ಶಿವಮೊಗ್ಗ: ಸಾಮಾನ್ಯವಾಗಿ ವಧು ಬೇಕಾದರೆ ಮದುವೆ ಬ್ರೋಕರ್ ಬಳಿ ಹೋಗಿ ಬಯೋಡೇಟಾ ಕೊಟ್ಟು ಹುಡುಕಿ ಕೊಡುವಂತೆ ಹೇಳುತ್ತೇವೆ, ಕೆಲವರು ಮಾಧ್ಯಮಗಳಲ್ಲಿ ಜಾಹೀರಾತು ಕೊಡಬಹುದು, ವಧೂವರರ ಸಮಾವೇಶಗಳಿಗೆ ಹೋಗಬಹುದು. ಆದರೆ ಇಲ್ಲೊಬ್ಬ ಯುವಕ ಶಿವಮೊಗ್ಗ ಎಸ್‌ಪಿ (Shivamogga SP) ಅವರಿಗೆ ಪತ್ರವನ್ನು ಬರೆದು ವಧು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಭದ್ರಾವತಿ ಮೂಲದ ಪ್ರವೀಣ ಎಂಬಾತ ಶಿವಮೊಗ್ಗ ಎಸ್‌ಪಿಗೆ ಪತ್ರ ಬರೆದಿದ್ದು, ಗೊಲ್ಲ ಜಾತಿಯ ಹೆಣ್ಮಗಳೇ ಬೇಕೆಂದು ಕೂಡ ಕಂಡಿಷನ್ ಹಾಕಿದ್ದಾರೆ.
ಪ್ರವೀಣನ ಪತ್ರದಲ್ಲಿ ಏನಿದೆ?
ಸಾಫ್ಟ್‌ವೇರ್ ಉದ್ಯೋಗಿ ಆಗಿದ್ದ ಪ್ರವೀಣ ಬರೆದಿರುವ ಪತ್ರದಲ್ಲಿ, ನಾನು ಭದ್ರಾವತಿ ನಗರದಲ್ಲಿ ಜನಿಸಿದ್ದು, ಗೊಲ್ಲ ಸಮುದಾಯಕ್ಕೆ ಸೇರಿದವನು. ನನ್ನ ತಂದೆ ಇತ್ತೀಚೆಗೆ ನಿಧನರಾಗಿದ್ದಾರೆ. ತಾಯಿ ನನ್ನೊಂದಿಗೆ ಇದ್ದು, ನನ್ನ ಅಣ್ಣ ಮದುವೆಯಾಗಿದ್ದಾರೆ. ಈ ಹಿಂದೆ ನಾನು ಸಾಫ್ಟ್‌ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿ ಮತ್ತು ಬೆಂಗಳೂರಿನ ಎಂ.ಸಿ.ಐ ಚಿಟ್ಸ್ ಕಂಪನಿ ಇಲ್ಲಿ ಕೆಲಸ ಮಾಡಿದ್ದೇನೆ.
ಭದ್ರಾವತಿಯಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ. ಇತ್ತೀಚೆಗಿನ ವಧು ಅನ್ವೇಷಣೆಯಲ್ಲಿ ಯಾವುದು ಸರಿಹೋಗದ ಕಾರಣ ತಮ್ಮ ಅಧೀನದಲ್ಲಿ ಯಾರಾದರೂ ಒಂದು ವಧು ಕಂಡು ಬಂದಲ್ಲಿ ನನಗೆ ತಿಳಿಸುವುದರ ಮೂಲಕ ನಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಬೇಕಾಗಿ ಕೇಳಿಕೊಂಡಿದ್ದಾರೆ. ಜತೆಗೆ ಅರ್ಜಿಯಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದ್ದಾರೆ.
ಮಂಡ್ಯ ಗಂಡುಗಳಿಗೂ ಸಿಗದ ಹೆಣ್ಣು
ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಪಾದಯಾತ್ರೆಯು ಮಂಡ್ಯದಲ್ಲಿ ಟ್ರೆಂಡ್ ಆಗಿದ್ದು ಗೊತ್ತಿರುವ ವಿಷಯವೇ. 30 ವರ್ಷವಾಗಿದ್ದರೂ ಮದುವೆ ಆಗಿಲ್ಲ ಎಂಬ ಕೊರಗು ಯುವಕರಲ್ಲಿ ಕಾಡುತ್ತಿದೆ. ಹೀಗಾಗಿ ಪಾದಯಾತ್ರೆಯನ್ನು ಆಯೋಜಿಸಿರುವ ಪೋಸ್ಟರ್‌ವೊಂದು ವೈರಲ್ ಆಗಿತ್ತು. ಇತ್ತ ಮಂಡ್ಯದಲ್ಲಿ ಒಕ್ಕಲಿಗ ವಧು-ವರರ ಸಮಾವೇಶ ನಡೆದಾಗಲೂ ಯುವತಿಯರು ಸಿಗುತ್ತಿಲ್ಲ ಎಂದು ಯುವಕರು ಅಸಮಾಧಾನವನ್ನು ಹೊರಹಾಕಿದ್ದರು. ಈ ಎಲ್ಲ ಸನ್ನಿವೇಶದ ಬೆನ್ನಲ್ಲೇ ಭದ್ರಾವತಿಯ ಯುವಕನ ಪತ್ರವು ವೈರಲ್ ಆಗಿದೆ. ಎಲ್ಲ ಸಮುದಾಯದಲ್ಲೂ ವಧುಗಳ ಕೊರತೆ ಇರುವ ವಿಚಾರ ಗಂಭೀರವಾಗಿದೆ.
ಇದನ್ನೂ ಓದಿ | Demand for Bride | 200 ಒಕ್ಕಲಿಗ ವಧುಗಾಗಿ 10 ಸಾವಿರಕ್ಕೂ ಹೆಚ್ಚು ಒಕ್ಕಲಿಗ ವರರ ಸಾಲು!