ಶಿವಮೊಗ್ಗ : ಸಾವರ್ಕರ್ ಫೋಟೊ ವಿವಾದ, ಚೂರಿ ಇರಿತ ಮುಂತಾದವುಗಳಿಂದ ಪ್ರಕ್ಷುಬ್ಧವಾಗಿದ್ದ ಶಿವಮೊಗ್ಗ (Shivamogga News) ನಗರದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. ನಗರದಲ್ಲಿ ಬಿಗು ಬಂದೋಬಸ್ತ್ ಮುಂದುವರಿಸಲಾಗಿದೆ. ಸೆಕ್ಷನ್ 144 ನಿಷೇಧಾಜ್ಞೆ ಮುಂದುವರಿದಿದೆ.
ಗುರುವಾರ (ಆ.18) ಸಂಜೆಗೆ 144 ಸೆಕ್ಷನ್ ಮುಕ್ತಾಯಗೊಳ್ಳಬೇಕಿತ್ತು. ಭಾನುವಾರದವರೆಗೆ ಸೆಕ್ಷನ್ ಮುಂದುವರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ಮಾಡಲಾಗಿದ್ದು, ನಗರದಲ್ಲಿ 21 ಕೆ.ಎಸ್.ಆರ್.ಪಿ. ಮತ್ತು 2 ಆರ್.ಎ.ಎಫ್ ತುಕಡಿಗಳು ಬೀಡು ಬಿಟ್ಟಿವೆ.
ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಪೊಲೀಸರಿಂದ ಹೆಚ್ಚಿನ ಬಂದೋಬಸ್ತ್ ಮುಂದುವರಿದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಸ್ವಾತಂತ್ರ್ಯೋತ್ಸವದ ದಿನ ನಡೆದ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಸಾವರ್ಕರ್ ಅವರ ಫೋಟೋವನ್ನು ಬಲವಂತವಾಗಿ ತೆಗೆಸುವ ಮೂಲಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ತದನಂತರ ಪ್ರೇಮ್ ಸಿಂಗ್ ಎಂಬವರಿಗೆ ಚೂರಿಯಿಂದ ಇರಿಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಇದುವರೆಗೂ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.