ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಬಿ.ಎಚ್. ರಸ್ತೆಯಲ್ಲಿರುವ ಹೆರಿಟೇಜ್ ರೆಸ್ಟೋರೆಂಟ್ ಮತ್ತು ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು, ಆತನ ಪತ್ನಿ ಹಾಸನ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.
ಹಾಸನ ಜಿಲ್ಲೆ ಜಾವಗಲ್ ವಾಸಿ ಶೇಖ್ ಫರ್ವೀಜ್ ಬಿನ್ ಶೇಖ್ ಮಕ್ಬುಲ್ (೩೮) ಕೊಲೆಯಾದ ವ್ಯಕ್ತಿ. ಕೊಠಡಿ ನಂ. 103ರಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಮೃತನ ಪತ್ನಿ ಬಿ.ಬಿ. ಆಯೇಷಾ ಕೊಲೆ ಮಾಡಿರುವ ಶಂಕೆ ಇದ್ದು, ಆಕೆ ಹಾಸನ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ದಂಪತಿ ಇಬ್ಬರೂ ಗುರುವಾರ (ಜ.೧೨) ರಾತ್ರಿ 11.30ರ ಸುಮಾರಿಗೆ ಲಾಡ್ಜ್‌ಗೆ ಬಂದು ಕೊಠಡಿ ಪಡೆದು ಒಳಹೋಗಿದ್ದರು.
ಶುಕ್ರವಾರ (ಜ.೧೩) ಬೆಳಗಿನ ಜಾವ ಒಬ್ಬ ವ್ಯಕ್ತಿ ಕೊಠಡಿ ಒಳಗೆ ಹೋಗಿದ್ದು, 4 ಗಂಟೆಯ ಸುಮಾರಿಗೆ ಅದೇ ವ್ಯಕ್ತಿಯೊಂದಿಗೆ ಆಯೇಶಾ ಹೊರಹೋಗಿದ್ದಾಳೆ. ಬೆಳಗ್ಗೆ 11.10ರ ಸುಮಾರಿಗೆ ಹೋಟೆಲ್‌ನವರು ಕೊಠಡಿ ನೋಡಿದಾಗ ಕುತ್ತಿಗೆ ಹತ್ತಿರ ಕೊಯ್ದು ಗಾಯವಾಗಿ ಶೇಖ್ ಫರ್ವೀಜ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಘಟನೆಯನ್ನು ಸ್ಥಳೀಯ ಪೊಲೀಸ್‌ನವರಿಗೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಿಂದ ಶ್ವಾನದಳ ಮತ್ತು ಬೆರಳಚ್ಚು ತಂಡ ಧಾವಿಸಿದ್ದು, ಹೆಚ್ಚಿನ ತಪಾಸಣೆಗಾಗಿ ದಾವಣಗೆರೆಯಿಂದ ಪರಿಣಿತರನ್ನು ಕರೆಸಲಾಗಿದೆ. ತನಿಖೆ ಮುಂದುವರಿದಿದೆ.
ಇದನ್ನೂ ಓದಿ | Kantara Movie | ʻಕಾಂತಾರʼ ಪ್ರಭಾವದಿಂದ ದೈವದ ದರ್ಶನ ಸೇವೆಯನ್ನು ಕಣ್ತುಂಬಿಕೊಂಡ ನೂರಾರು ವಿದ್ಯಾರ್ಥಿಗಳು