ಶಿವಮೊಗ್ಗ: ಭದ್ರಾ ಡ್ಯಾಂ (Bhadra Dam)ನ ರಿವರ್ ಗೇಟ್ ಅನ್ನು ಸರಿಪಡಿಸಲಾಗಿದ್ದು, ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಸೋರಿಕೆಯಾಗುತ್ತಿದ್ದ ನೀರನ್ನು ಅಧಿಕಾರಿಗಳು, ಸಿಬ್ಬಂದಿ ಸತತ ಪ್ರಯತ್ನದ ಮೂಲಕ ಸಂಪೂರ್ಣ ಸ್ಥಗಿತಗೊಳಿಸಿದ್ದು, ಕಳೆದ 6 ದಿನಗಳಿಂದ ಕಾಣಿಸಿಕೊಂಡಿದ್ದ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದರಿಂದ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಆರು ದಿನಗಳಿಂದ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ಸೋರಿಕೆಯಾಗಿ ನದಿಗೆ ಹರಿದು ಹೋಗುತ್ತಿರುವುದರಿಂದ ಕೃಷಿಕರು ಆತಂಕ್ಕೆ ಒಳಗಾಗಿದ್ದಾರು. 6 ದಿನಗಳಲ್ಲಿ ಅಂದಾಜು ಬರೋಬ್ಬರಿ 2,500 ಕ್ಯೂಸೆಕ್ಸ್ ನೀರು ಪೋಲಾಗಿತ್ತು. ಇದೀಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಮಳೆಗಾಲದಲ್ಲಿ ರಿವರ್ ಗೇಟ್ ರಿಪೇರಿ ಮಾಡುವಾಗ ಆಗಿದ್ದ ಎಡವಟ್ಟಿನಿಂದ ಈ ಸಮಸ್ಯೆ ಕಾಣಿಸಿಕೊಂಡಿತ್ತು. ʼʼಅಧಿಕಾರಿಗಳ ಎಡವಟ್ಟಿನಿಂದಾಗಿ ಸಾವಿರಾರು ಕ್ಯೂಸೆಕ್ಸ್ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಇದರಿಂದ ಅತಂಕಗೊಂಡಿದ್ದ ಅಚ್ಚುಕಟ್ಟು ಪ್ರದೇಶದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಸದ್ಯ ನೀರು ಸೋರಿಕೆಯಾಗುವುದು ಸಂಪೂರ್ಣ ನಿಂತಿದೆ. ಇದರಿಂದ ಕೃಷಿಕರು ಸಮಾಧಾನಗೊಂಡಿದ್ದಾರೆʼʼ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ 48 ಗಂಟೆ ಹಗಲು- ರಾತ್ರಿ ನಿರಂತರ ಕಾರ್ಯಾಚರಣೆ ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿ ಪೋಲಾಗುತ್ತಿದ್ದ ನೀರು ಬಂದ್ ಮಾಡಿದ್ದಾರೆ. ಸದ್ಯ ರೈತರ ಜತೆಗೆ ಅಮಾನತ್ತುಗೊಳ್ಳುವ ಭೀತಿಯಲ್ಲಿದ್ದ ಡ್ಯಾಂ ಅಧಿಕಾರಿಗಳೂ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ
ವಿಜಯನಗರ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರೀ ಪ್ರಮಾಣ ಹೆಚ್ಚಳವಾಗಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 5 ಟಿಎಂಸಿ ನೀರು ಹರಿದು ಬಂದಿದೆ.
ನಿನ್ನೆ 13.90 ಟಿಎಂಸಿ ಇದ್ದ ನೀರಿನ ಸಂಗ್ರಹ ಇಂದು 18.24 ಟಿಎಂಸಿಗೆ ಏರಿಕೆಯಾಗಿದೆ. ಸದ್ಯ ಜಲಾಶಯಕ್ಕೆ ಸಾವಿರಾರು ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಇರುವುದರಿಂದ ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿದೆ. ಇದೇ ರೀತಿ ಒಳ ಹರಿವು ಹೆಚ್ಚಾದರೆ ಕರ್ನಾಟಕ, ಆಂಧ್ರ ತೆಲಂಗಾಣ ರೈತರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯ 10ರಿಂದ 15 ದಿನದಲ್ಲಿ ಜಲಾಶಯ ಭರ್ತಿ ಆಗಲಿದೆ.