ಶಿವಮೊಗ್ಗ: ಸರ್ಕಾರಿ ನೌಕರರಲ್ಲಿ ಸ್ಥಿತಪ್ರಜ್ಞೆ ಹಾಗೂ ಸಮಯಪ್ರಜ್ಞೆ ಬಹಳ ಮುಖ್ಯ. ದಕ್ಷತೆಯಿಂದ ನಿಗದಿತ ಸಮಯದೊಳಗೆ ಜನರಿಗೆ ಕೆಲಸ ಮಾಡಿಕೊಡಬೇಕು. ಪಟ್ಟಭದ್ರ ಹಿತಾಸಕ್ತಿಗಳು ಅಲ್ಲೋಲಕಲ್ಲೋಲ ಮಾಡಲು ಪ್ರಯತ್ನಿಸುತ್ತವೆ. ಅದರೆ ದಕ್ಷತೆ, ಪ್ರಾಮಾಣಿಕತೆ, ಕಾರ್ಯಕ್ಷಮತೆಯಿಂದ ಅವರಿಗೆ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜವಾಬ್ದಾರಿ ಅರಿತು ಹುದ್ದೆಗೆ ನ್ಯಾಯ ಒದಗಿಸಿ. ದೇಶದಲ್ಲಿ ಅತ್ಯಂತ ದಕ್ಷ ನೌಕರರು ಎಂದು ಕರ್ನಾಟಕದ ಸರ್ಕಾರಿ ನೌಕರರು ಹೆಸರುವಾಸಿಯಾಗಿದ್ದಾರೆ. ಹಲವಾರು ದಶಕಗಳಿಂದ ಕೆಲಸ ಮಾಡಿರುವ ನೌಕರರು ಹಾಗೂ ಅಧಿಕಾರಿಗಳು ಕಾರಣ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಕರ್ತವ್ಯ ಹಾಗೂ ನೈತಿಕ ಜವಾಬ್ದಾರಿ ನಮ್ಮದು. ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ನಮ್ಮ ಹುದ್ದೆಗೆ, ಕರ್ತವ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇದರ ಮಹತ್ವ ಅರಿಯುವವವರೆಗೆ ನ್ಯಾಯ ನೀಡಲು ಆಗುವುದಿಲ್ಲ. ಆಡಳಿತ ಹಾಗೂ ಆಡಳಿತ ಎಂದರೇನು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ನಮ್ಮ ಪಾತ್ರವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಕರ್ನಾಟಕದ ಅಭಿವೃದ್ಧಿಗೆ ಕಾಣಿಕೆ ನೀಡಬಹುದು ಎಂದರು.
ತಮ್ಮ ಮಾತನ್ನು ಮುಂದುವರಿಸಿದ ಬೊಮ್ಮಾಯಿ ಅವರು, ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಕೆ ಮಾಡಬಾರದು. ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯ ಕೇಂದ್ರ ಸರ್ಕಾರಗಳ ಪಾತ್ರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರಿ ನೌಕರರ ಅಧಿಕಾರವನ್ನು ಜನಪರವಾಗಿ ಬಳಕೆ ಮಾಡಬೇಕೆ ಹೊರತು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಕೆ ಮಾಡಬಾರದು. ಕಾನೂನು ಬದ್ಧವಾಗಿ ಕೆಲಸ ಮಾಡಬೇಕು. ಬಡವರ ಪರವಾಗಿ ಕೆಲಸ ಮಾಡಿ. ವಿವರಣೆ ನೀಡುವ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ಬಡವನ ಬಗ್ಗೆ ಚಿಂತನೆ ಮಾಡಿ, ಅವನ ಕಣ್ಣೀರಿನ ನೆನಪು ಮಾಡಿಕೊಂಡು ನಿರ್ಣಯ ಮಾಡಬೇಕೇ ಹೊರತು ಶ್ರೀಮಂತರ ಪರವಾಗಿ ಅಲ್ಲ ಎಂದರು. ಬಡವರಿಗೆ, ಜನಸಾಮಾನ್ಯರಿಗೆ ಒಳ್ಳೆಯದಾಗುವ ಒಂದು ಸಕಾರಣವಿದ್ದರೆ ಆ ಕೆಲಸವನ್ನು ಮಾಡಿ. ಕಡತಗಳಲ್ಲಿ ಅಭಿಪ್ರಾಯಗಳನ್ನು ನಮೂದಿಸಬೇಕು,
ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡಲು ಆಡಳಿತ ಸುಧಾರಣಾ 2 ನೇ ಆಯೋಗ ತನ್ನ ಮಧ್ಯಂತರ ವರಡಿಯನ್ನು ನೀಡಿದೆ. ಅವುಗಳ ಸುಧಾರಣೆಗೆ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ. ಏಕಪಕ್ಷೀಯವಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ಒಂದೇ ಮನೋಭಾವದಿಂದ ಕೆಲಸ ಮಾಡಬೇಕು ಎಂದರು. ವಿವಿಧ ಮಾನದಂಡಗಳು, ವಿವಿಧ ಕ್ಷೇತ್ರಗಳಿಗೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ ಗೌರವಿಸುವ ಚಿಂತನೆ ಇದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.