ಯದಡಿ ಪ್ರಾಯೋಗಿಕವಾಗಿ ಸ್ಥಾಪಿಸಲು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜಗಳೂರು ತಾಲೂಕಿನ ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದೆ.
ಕೇಂದ್ರ ಸರ್ಕಾರ 2017ರಲ್ಲಿ ದೇಶದ ಎಲ್ಲೆಡೆ 1.50 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಟೆಸ್ಲಾನ್ ಟೆಕ್ನಾಲಜೀಸ್ ನೂತನವಾಗಿ ರೂಪಿಸಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಈ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು. ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹ, ಸಿರಿಗೆರೆ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ಬೆಂಗಳೂರು ಟೆಸ್ಲಾನ್ ಟೆಕ್ನಾಲಜೀಸ್ ಅವರನ್ನು ಒಳಗೊಂಡು ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಇದನ್ನೂ ಓದಿ: Land For Job Scam: ರಾಬ್ಡಿ ದೇವಿ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ವಿಚಾರಣೆ ನಡೆಸಿದ ಸಿಬಿಐ, ಪುತ್ರಿ ಹೇಳಿದ್ದೇನು?
ಈ ಮಹತ್ವದ ಯೋಜನೆಗೆ ಸರ್ಜಿ ಆಸ್ಪತ್ರೆಯು ಅಗತ್ಯ ತಜ್ಞ ವೈದ್ಯರ ಸೇವೆಯನ್ನು ಒದಗಿಸುವ ಮೂಲಕ ಪ್ರಧಾನ ಮಂತ್ರಿಗಳ ಕನಸಾಗಿಸಲು ಮುಂದಾಗಿದೆ. ಈ ಮೂಲಕ ಉನ್ನತ ಮಟ್ಟದ ವೈದ್ಯಕೀಯ ಸೇವೆಯನ್ನು ಪ್ರತಿ ಹಳ್ಳಿಗಳಿಗೆ ತಲುಪಿಸಲು ಡಾ. ಧನಂಜಯ ಸರ್ಜಿ ಅವರು ಪ್ರಥಮ ಹೆಜ್ಜೆ ಇಟ್ಟಂತಾಗಿದೆ. ಟೆಸ್ಲಾನ್ ಟೆಕ್ನಾಲಜೀಸ್ ಸಂಸ್ಥೆಯು ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಯೋಜನೆಯ ಅನುಷ್ಠಾನಕ್ಕೆ ಮುಂದಾಗಲಿದೆ. ಈ ಒಡಂಬಡಿಕೆಗೆ ಸಹಿ ಮಾಡುವ ಮೂಲಕ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ದೇಶಕ್ಕೆ ಮಾದರಿಯಾಗಿಸುವ ನಿಟ್ಟಿನಲ್ಲಿ ಕಲ್ಪಿಸಲು ಸಂಕಲ್ಪ ಮಾಡಿದಂತಾಗಿದೆ.
ಪಲ್ಲಾಗಟ್ಟೆಯ ಬೆಸ್ಕಾಂ ನಿವೃತ್ತ ಅಧೀಕ್ಷಕ ಎಂಜಿನಿಯರ್ ವೈ.ಕೆ. ಬಸವರಾಜಪ್ಪ ಮತ್ತು ಕುಟುಂಬದವರು ಈ ಯೋಜನೆಗೆ ಆರ್ಥಿಕ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ಕೆ. ಬಸವರಾಜ್, ಜಿಲ್ಲಾ ವೈದ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಕ್ಷಯ ರೋಗ ವಿಶೇಷಾಧಿಕಾರಿ ಡಾ.ಗಂಗಾಧರ, ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ, ಸೂರ್ಯ ಶಂಕರ್, ಹರ್ಷ ಮರೂರ್ ಹಾಗೂ ಬೆಂಗಳೂರಿನ ಒಪೆಲ್ ಕಂಪನಿಯ ರಾಘವೇಂದ್ರ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: CM Basavaraja Bommai : 2 ಗಂಟೆ ಬಂದ್ ಎಲ್ಲಾದರೂ ಕೇಳಿದ್ದೀರಾ? ಅದ್ಯಾವ ಸೀಮೆಯ ಬಂದ್?; ಸಿಎಂ ಬೊಮ್ಮಾಯಿ ವ್ಯಂಗ್ಯ
“ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಹಾಗೂ ದಾನಿಗಳ ಸಹಾಯದಿಂದ ತಂತ್ರಜ್ಞಾನ ಸಕ್ರಿಯಗೊಳಿಸಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯ ಮತ್ತು ದೂರದ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಧನಂಜಯ ಸರ್ಜಿ ಅವರು ತಮ್ಮ ಆಸ್ಪತ್ರೆಗಳಿಂದ ಪರಿಣಿತ ವೈದ್ಯರ ಸೇವೆಯನ್ನು ಒದಗಿಸಲಿದ್ದು, ಇದು ಯೋಜನೆಗೆ ಮತ್ತಷ್ಟು ಬಲ ತಂದಿದೆ. ಅಲ್ಲದೇ ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ” ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ಕೆ. ಬಸವರಾಜ್ ಹೇಳಿದರು.
ಇದನ್ನೂ ಓದಿ: KPSC Recruitment : ಹೈಕದ ಗ್ರೂಪ್ ಸಿ ಹುದ್ದೆಗಳಿಗೆ ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