ಶಿವಮೊಗ್ಗ: ʻಅನುಭಾವʼ ಮಾತಿಗೆ ನಿಲುಕದ ಸ್ಥಿತಿ, ಆನಂದ ಭಾವನೆ, ತೃಪ್ತಿ ಎಂತಲೂ ಕರೆಯಬಹುದು. ಅನುಭಾವ ಎನ್ನುವುದು ನಾವು ಅನುಭವಿಸುವ ವಿಶೇಷ ತೃಪ್ತಿಕರ ಭಾವ ಎಂದು ನಾಡೋಜ ಡಾ. ಗೊ.ರು.ಚನ್ನಬಸಪ್ಪ ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಚಾರ ಸಂಕಿರಣ ಹಾಗೂ ನಾಗರತ್ನಮ್ಮ ಮತ್ತು ವೈ.ಆರ್.ಪರಮೇಶ್ವರಪ್ಪ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೌಲ್ಯ ಅರ್ಥವಾಗಬೇಕಾದರೆ ಮಗುವಿನ ಭಾವನೆ ನಮ್ಮಲ್ಲಿ ಬರಬೇಕು. ಮಗುವಿನಲ್ಲಿ ತಾರತಮ್ಯ ಇಲ್ಲ. ಜಾತಿ, ಧರ್ಮ ಭೇದವಿಲ್ಲ. ಮಗುವಿನ ಮುಗ್ಧ ಮನಸ್ಥಿತಿ ಅನುಭಾವ ನೀಡುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಶರಣರ ತತ್ವ, ಆದರ್ಶ ಹಾಗೂ ಮಾರ್ಗದರ್ಶನ ಎಲ್ಲ ಕಾಲಕ್ಕೂ ಪ್ರಸ್ತುತ. ಶಿವಮೊಗ್ಗ ಶರಣ ಸಾಹಿತ್ಯ ಪರಿಷತ್ ಶರಣರ ತತ್ವ ಆದರ್ಶಗಳನ್ನು ಎಲ್ಲರಿಗೂ ತಲುಪಿಸಲು ಅತ್ಯಂತ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳಬೇಕೆ ಹೊರತು ಅದನ್ನೇ ಹಾಸುಹೊಕ್ಕಾಗಿಸಿಕೊಳ್ಳಬಾರದು. ಹಾಗೆ ಆದಲ್ಲಿ ಮನುಷ್ಯನ ಸಂವೇದನೆಗಳು ಕಳೆದು ಹೋಗಿ ಬಿಡುತ್ತವೆ. ಅತಿಯಾದ ತಂತ್ರಜ್ಞಾನ ಮಾನವ ಸಂಬಂಧಗಳನ್ನು ಸಡಿಲಗೊಳಿಸಿ ಬದುಕನ್ನು ಅಸಹನೀಯಸುತ್ತದೆ. ಮನುಷ್ಯ ತನ್ನ ಸಂವೇದನೆಗಳನ್ನು ಕಳೆದುಕೊಳ್ಳದೇ ಜಾನಪದರ ಸರಳ ಸ್ಪಂದನಶೀಲ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಗಾಯಕ ಕೆ.ಯುವರಾಜ್ ಅವರಿಗೆ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಜನಪದ ಗಾಯಕ ಕೆ. ಯುವರಾಜ ಅವರಿಗೆ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜನಪದ ಗಾಯಕ ಕೆ.ಯುವರಾಜ ಅವರು ಜನಪದ ಗಾಯನ ನಡೆಸಿಕೊಟ್ಟರು.
ನನಗೆ ಸಿಕ್ಕಿರುವ ಪ್ರಶಸ್ತಿ ಅರ್ಪಣೆ ಆಗಬೇಕಿರುವುದು ನನ್ನ ತಂದೆ – ತಾಯಿಯ ಪಾದಗಳಿಗೆ. ಜೀವನದ ಪ್ರಯಾಣದಲ್ಲಿ ಅಪಾರ ಜ್ಞಾನವನ್ನು ಕಲಿಸಿಕೊಟ್ಟ ಎಲ್ಲ ಗುರುಗಳ ಮಾರ್ಗದರ್ಶನದಿಂದ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಸಾರ್ಥಕ ಬದುಕು ನಡೆಸಲು ಎಲ್ಲ ಹಿರಿಯರು ನನಗೆ ಪ್ರೇರಣೆ.
– ಕೆ. ಯುವರಾಜ್, ಜನಪದ ಗಾಯಕ
ಅ. 23ರ ಕಾರ್ಯಕ್ರಮ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿರುವ ಮೂರನೇ ದಿನದ ಜಿಲ್ಲಾ ವಿಚಾರ ಸಂಕಿರಣದಲ್ಲಿ ಅ. 23ರಂದು ಸಂಜೆ 6ಕ್ಕೆ ಶಕುಂತಲ ಎಸ್. ರುದ್ರೇಗೌಡರ ದತ್ತಿ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರು “ಮರಣವೇ ಮಹಾನವಮಿ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಪ್ರೊ. ಕಿರಣ್ ದೇಸಾಯಿ, ಕೈಗಾರಿಕೋದ್ಯಮಿ ಡಿ.ಎಸ್.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ವಚನ ಗಾಯನ ಇರಲಿದೆ. ಉಪನ್ಯಾಸದ ನಂತರ 15 ನಿಮಿಷ ಪ್ರಶ್ನೋತ್ತರ ನಡೆಯಲಿದೆ.
ಇದನ್ನೂ ಓದಿ | ವೀರ ಸಾವರ್ಕರ್ ವಿರಚಿತ ಜಯೋಸ್ತುತೆ ಗೀತೆ ಮರು ಸೃಷ್ಟಿಸಿದ ಶಿವಮೊಗ್ಗದ ಯುವಕರು; ಸಾತ್ಯಕಿ ಸಾವರ್ಕರ್ ಹರ್ಷ