Site icon Vistara News

Assault Case: ಹೊಳೆಹೊನ್ನೂರಲ್ಲಿ ಕೋಮು ಗಲಾಟೆ; ತಪ್ಪಾಯ್ತು ಅಂದ್ರು ಬಿಡದೇ ಟೈಲ್ಸ್‌, ದೊಣ್ಣೆಯಿಂದ ಹೊಡೆದ್ರು

Communal violence in Jambarghatta village of Holehonnur

ಶಿವಮೊಗ್ಗ: ಶಿವಮೊಗ್ಗದ ಹೊಳೆಹೊನ್ನೂರಿನ ಜಂಬರಘಟ್ಟ ಗ್ರಾಮದಲ್ಲಿ ಖಬರಸ್ಥಾನದಲ್ಲಿದ್ದ (ಸ್ಮಶಾನ) ಮರದ ಕೊಂಬೆಗಳನ್ನು ಕಡಿದ ಕಾರಣಕ್ಕೆ 2 ಕೋಮುಗಳ (Communal violence) ನಡುವೆ ಗಲಾಟೆ (Assault Case) ನಡೆದಿತ್ತು. ಘಟನೆ ಸಂಬಂಧ ಇದೀಗ ಹೊಳೆಹೊನ್ನೂರು ಪೊಲೀಸರು ಜಾತಿ ನಿಂದನೆ ಹಾಗೂ ಗುಂಪುಗಾರಿಕೆ ಹಾಗೂ ಹಲ್ಲೆ ಮಾಡಿದ ಕಾರಣಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ. ಜತೆಗೆ ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಎರಡು ಕೋಮುಗಳ ನಡುವಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಗಲಾಟೆ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ತಪ್ಪಾಯ್ತು ಅಂದ್ರು ಬಿಡಲಿಲ್ಲ ಸರ್…

ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಮುಕುಂದ ಹಾಗೂ ಭರತ್ ಸೂಕ್ತ ನ್ಯಾಯಕ್ಕೆ ಆಗ್ರಹಿಸಿದ್ದಾರೆ. ಗಲಾಟೆ ವೇಳೆ ತಪ್ಪಾಯ್ತು ಅಂದರೂ ಬಿಡಲಿಲ್ಲ. ಮಕ್ಕಳು, ಮಹಿಳೆಯರನ್ನು ನೋಡದೆ ದೊಣ್ಣೆ, ಸೌದೆಯನ್ನು ಹಿಡಿದುಕೊಂಡು ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಿಮ್ಮನ್ನು ಬಿಡಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿದ್ದರು. ಅವರನ್ನು ಕೂಡಲೇ ಬಂಧಿಸಿ, ಸೂಕ್ತ ನ್ಯಾಯವನ್ನು ನಮಗೆ ಕೊಡಿಸಬೇಕು ಎಂದು ಆಗ್ರಹಿಸಿದರು. ಕುರಿ ಕಟ್ಟೋಕೆ ಕೊಂಬೆ ಕಟ್ ಮಾಡಿದ್ದೀವಿ ಅಷ್ಟೇ, ಮಸೀದಿ ಬಳಿ ಕೂರಿಸಿ, ನ್ಯಾಯ ಕೇಳಿದರೆ ಥಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೇಸ್‌ ವಾಪಸ್‌ ಪಡೆಯಲ್ಲ!

ಹಳೇ ದ್ವೇಷಕ್ಕೆ ಈ ಗಲಾಟೆ ಮಾಡಿದ್ದಾರೆ ಎಂದು ಮತ್ತೊಬ್ಬ ಗಾಯಳು ರವಿ ಎಂಬುವವರು ಆರೋಪಿಸಿದ್ದಾರೆ. ಶ್ರೀರಾಮ್, ವಾಲ್ಮೀಕಿ, ಗಣಪತಿ ಹಬ್ಬದಂದು ಡಿಜೆ ಹಾಕಿದ್ದಕ್ಕೆ ನಮ್ಮ ಮೇಲೆ ದ್ವೇಷವನ್ನು ಇಟ್ಟುಕೊಂಡಿದ್ದರು. ಮರದ ಕೊಂಬೆಯನ್ನು ಕಡಿದಿದ್ದನ್ನೇ ನೆಪ‌ ಮಾಡಿಕೊಂಡು 60-70 ಜನ ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಟೈಲ್ಸ್‌ ಕಲ್ಲಿನಿಂದ ಹೊಡೆದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯುವುದಿಲ್ಲ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರವಿ ಒತ್ತಾಯಿಸಿದರು.

ಇದನ್ನೂ ಓದಿ: Murder Case : ದುಡ್ಡು ಕೊಡೋ ಎಂದವನ ಮುಖಕ್ಕೆ ಕಡಗದಿಂದ ಗುದ್ದಿ, ಚಪ್ಪಲಿಯಿಂದ ತುಳಿದು ಕೊಂದ ಸ್ನೇಹಿತ

ಜಂಬರಘಟ್ಟೆ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌

ಹೊಳೆಹೊನ್ನೂರಿನ ಜಂಬರಘಟ್ಟೆ ಗ್ರಾಮದಲ್ಲಿ ಎರಡು ಕೋಮುಗಳ ನಡುವಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದಲ್ಲಿ ಸ್ತಬ್ಧ ವಾತಾವರಣ ನಿರ್ಮಾಣವಾಗಿದೆ.

ಏನಿದು ಘಟನೆ?

ಫೆ.4 ರಂದು ಖಬರಸ್ಥಾನದಲ್ಲಿದ್ದ ಮರಗಳನ್ನು ಕಡಿದ ಆರೋಪದಲ್ಲಿ ಹಿಂದು ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಘಟ್ಟ ಗ್ರಾಮದಲ್ಲಿ ನಡೆದಿತ್ತು. ಮರ ಕಡಿದಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು, ಮಸೀದಿಯಲ್ಲಿ ಮುಸ್ಲಿಂ ಯುವಕರ ಗುಂಪು ಇಟ್ಟುಕೊಂಡಿತ್ತು.

ಈ ವಿಷಯ ತಿಳಿದು ಯುವಕರನ್ನು ಬಿಡಿಸಿಕೊಂಡು ಬರಲು ಹಿಂದು ಯುವಕರ ಗುಂಪು ಹೋಗಿದೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದರಿಂದ 6 ಯುವಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇತ್ತ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸ್‌ ಠಾಣೆ ಪ್ರತಿಭಟನೆಯನ್ನೂ ನಡೆಸಿದ್ದರು. ನಮ್ಮ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದರು.

ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರು ಭಾನುವಾರ ರಾತ್ರಿ ಪೂರ್ತಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಡರಾತ್ರಿ ತೆರಳಿದ್ದ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್, ಪ್ರತಿಭಟನಾಕಾರರ ಮನವಲಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version