ಸೊರಬ: ಜನವರಿಯಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್ 19 ಏಕದಿನ ವಿಶ್ವಕಪ್‌ಗೆ (U-19 World Cup) ಸೊರಬ ತಾಲೂಕಿನ ಹರೀಶಿ ಗ್ರಾಮದ 18 ವರ್ಷದ ಆದಿತ್ಯ ಹೆಗಡೆ (Aditya Hegde) ಸ್ಕಾಟ್ಲೆಂಡ್ ತಂಡವನ್ನು (Scotland Team) ಪ್ರತಿನಿಧಿಸಲಿದ್ದು, ಈ ಮೂಲಕ ತಾನು ಹುಟ್ಟಿದ ಹರೀಶಿ ಗ್ರಾಮವನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾನೆ.
ಜನವರಿ 19 ರಿಂದ ಫೆಬ್ರವರಿ 11ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಯು-19 ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಒಟ್ಟು 8 ತಂಡಗಳಲ್ಲಿ ಸ್ಕಾಟ್ಲೆಂಡ್ ಕೂಡ ಒಂದಾಗಿದ್ದು, ಇದರಲ್ಲಿ 18 ವರ್ಷದ ಆದಿತ್ಯ ಹೆಗಡೆ ಆಲ್ರೌಂಡ್ ಆಟಗಾರ ಎಂದು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಹೊರ ರಾಷ್ಟ್ರದಲ್ಲಿ ಮೊದಲ ಬಾರಿಗೆ ತಾಲೂಕಿನ ಹರೀಶಿ ಎಂಬ ಪುಟ್ಟ ಗ್ರಾಮದ ಪೋರ ಆಡುತ್ತಿರುವುದು ಗ್ರಾಮದ ಹೆಗ್ಗಳಿಕೆಗೆ ಕಾರಣವಾಗಿದೆ.
ಚಂದ್ರಗುತ್ತಿ ಹೋಬಳಿ ಹರೀಶಿ ಗ್ರಾಮದ ಡಾ. ವಿಜಯ ಹೆಗಡೆ ಮತ್ತು ಶುಭ ಹೆಗಡೆ ದಂಪತಿಗಳ ಪುತ್ರ ಆದಿತ್ಯ ಹೆಗಡೆ. ಡಾ. ವಿಜಯ ಹೆಗಡೆ ಕಳೆದ ಹಲವು ವರ್ಷಗಳಿಂದ ಸ್ಕಾಟ್ಲೆಂಡ್‍ನ ಅಬರ್ಡೀನ್ ಎಂಬಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಎಡಗೈ ಬ್ಯಾಟ್ಸ್‌ಮನ್ ಮತ್ತು ಬೌಲರ್
ಆದಿತ್ಯ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಸ್ಕಾಟ್ಲೆಂಡ್‍ನ ದೇಶೀಯ ಕ್ರಿಕೆಟ್‍ನಲ್ಲಿ ಹೆಚ್ಚಿನ ರನ್ ಮತ್ತು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಅಲ್ಲಿನ ಕ್ರಿಕೆಟ್ ಆಯ್ಕೆ ಸಮಿತಿ ಯು-19 ತಂಡಕ್ಕೆ ಆಯ್ಕೆ ಮಾಡಿದೆ. ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ತಾಯಿ ಶುಭ ಹೆಗಡೆ ಅವರ ತವರು ಮನೆ ಶಿವಮೊಗ್ಗ. ಹೀಗಾಗಿ ಶಾಲಾ ರಜಾ ದಿನಗಳಲ್ಲಿ ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ ನಾಗರಾಜ್ ಹೆಚ್ಚಿನ ತರಬೇತಿ ನೀಡಿ, ಪರಿಪೂರ್ಣ ಆಟಗಾರನನ್ನಾಗಿ ರೂಪಿಸಿದ್ದಾರೆ.
ಆದಿತ್ಯ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ ಕಾರಣ ಡಾ.ವಿಜಯ ಹೆಗಡೆ ತರಬೇತಿ ನೀಡಲು ನಿರ್ಧರಿಸಿದರು. ತಾವಿದ್ದ ನೆಲದಲ್ಲಿ ರಣಜಿ ಆಟಗಾರ ಅಂಜು ಮದಕವಿ, ಸಂಜು ಮದಕವಿ ಎಂಬುವವರು ಕೋಚ್ ಆಗಿ ದೊರೆತರು. ಅವರ ಬಳಿ ಲೆಫ್ಟ್‌ಹ್ಯಾಂಡ್ ಬ್ಯಾಟ್ಸ್‌ಮನ್, ಬೌಲರ್ ಆಗಿ ಪರಿಣತಿ ಪಡೆದಿದ್ದಾರೆ.
