ಸಾಗರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ (Rain) ನಗರದ ಅರಳೀಕಟ್ಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (Government school) ಕೋಣೆಯೊಂದರ ಚಾವಣಿ ಭಾನುವಾರ ಕುಸಿದಿದ್ದು, ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.
ಕಳೆದ ಭಾನುವಾರ ನಸುಕಿನ ಜಾವ ಶಾಲಾ ಕೊಠಡಿಯ ಚಾವಣಿ ಕುಸಿದು ಬಿದ್ದು, ಹೆಂಚು, ಪಕಾಸಿ ಧ್ವಂಸಗೊಂಡಿವೆ. ಶಾಲೆ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದೇ ಆದರೆ ಸಾಕಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅರಳೀಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದಾರು ಕೋಣೆಗಳು ಶಿಥಿಲಗೊಂಡು ಮಳೆಯಿಂದ ಸೋರುತ್ತಿವೆ. ಈ ಬಗ್ಗೆ ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್ ಡಿ ಎಂಸಿ ಅಧ್ಯಕ್ಷ ರಹಮತ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Congress Guarantee: ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಇಲಾಖೆಗೆ ಬೂಸ್ಟ್; ಸರ್ಕಾರದ ಬೊಕ್ಕಸ ಖಾಲಿ!
ಎಲ್‌ಕೆಜಿ ಯಿಂದ 7ನೇ ತರಗತಿ ಇದ್ದರೂ, ಮೂರು ಕೋಣೆಗಳಲ್ಲಿ ಮಾತ್ರ ಪಾಠ ಪ್ರವಚನ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಶಾಲೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮುಂದಾಗುವ ಅನಾಹುತಕ್ಕೆ ತಾಲೂಕು ಆಡಳಿತ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಕೋಣೆಯ ಚಾವಣಿ ಕುಸಿದ ವಿಷಯ ತಿಳಿದ ತಕ್ಷಣ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಸ್ಥಳಕ್ಕೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರು ಮತ್ತು ಇಸಿಒ ಅವರನ್ನು ಕಳುಹಿಸಿ ಹಾನಿಗೀಡಾದ ಕುರಿತು ವರದಿ ಸಲ್ಲಿಸಲು ತಿಳಿಸಿದ್ದಾರೆ.
ಇದನ್ನೂ ಓದಿ: Kusha Kapila: 6 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್
ಈ ಸಂದರ್ಭದಲ್ಲಿ ಶಾಲೆಯ ಬೆಟರ್ ಮೆಂಟ್ ಕಮಿಟಿಯ ಎಂ.ಟಿ.ಎಸ್ ರಶೀದ್, ರಫೀವುದ್ದೀನ್, ಡಿ ಕೆ ಎಸ್ ಅಕ್ಬರ್, ರಿಯಾಜ್ ಇದ್ದರು.