ಶಿವಮೊಗ್ಗ : ಎಪ್ರಿಲ್ 11 ರಂದು ನಾಪತ್ತೆಯಾಗಿದ್ದ ಯುವ ಬಿಜೆಪಿ ಮುಖಂಡ ಲೇಖಪ್ಪ (36) ಮೃತದೇಹ ಮೂರು ದಿನದ ಬಳಿಕ ಪತ್ತೆಯಾಗಿದೆ. ಈ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಸೊರಬ ತಾಲೂಕಿನ ಮನ್ಮನೆ ಗ್ರಾಮದ ಲೇಖಪ್ಪ ತನ್ನ ಗ್ರಾಮದಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದ. ಚಿಕ್ಕ ವಯಸ್ಸಿನಿಂದಲೇ ರಾಜಕೀಯದಲ್ಲಿ ಬೆಳೆಯುತ್ತಿದ್ದು, ಮದುವೆಗಾಗಿ ಕನ್ಯೆಯನ್ನು ಹುಡುಕುತ್ತಿದ್ದ. ಅದೇ ಗ್ರಾಮದ ಗ್ರಾಮದ ಕೃಷ್ಣಪ್ಪ ಎಂಬಾತ ಲೇಖಪ್ಪನಿಗೆ ಕನ್ಯೆಯ ಫೋಟೋ ತೋರಿಸಲು ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ ಟವೆಲ್ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಲೇಖಪ್ಪನ ಶವವನ್ನು ಸಮೀಪದ ಕಡಸೂರು ಹೊಳೆಗೆ ವರದಾ ಸೇತುವೆಯಿಂದ ಎಸೆದಿರುವುದು ಪತ್ತೆಯಾಗಿದೆ.
ನಾಪತ್ತೆ ಆದ ಪ್ರಕರಣ : ಮನೆಯಿಂದ ಜಮೀನು ಕೆಲಸಕ್ಕೆ ಹೋದ ಲೇಖಪ್ಪ ಎರಡ್ಮೂರು ದಿನ ಮನೆಗೆ ಬರಲೇ ಇಲ್ಲ. ಏ.14 ರಂದು ಆತನ ಸಹೋದರ ಹುಚ್ಚಪ್ಪ ಸೊರಬ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಬಳಿಕ ಪೊಲೀಸರು ಶೋಧ ಕಾರ್ಯಾರಂಭಿಸಿದ್ದಾರೆ. ಈ ವೇಳೆ ಲೇಖಪ್ಪನ ಮೃತದೇಹ ಹೊಳೆಯಲ್ಲಿ ಕಾಣಿಸಿಕೊಂಡಿದೆ. ಪೊಲೀಸರು ಆರಂಭದಲ್ಲಿ ಇದೊಂದು ಸಹಜ ಸಾವು ಪ್ರಕರಣವೆಂದೇ ಭಾವಿಸಿ, ತನಿಖೆ ಮುಂದುವರೆಸಿದ್ದರು.
ಇದನ್ನೂ ಓದಿ | ಸೆಲ್ಫಿ ತೆಗೆಯಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲು
ಪೊಲೀಸರ ದಾರಿ ತಪ್ಪಿಸಲು ಯತ್ನ
ಈ ಹಿಂದೆ ಲೇಖಪ್ಪನ ಜೊತೆಗೆ ಯುವತಿಯೊಬ್ಬಳು ವಿವಾಹವಾಗಿರುವಂತೆ ಎಡಿಟೆಡ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪ್ರಕರಣದ ಹಾದಿ ತಪ್ಪಿಸಲು ಹಾಗೂ ಗ್ರಾಮಸ್ಥರು, ಪೊಲೀಸರ ಗಮನ ಬೇರೆಡೆಗೆ ಸೆಳೆಯಲು ಈ ಫೋಟೋವನ್ನು ಕೃಷ್ಣಪ್ಪ ಹರಿಬಿಟ್ಟಿದ್ದ ಎನ್ನಲಾಗುತ್ತಿದೆ.
ಈ ಫೋಟೋದ ಜಾಡು ಹಿಡಿದು ಹೊರಟ ಪೊಲೀಸರಿಗೆ ಹೊಸ ಸಂಗತಿ ಗೊತ್ತಾಯಿತು. ಮೇ.2 ರಂದು ಆರೋಪಿ ಕೃಷ್ಣಪ್ಪನ ಮೇಲೆ ಅನುಮಾನವಿರುವುದಾಗಿ ಪುನಃ ಮತ್ತೊಂದು ದೂರು ಸಹ ದಾಖಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣಪ್ಪನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ.
ರಾಜಕೀಯ ಪೈಪೋಟಿ
ಮನ್ಮನೆ ಗ್ರಾಮದಲ್ಲಿ ಬಿಜೆಪಿ ಮುಖಂಡನಾಗಿದ್ದ ಲೇಖಪ್ಪನಿಗೆ ಮತ್ತು ಅದೇ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಕೃಷ್ಣಪ್ಪನ ನಡುವೆ ರಾಜಕೀಯವಾಗಿ ಪೈಪೋಟಿ ಇತ್ತು.
ಇತ್ತೀಚೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯೊಂದನ್ನು ಲೇಖಪ್ಪ ಕೈಗೊಂಡಿದ್ದ. ಈ ಸಂದರ್ಭದಲ್ಲಿ ಲೇಖಪ್ಪ ಮತ್ತು ಕೃಷ್ಣಪ್ಪನ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲಾಗಿದೆ. ರಾಜಕೀಯವಾಗಿ ಲೇಖಪ್ಪ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಲೇಖಪ್ಪನ ಹತ್ಯೆಗೆ ಕೃಷ್ಣಪ್ಪ ಸಂಚು ರೂಪಿಸಿದ್ದಾನೆ. ಬಳಿಕ ಲೇಖಪ್ಪನನ್ನು ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಸುಮ್ಮನಾಗಿದ್ದಎಂದು ಕಾರಣ ತಿಳಿದು ಬಂದಿದೆ.
ಜಿಲ್ಲಾ ರಕ್ಷಣಾಧಿಕಾರಿ ಎಂ.ಬಿ. ಲಕ್ಷ್ಮೀ ಪ್ರಸಾದ್ ಹಾಗೂ ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಎಲ್ ರಾಜಶೇಖರ್ , ಪಿಎಸ್ಐ ದೇವರಾಯ ನೇತೃತ್ವದ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ತಂಡದಲ್ಲಿ ಹೆಡ್ ಕಾನ್ಸ್ಟೇಬಲ್ಗಳಾದ ಬಿ. ನಾಗೇಶ್, ನೀಲೇಂದ್ರ ನಾಯ್ಕ್, ಸಿಬ್ಬಂದಿ ಸಲ್ಮಾನ್ ಖಾನ್ ಹಾಜಿ, ನಾಗರಾಜ್, ಮೆಹಬೂಬ್, ಸಂದೀಪ್ , ಉಷಾ, ಮೋಹನ್ ಕುಮಾರ್, ಶಶಿಧರ್ , ಕುಮಾರ್ , ಶಿವಾಜಿರಾವ್, ಸುಚಿತ್ರಾ, ಶಶಿಕಲಾ ಗೋಪಾಲ್ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಮಗುವಿನ ಪ್ರಾಣ ರಕ್ಷಿಸಿದ ಆಟೋ ಚಾಲಕ