ಇದನ್ನೂ ಓದಿ: Vastu Tips: ಅದೃಷ್ಟ, ಸಂಪತ್ತು ಹೊತ್ತು ತರುವ ಬಿದಿರನ್ನು ಹೀಗೆ ಬೆಳೆಸಿ
ಅಂಡರ್ 19 ವಿಶ್ವಕಪ್‍ಗೆ ಆಯ್ಕೆಯಾಗಿರುವುದಕ್ಕೆ ಸಂತಸ ತಂದಿದೆ. ಕ್ರಿಕೆಟ್‍ನ ಆಸಕ್ತಿ ಮತ್ತು ಉತ್ತಮ ಪ್ರದರ್ಶನ ತೋರಲು ಕರ್ನಾಟಕದ ಕೋಚರ್‌ಗಳು ಕಾರಣ. ಕನ್ನಡನಾಡು ಮತ್ತು ಹುಟ್ಟಿ ಬೆಳೆದ ಹರೀಶಿ ನೆಲದ ಸೊಗಡನ್ನು ಎಂದಿಗೂ ಮರೆಯುವುದಿಲ್ಲ. ಭಾರತ ಬಲಿಷ್ಠ ತಂಡವಾಗಿದ್ದು, ಅವರನ್ನು ಎದುರಿಸುವುದು ಕಠಿಣ ಸವಾಲು. ಸೂಪರ್ ಸಿಕ್ಸ್ ಹಂತದಲ್ಲಿ ಭಾರತವನ್ನು ಎದುರಿಸುವ ಅವಕಾಶ ದೊರೆತರೆ ಅದೇ ನನ್ನ ಸುದೈವ. ಬೂಮ್ರಾ ನನ್ನ ನೆಚ್ಚಿನ ಬೌಲರ್. ಅವರಿಂದ ಕಲಿಯುವುದು ಬಹಷ್ಟಿದೆ.
— ಆದಿತ್ಯ, ಅಂಡರ್ 19 ವಿಶ್ವಕಪ್ ಸ್ಕಾಟ್ಲೆಂಡ್ ತಂಡದ ಆಟಗಾರ
ಆದಿತ್ಯನ ಕ್ರಿಕೆಟ್ ಪ್ರತಿಭೆ ಅನಾವರಣಗೊಂಡಿದ್ದೇ ಗ್ರಾಮೀಣ ಮಟ್ಟದಲ್ಲಿ. ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ ಮಗನಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದ್ದೇವೆ. ಸದ್ಯ ವಿಶ್ವಕಪ್ ಕ್ರಿಕೆಟ್‍ನಲ್ಲಿ ಹೆಚ್ಚಿನ ಗಮನ ಹರಿಸಿದ್ದಾನೆ. ನಂತರ ಲಂಡನ್ ಯೂನಿವರ್ಸಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಧ್ಯಯನ ಮುಂದುವರಿಯಲಿದೆ.
— ಡಾ. ವಿಜಯ ಹೆಗಡೆ, ಶುಭ ಹೆಗಡೆ (ಆದಿತ್ಯನ ತಂದೆ-ತಾಯಿ)
ಮೊಮ್ಮಗ ಸ್ಕಾಟ್ಲೆಂಡ್ ತಂಡದಲ್ಲಿ ಆಯ್ಕೆಯಾಗಿರುವುದಕ್ಕೆ ಸಂತಸ ತಂದಿದೆ. ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ. ವರ್ಷಕ್ಕೆ ಒಂದೆರಡು ಬಾರಿ ಊರಿಗೆ ಬಂದು ಎರಡು ಅಥವಾ ಮೂರು ವಾರ ಇದ್ದು ಸ್ನೇಹಿತರೊಂದಿಗೆ ಕ್ರಿಕೇಟ್ ಆಟದಲ್ಲಿ ಕಾಲ ಕಳೆಯುತ್ತಿದ್ದ. ಟಿ.ವಿ.ಯಲ್ಲಿ ಅವನ ಆಟ ನೋಡಲು ಕಾತರಿಸುತ್ತಿದ್ದೇವೆ.
— ಡಾ. ಅಣ್ಣಪ್ಪ ಗಣಪತಿ ಹೆಗಡೆ, ಅನಿತಾ ಅಣ್ಣಪ್ಪ (ಆದಿತ್ಯನ ಅಜ್ಜ-ಅಜ್ಜಿ) ಹರೀಶಿ ಗ್ರಾಮ