ದಾವಣಗೆರೆ: ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್ ೧೯ರಂದು ಬೆಳಕಿಗೆ ಬಂದಿದ್ದ ಟ್ರಯಲ್ ಬ್ಲಾಸ್ಟ್ ಸಹಿತ ಉಗ್ರ ಚಟುವಟಿಕೆಗೆ (Shivamogga terror) ಸಂಬಂಧಿಸಿದಂತೆ ಎನ್‌ಐಎ ಪೊಲೀಸರು ಮತ್ತೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದು, ಒಟ್ಟು ಮೂವರನ್ನು ವಶಕ್ಕೆ ಪಡೆದಂತಾಗಿದೆ. ಈತನನ್ನೂ ಗುರುವಾರ (ಜ. ೦೫) ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಪಟ್ಟಂತೆ ಹೊನ್ನಾಳಿಯಲ್ಲಿ ನದೀಮ್ ಎನ್ನುವ ಯುವಕನನ್ನು ಎನ್‌ಐಎ ವಶಕ್ಕೆ ಪಡೆದಿದೆ. ಈಗ ಶಿವಮೊಗ್ಗದ ಯಾಸಿನ್‌ಗೆ ಸ್ನೇಹಿತ ಎಂದು ಹೇಳಲಾಗಿದೆ. ಹೊನ್ನಾಳಿ ಪಟ್ಟಣದ ನಿವಾಸಿಯಾಗಿರುವ ನದೀಮ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಎನ್‌ಐಎ ಪೊಲೀಸರು ಕೆಲವೊಂದು ಮಹತ್ವದ ಸಂಗತಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆನ್ನಾಗಿದೆ.
ಗುರುವಾರ ಮಂಗಳೂರಿನ ಪಿಎ ಎಂಜಿನಿಯರಿಂಗ್ ಕಾಲೇಜಿಗೆ ದಾಳಿ ನಡೆಸಿದ್ದ ಎನ್‌ಐಎ ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್ ತಾಜುದ್ದೀನ್ ಶೇಖ್ ಹಾಗೂ ಶಿವಮೊಗ್ಗದಲ್ಲಿ ಹುಜೇರ್ ಫರಾನ್ ಬೇಗ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಮಧ್ಯೆ ಹೊನ್ನಾಳಿಯಲ್ಲಿ ನದೀಮ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ | KGF Babu | ಕಾಂಗ್ರೆಸ್‌ಗೆ 80 ಸೀಟೂ ಸಿಗೋದಿಲ್ಲ ಎಂದ ಕೆಜಿಎಫ್ ಬಾಬು; ಕೈ ನಾಯಕರು, ಕಾರ್ಯಕರ್ತರ ಆಕ್ರೋಶ
ಏನಿದು ಪ್ರಕರಣ?
ಸೆಪ್ಟೆಂಬರ್ ೧೯ರಂದು ಬೆಳಕಿಗೆ ಬಂದ ಶಿವಮೊಗ್ಗ ಉಗ್ರ ಚಟುವಟಿಕೆಗೆ ಸಂಬಂಧಿಸಿ ಮಂಗಳೂರಿನ ಎಂಜಿನಿಯರಿಂಗ್ ಪದವೀಧರ ಮಾಜ್ ಮುನೀರ್ ಮತ್ತು ಶಿವಮೊಗ್ಗದ ಸೈಯದ್ ಯಾಸಿನ್‌ನನ್ನು ಬಂಧಿಸಲಾಗಿತ್ತು. ಅಂದು ಇವರೆಲ್ಲರ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ತೀರ್ಥಹಳ್ಳಿ ನಿವಾಸಿ ಮೊಹಮ್ಮದ್ ಶಾರಿಕ್ ತಪ್ಪಿಸಿಕೊಂಡಿದ್ದ. ಮುಂದೆ ನವೆಂಬರ್ ೧೯ರಂದು ಸಂಜೆ ಮಂಗಳೂರಿನ ನಾಗುರಿ ಬಳಿ ಕುಕ್ಕರ್ ಬ್ಲಾಸ್ಟ್ ಮಾಡಲು ಹೋಗುತ್ತಿದ್ದಾಗ ಅದು ರಿಕ್ಷಾದಲ್ಲೇ ಬಾಂಬ್ ಸ್ಫೋಟಗೊಂಡಿದ್ದರಿಂದ ಮೊಹಮ್ಮದ್ ಶಾರಿಕ್ ಸಿಕ್ಕಿಬಿದ್ದಿದ್ದ. ಈಗ ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಅಂದು ಶಿವಮೊಗ್ಗ ಟೆರರ್ ಪ್ರಕರಣ ಬೆಳಕಿಗೆ ಬಂದಾಗ ಶಾರಿಕ್, ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್ ತಂಡ ಶಿವಮೊಗ್ಗ ಗುರುಪುರದಲ್ಲಿರುವ ತುಂಗಾ ತೀರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಾವೂರು ಬಳಿ ನೇತ್ರಾವತಿ ತೀರದಲ್ಲಿ ಪರಿಶೀಲನೆ ನಡೆಸಿದಾಗ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸಿದ್ದ ಬಗ್ಗೆ ಕುರುಹುಗಳು ಸಿಕ್ಕಿದ್ದವು.
