Site icon Vistara News

Shivamogga News | ಬಿಜೆಪಿಯಿಂದ ಜ. 21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ

bjp District President T.D. Meghraj

ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಕಾರ್ಯಕ್ರಮ ಯಶಸ್ವಿಯಾಗಿದ್ದು, 2ನೇ ಹಂತದಲ್ಲಿ ಜ. 21 ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನವನ್ನು ಆಯೋಜಿಸಲಾಗಿದೆ, ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿಯಲ್ಲಿ ಚಾಲನೆ ಸಿಗಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಣಿ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ತಲುಪಲಿದ್ದೇವೆ. ವಿಜಯಪುರದ ಸಿಂಧಗಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾ‌ರ್ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ | Black Magic : ಕೊಡಗಿನ ದಟ್ಟಾರಣ್ಯದ ಮಧ್ಯೆ ವಾಮಾಚಾರ; ಬೆಟ್ಟತ್ತೂರು ಗ್ರಾಮದಲ್ಲಿ ಕೋಳಿ ಬಲಿ, ಗ್ರಾಮಸ್ಥರಲ್ಲಿ ಆತಂಕ

ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮವಾಗಿದ್ದು ಬಿಜೆಪಿಯನ್ನು ಗೆಲುವಿನ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ. 2 ಕೋಟಿ ಮತದಾರರನ್ನು ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರು ತಲುಪುತ್ತಾರೆ. 10 ವಿಭಾಗಗಳಲ್ಲಿ, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ, 312 ಮಂಡಲಗಳಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿಯ ಸಾಧನೆಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರಗಳ ಸಾಧನೆಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಿದ್ದೇವೆ. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಿದ್ದೇವೆ. ಬಿಜೆಪಿ ಸರ್ಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆಗಿರುವ ಬಗ್ಗೆ ತಿಳಿಸಲಿದ್ದೇವೆ. ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಯಲಿದೆ ಎಂದು ವಿವರಿಸಿದರು.

ಜನವರಿ 21 ರಿಂದ ಅಭಿಯಾನ ಆರಂಭ ಆಗಲಿದ್ದು, ಅದಕ್ಕಾಗಿ ಈಗಾಗಲೇ ವ್ಯವಸ್ಥಿತವಾಗಿ ಪೂರ್ವಭಾವಿ ಸಿದ್ಧತೆಗಳು ನಡೆದಿವೆ. ಜಿಲ್ಲಾ ಮತ್ತು ಮಂಡಲಗಳಲ್ಲಿ ಸಭೆಗಳನ್ನು ನಡೆಸಿ ಬಿಜೆಪಿಯು ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಗುರಿಯನ್ನು ಹಾಕಿಕೊಂಡಿದೆ. ಅದಕ್ಕಾಗಿ ತಳಹಂತದಿಂದ ಪಕ್ಷವನ್ನು ಬಲಪಡಿಸುವುದು ಸೇರಿದಂತೆ ವಿವಿಧ ಕಾರ್ಯತಂತ್ರಗಳನ್ನು ಮಾಡಲಾಗುತ್ತಿದೆ. ನಮ್ಮ ‘ಡಬಲ್ ಎಂಜಿನ್’ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಂಖ್ಯೆ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಇದ್ದು, ಆ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೆ ಮನೆಮನೆಗೆ ಕರಪತ್ರ ಹಂಚುವುದು, ಗೋಡೆಗಳ ಮೇಲೆ ಬಿಜೆಪಿ ಸಾಧನೆ ಬಿಂಬಿಸುವ ಪೇಂಟಿಂಗ್ ಹಾಗೂ ಸದಸ್ಯತ್ವ ಅಭಿಯಾನ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಒಳಗೊಂಡ ಕರಪತ್ರಗಳನ್ನು ಸುಮಾರು ಒಂದು ಕೋಟಿ ಮನೆಗಳಿಗೆ ಹಂಚುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ | Amala Paul | ಎರ್ನಾಕುಲಂನ ದೇಗುಲ ಪ್ರವೇಶಕ್ಕೆ ನಿರ್ಬಂಧ! ಬೇಸರ ವ್ಯಕ್ತಪಡಿಸಿದ ಹೆಬ್ಬುಲಿ ನಟಿ ಅಮಲಾ ಪೌಲ್

ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ಮನೆ, ದ್ವಿಚಕ್ರವಾಹನ ಹಾಗೂ ಕಾರುಗಳಿಗೆ ಅಂಟಿಸಿಕೊಳ್ಳಲು ಮೂರು ನಮೂನೆಯ ಸ್ಪಿಕರ್‌ಗಳನ್ನು ವಿತರಿಸಲಾಗುವುದು. ಸರ್ಕಾರದ ಸಾಧನೆ ಬಿಂಬಿಸಲು ಹಾಗೂ ಜನ ಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಹಾಗೂ ಯೋಜನೆಗಳ ಮಾಹಿತಿ ನೀಡುವ ಗೋಡೆ ಪೇಂಟಿಂಗ್‌ಗಳನ್ನು ಮಾಡಿಸಲಾಗುತ್ತದೆ. ಈ ಅಭಿಯಾನದ ಅವಧಿಯಲ್ಲಿ ಒಂದು ಕೋಟಿ ಹೊಸ ಸದಸ್ಯರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?

ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್‌ಲೈನ್‌ ಇರಲಿದ್ದು (ಮಿಸ್ಡ್‌ ಕಾಲ್), ನೋಂದಣಿಯಾದ ಸದಸ್ಯರ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನೇರವಾಗಿ ನೋಡಬಹುದು. ನೋಂದಣಿ ಪ್ರಕ್ರಿಯೆ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಈ ತಿಂಗಳ ಜನವರಿ 29ರಂದು ‘ಮನ್ ಕೀ ಬಾತ್’ ಕಾರ್ಯಕ್ರಮವು ಕರ್ನಾಟಕದ ಪಾಲಿಗೆ ಮತ್ತಷ್ಟು ವಿಶೇಷವಾಗಿರಲಿದೆ. ಶೇ. 90ರಷ್ಟು ಬೂತ್‌ ಮಟ್ಟದ ಕಾರ್ಯಕರ್ತರು ಮನ್ ಕೀ ಬಾತ್ ಆಲಿಸಿ ದಾಖಲೆ ಮಾಡಲಿದ್ದಾರೆ ಎಂದು ಟಿ.ಡಿ. ಮೇಘರಾಜ್ ಹೇಳಿದರು.

ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ, ಜಿಲ್ಲಾ ಉಪಾಧ್ಯಕ್ಷ ಮಧುಸೂದನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಶ್ರೀನಾಥ್, ಶಿವರಾಜ್, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ರತ್ನಾಕರ್, ಜಿಲ್ಲಾ ಮಾಧ್ಯಮ ಸಂಚಾಲಕ ಕೆ.ವಿ.ಅಣ್ಣಪ್ಪ ಮತ್ತಿತರರು ಇದ್ದರು.

ಇದನ್ನೂ ಓದಿ | Swiggy | ತುರ್ತು ಸಂದರ್ಭದಲ್ಲಿ ಸ್ವಿಗ್ಗಿ ವಿತರಣಾ ಪ್ರತಿನಿಧಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ

Exit mobile version