Site icon Vistara News

Shivamogga News | ವೈಯಕ್ತಿಕ ವಿಷಯಕ್ಕೆ ನಡೆದ ಹಲ್ಲೆಗೆ ಕೋಮು ಬಣ್ಣ; ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್‌ ಮನವಿ

Congress appeal shivamogga Communal conflict

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಮತ್ತು ಕೋಮು ಸಂಘರ್ಷಕ್ಕೆ ಆಸ್ಪದ ಕೊಡಬಾರದು. ಸಾಗರದಲ್ಲಿ ಸಹ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ನಡೆದಿದೆ. ಆದರೆ, ಕೋಮು ಗಲಭೆಗೆ ಕೆಲವರು ಪ್ರಚೋದನೆ ನೀಡುತ್ತಿದ್ದು, ಇದನ್ನು ತಡೆಯಬೇಕು ಎಂದು ಶಿವಮೊಗ್ಗ (Shivamogga News) ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ.

ಶುಕ್ರವಾರ (ಜ.೧೩) ಬೆಳಗ್ಗೆ ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗವು, ಸಾಗರದಲ್ಲಿ ಇತ್ತೀಚೆಗೆ ಸುನೀಲ್ ಮತ್ತು ಸಮೀರ್ ನಡುವಿನ ವೈಯಕ್ತಿಕ ಕಾರಣಗಳಿಂದಾದ ಹಲ್ಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಅದರ ಮತೀಯ ಸಂಘಟನೆಗಳು ಕೋಮುಗಲಭೆಯನ್ನು ಪ್ರಚೋದಿಸುವ ಪ್ರಯತ್ನವನ್ನು ನಡೆಸುತ್ತಿರುವುದು ಆಘಾತಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದೆ.

ಸುನೀಲ್ ತನ್ನ ಸಹೋದರಿಯನ್ನು ಚುಡಾಯಿಸಿದ ಎಂಬ ಕಾರಣಕ್ಕಾಗಿ ಸಮೀರ್ ಆತನ ಮೇಲೆ ಹಲ್ಲೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಇದನ್ನು ಬಹಿರಂಗಗೊಳಿಸುವ ಮೂಲಕ ಪೊಲೀಸ್ ಇಲಾಖೆಯು ಕೋಮು ಸಂಘಟನೆಗಳು ನಡೆಸಿದ್ದ ಕೋಮು ಸಂಘರ್ಷದ ಹುನ್ನಾರವನ್ನು ಹತ್ತಿಕ್ಕಿದೆ. ಸುನೀಲ್ ಮೇಲಿನ ಹಲ್ಲೆ ಖಂಡನೀಯವಾಗಿದೆ. ಆದರೆ ಸುನೀಲ್ ಮೇಲಿನ ಹಲ್ಲೆಗೆ ಹೆಣ್ಣು ಮಗಳೊಬ್ಬಳನ್ನು ಚುಡಾಯಿಸಿದ್ದೇ ಕಾರಣ ಎಂಬುದು ಈಗ ತಿಳಿದಿದೆ. ಇದು ವೈಯುಕ್ತಿಕ ಕಾರಣಕ್ಕಾಗಿ ನಡೆದ ಗಲಾಟೆ ಎಂಬುದು ತನಿಖೆಯಿಂದ ಬಯಲಾಗಿದೆ. ಆದರೆ, ಈ ವಿಷಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಯೇ ಸಂಶಯಾಸ್ಪದವಾಗಿದೆ ಎಂದು ಹೇಳುವ ಮೂಲಕ ಸಾಗರದ ಬಿಜೆಪಿ ಶಾಸಕರು, ಹಿಂದು ಸಂಘಟನೆಗಳು ಪೊಲೀಸ್ ಇಲಾಖೆಯ ನೈತಿಕ ಶಕ್ತಿಯನ್ನು ಕುಂದಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ | Santro Ravi Case | ಕುಖ್ಯಾತ ಕ್ರಿಮಿನಲ್‌ ಸ್ಯಾಂಟ್ರೋ ರವಿ ಬಂಧನ ಖಚಿತಪಡಿಸಿದ ಪೊಲೀಸರು

ಜಿಲ್ಲಾ ಪೊಲೀಸ್ ಇಲಾಖೆಯು ಯಾವ ರಾಜಕೀಯ ಒತ್ತಡಗಳಿಗೂ ದೃತಿಗೆಡಬೇಕಾಗಿಲ್ಲ. ಈಗಾಗಲೇ ಕಳೆದ 3 ವರ್ಷಗಳಿಂದ ಕೋವಿಡ್ ಹಾಗೂ ಶಿವಮೊಗ್ಗ ನಗರದಲ್ಲಿ ನಡೆದ ಕೆಲವು ಘಟನೆಗಳು ನಗರದ ಮಧ್ಯಮ ವರ್ಗದ ಜನರು, ದಿನಗೂಲಿ ಕಾರ್ಮಿಕರು, ವ್ಯಾಪಾರಸ್ಥರು ಸಂಕಷ್ಟಪಡುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋಮು ಸಂಘರ್ಷ ಹುಟ್ಟು ಹಾಕಿ ಶಾಂತಿ-ಸೌಹಾರ್ದತೆಯನ್ನು ಕದಡುವ ರಾಜಕೀಯ ಪ್ರೇರಿತ ಸಂಚುಗಳು ಇನ್ನಷ್ಟು ನಡೆಯುವ ಸಾಧ್ಯತೆಗಳಿವೆ. ಎರಡು ಕೋಮುಗಳಿಗೆ ವ್ಯಕ್ತಿಗಳ ವೈಯುಕ್ತಿಕ ಕಾರಣಗಳ ಗಲಾಟೆಗಳಿಗೂ ಕೋಮು ದ್ವೇಷದ ಬಣ್ಣ ಬಳಿದು ಸಂಘರ್ಷಕ್ಕೆ ಪ್ರಚೋದನೆ ನೀಡಲು ಮತೀಯ ಸಂಘಟನೆಗಳು ಹಾತೊರೆಯುತ್ತಲೇ ಇರುತ್ತವೆ. ಪೊಲೀಸ್ ಇಲಾಖೆಯು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಇದಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎನ್ ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್ ಪಿ ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್. ಕುಮಾರೇಶ್, ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Lisa Marie Presley | ಅಮೆರಿಕನ್‌ ಖ್ಯಾತ ಗಾಯಕ ಎಲ್ವಿಸ್ ಪ್ರೀಸ್ಲಿ ಪುತ್ರಿ, ಸಂಗೀತಗಾರ್ತಿ ಲಿಸಾ ಮೇರಿ ಪ್ರೀಸ್ಲಿ ನಿಧನ

Exit mobile version