ಶಿವಮೊಗ್ಗ: ಭಾರಿ ಮಳೆಯಿಂದ (Shivamogga Rain) ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳು ಕುಸಿದಿದ್ದು, ಭದ್ರಾವತಿ ತಾಲೂಕಿನಲ್ಲಿ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರ ಬಿಡುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕೆಲ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಶಿವಮೊಗ್ಗದ ಶೇಷಾದ್ರಿಪುರಂನ 2ನೇ ಅಡ್ಡರಸ್ತೆಯಲ್ಲಿ ಧಾರಾಕಾರ ಮಳೆಗೆ ಮಾಜಿ ಕಾರ್ಪೊರೇಟರ್ ರಂಗಮ್ಮ ಹನುಮಂತಪ್ಪ ಅವರ ಮನೆ ಸೇರಿ ನಾಲ್ಕು ಮನೆಗಳು ಕುಸಿದಿವೆ. ಸೋಮವಾರ ರಾತ್ರಿ ಮನೆ ಬಿದ್ದಾಗ ಫೋನ್ ಮಾಡಿದರೂ ಯಾವೊಬ್ಬ ಅಧಿಕಾರಿ ಸ್ಪಂದಿಸಿಲ್ಲ ಎಂದು ರಂಗಮ್ಮ ಕಣ್ಣೀರು ಹಾಕಿದ್ದಾರೆ. ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.
ಇನ್ನು ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 5ನೇ ತಿರುವಿನಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ಬೆಳಗ್ಗೆ ಮನೆ ಕುಸಿದಿದ್ದು, ವೃದ್ಧೆಯೊಬ್ಬರು ಅಪಾಯದಿಂದ ಪಾರಾಗಿದ್ದಾರೆ. ವೃದ್ಧೆಗೆ ಎದುರು ಮನೆಯಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.
ಇದನ್ನೂ ಓದಿ Heavy Rain | ಮೊಹರಂ ಪೂಜೆ ಹೊತ್ತಿಗೆ ಗೋಡೆ ಕುಸಿತ; ಚಿಕ್ಕೋಡಿಯಲ್ಲಿ ನಾಲ್ವರಿಗೆ ಗಂಭೀರ ಗಾಯ
ಗೋಡೆ ಕುಸಿದು ಮಹಿಳೆ ಸಾವು
ನಿರಂತರವಾಗಿ ಸುರಿಯುತ್ತಿರುವ ರಣ ಮಳೆಗೆ ಭದ್ರಾವತಿ ತಾಲೂಕಿನ ಕಾಚಿಗೊಂಡನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ಭಾಗ್ಯಮ್ಮ (55) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತೆ ಭಾಗ್ಯಮ್ಮ ಅವರ ಪುತ್ರ ಕೃಷ್ಣ ಮೂರ್ತಿ (40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಲಾಶಯಗಳಿಂದ ಹೆಚ್ಚಿದ ಹೊರಹರಿವು
ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಜಲಾಶಯದ ಒಳ ಹರಿವು 76,000 ಕ್ಯೂಸೆಕ್ ಇತ್ತು. ಜಲಾಶಯ 183.8 ಅಡಿ ಭರ್ತಿಯಾದ ಹಿನ್ನೆಲೆಯಲ್ಲಿ 4 ಕ್ರಸ್ಟ್ ಗೇಟ್‌ಗಳ ಮೂಲಕ 56104.29 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇನ್ನು ಗಾಜನೂರಿನ ತುಂಗಾ ಜಲಾಶಯಕ್ಕೂ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ ಪ್ರಸ್ತುತ 46,600 ಕ್ಯೂಸೆಕ್ ಒಳ ಹರಿವು ಇದ್ದು, ಜಲಾಶಯ ಭರ್ತಿ ಆಗಿರುವುದರಿಂದ ಒಳಹರಿವಿನಷ್ಟೇ ನೀರು ಹೊರಕ್ಕೆ ಬಿಡಲಾಗುತ್ತಿದೆ. 21 ಗೇಟ್‌ಗಳ ಮೂಲಕ ನೀರು ಹೊರಕ್ಕೆ ಬಿಡುತ್ತಿದ್ದು, ಮತ್ತೆ ಕೋರ್ಪಲಯ್ಯ ಛತ್ರ ಮಂಟಪ ಮುಳುಗಿದೆ.
ಭದ್ರಾವತಿಯಲ್ಲಿ ಕಡಿಮೆಯಾಗದ ಪ್ರವಾಹ ಭೀತಿ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ ಸೋಮವಾರ ರಾತ್ರಿ 75 ಸಾವಿರ ಕ್ಯೂಸೆಕ್ ಹೊರಹರಿವು ಇತ್ತು. ನದಿ ತೀರದ ಕಾಲುವೆ ಮತ್ತಿತರ ಕಡೆಗಳಿಂದ ನದಿಗೆ ಅಪಾರ ಪ್ರಮಾಣದ ನೀರು ಸೇರುತ್ತಿರುವುದರಿಂದ 60 ಸಾವಿರ ಕ್ಯೂಸೆಕ್ ನೀರು ನದಿಯಲ್ಲಿ ಹರಿಯುತ್ತಿದೆ.
ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಮೂರು ಕಡೆ ಕಾಳಜಿ ಕೇಂದ್ರ ಸ್ಥಾಪನೆ ಮಾಡಿದ್ದು, 300ಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಂತ್ರಸ್ತರನ್ನು ಕಾಳಜಿ ಕೇಂದ್ರದಲ್ಲಿಯೇ ಮುಂದುವರಿಸಲು ತಾಲೂಕು ಆಡಳಿತ ನಿರ್ಧಾರ ಮಾಡಿದೆ ಎಂದು ಭದ್ರಾವತಿ ತಹಸೀಲ್ದಾರ್ ಆರ್.ಪ್ರದೀಪ್ ತಿಳಿಸಿದ್ದಾರೆ.
ಇದನ್ನೂ ಓದಿ | ತುಂಬಿ ಹರಿಯುತ್ತಿರುವ ನದಿಯಲ್ಲಿ ಮೀನು ಹಿಡಿಯಲು ಹೋದ ಮೀನುಗಾರ ನೀರುಪಾಲು