ನಾಲ್ಕು ಕಡೆಗಳಲ್ಲಿ ದಾಳಿ
ಈ ಪ್ರಕರಣದ ಬೆನ್ನು ಹತ್ತಿದ್ದ ಎನ್‌ಐಎ ಅಧಿಕಾರಿಗಳಿಗೆ ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ತಿಳಿದುಬಂದಿದ್ದು, ಅದರಂತೆ ಗುರುವಾರ ಮಂಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ ಬೆಂಗಳೂರುಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Attack on police | ಬುದ್ಧಿವಾದ ಹೇಳಿದ ಪೊಲೀಸ್‌ಗೆ ಠಾಣೆಯಲ್ಲೇ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿ
ಬಂಧನದಲ್ಲಿರುವ ಮಂಗಳೂರು ಮೂಲದ ಮಾಜ್ ಮುನೀರ್‌ನ ವಿಚಾರಣೆ ವೇಳೆ ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗ ಜಿಲ್ಲೆಯ ಹುಝೇರ್ಬೇ ಫರ್ಹಾನ್‌ಗ್ ಮಾಹಿತಿ ದೊರಕಿತ್ತು. ಇವರಿಬ್ಬರೂ ಐಸಿಸ್‌ನ ಸಕ್ರಿಯ ಕಾರ್ಯಕರ್ತರು ಎನ್ನುವ ಪ್ರಾಥಮಿಕ ಮಾಹಿತಿಯೂ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದ್ದು, ಹೆಚ್ಚಿನ ವಿಚಾರಣೆ ನಡೆಯಬೇಕಾಗಿದೆ.
ಇವರಿಬ್ಬರ ಪಾಲುದಾರಿಕೆ ಏನು?
ಮಂಗಳೂರಿನ ಪಿಎ ಕಾಲೇಜಿನಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಉಡುಪಿ ವಾರಂಬಳ್ಳಿಯ ರೇಶಾನ್ ತಾಜುದ್ದೀನ್ ಮತ್ತು ಶಿವಮೊಗ್ಗದ ಫರ್ಹಾನ್ ಬೇಗ್ ಇಬ್ಬರೂ ಐಸಿಸ್ ಹ್ಯಾಂಡ್ಲರ್ಸ್ ಜತೆ ಸಂಪರ್ಕ ಹೊಂದಿದ್ದು, ಅವರಿಂದ ಕ್ರಿಫ್ಟೋ ವ್ಯಾಲೆಟ್‌ಗೆ ಹಣ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಇವರ ಮೇಲಿದೆ. ಇವರಿಬ್ಬರ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಡಿಜಿಟಲ್ ಡಿವೈಸಸ್ ಮತ್ತು ಹಲವು ದಾಖಲೆಗಳು ವಶಕ್ಕೆ ಪಡೆಯಲಾಗಿದೆ.
ಇವರ ಟಾರ್ಗೆಟ್ ಯಾವುದು?
ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋದಾಮುಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಬೆಂಕಿ ಹಚ್ಚಲು ಇವರು ಟಾರ್ಗೆಟ್ ಮಾಡಿದ್ದರು. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಉಂಟು ಮಾಡಲು ಸಂಚು ಮಾಡಿದ್ದರು ಎಂದು ಆರೋಪಿಸಲಾಗಿದೆ. ಆದರೆ, ನದೀಮ್ ಪಾತ್ರ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ | Asia Cup | ಜಯ್ ಶಾ ವಿರುದ್ಧ ಪಾಕ್ ಕ್ರಿಕೆಟ್ ಮುಖ್ಯಸ್ಥ ನಜೀಮ್ ಸೇಥಿ ಮಾಡಿದ ಆರೋಪ ತಳ್ಳಿ ಹಾಕಿದ ಎಸಿಸಿ!