Site icon Vistara News

ಸಕ್ರೆಬೈಲು ಆನೆ ಶಿಬಿರ ಪಕ್ಕದ ತುಂಗಾ ಹಿನ್ನೀರ ಪ್ರದೇಶ ಇನ್ನು ಪ್ರವಾಸಿ ಆಕರ್ಷಣೆಯ ಕೇಂದ್ರ

ಶಿವಮೊಗ್ಗ : ಸಕ್ರೆಬೈಲು ಆನೆಗಳ ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಅಭಿವೃದ್ಧಿಪಡಿಲಾಗುತ್ತದೆ. ಈ ಕುರಿತು ಕ್ರಿಯಾಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಶುಕ್ರವಾರ (ಜುಲೈ 1) ಸಕ್ರೆಬೈಲು ಆನೆಗಳ ಬಿಡಾರಕ್ಕೆ ಹೊಂದಿಕೊಂಡಿರುವ ತುಂಗಾ ಹಿನ್ನೀರಿನಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ದೋಣಿ ವಿಹಾರವನ್ನು ರಾಘವೇಂದ್ರ ಉದ್ಘಾಟಿಸಿದರು.

ʻʻಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸುಮಾರು 20 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಉದ್ದೇಶಿತ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದುʼ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಗೊಳ್ಳಲಿರುವ ಪ್ರವಾಸಿ ತಾಣಗಳು

ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್‌ ಕಾರ್

ಕೊಡಚಾದ್ರಿ ಹಾಗೂ ಕೊಲ್ಲೂರು ಕ್ಷೇತ್ರದ ನಡುವೆ ಕೇಬಲ್‌ಕಾರ್ ಅಳವಡಿಸಲು ಈಗಾಗಲೇ 1000 ಕೋ.ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರೆತಿದೆ.‌ ಹೊಸನಗರ ಹಾಗೂ ಕೊಲ್ಲೂರಿನ ನಡುವೆ ಪ್ರಸ್ತುತ 2 ಗಂಟೆಗಳ ಸುದೀರ್ಘ ಹಾದಿಯಿದೆ. ಕೇಂದ್ರ ಸರ್ಕಾರವು ಈ ಹಾದಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿದೆ. ಹೀಗಾಗಿ ಹೊಸನಗರ ಮತ್ತು ಕೊಲ್ಲೂರು ನಡುವೆ ನೇರ ರಸ್ತೆ ಸಂಪರ್ಕ ಕಲ್ಪಿಸಿ 15 ನಿಮಿಷದಲ್ಲಿ ಪ್ರಯಾಣ ಪೂರ್ಣಗೊಳಿಸುವ 400 ಕೋಟಿ ರೂ.ಗಳ ಯೋಜನೆಗೆ ಸರ್ಕಾರವು ಈಗಾಗಲೆ 150 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ರಾಘವೇಂದ್ರ ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಆರ್.ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್, ಸಕ್ರೆಬೈಲಿನ ವ್ಯವಸ್ಥಾಪಕ ಎ.ಪಿ.ಕಿರಣ್, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಿರ್ದೇಶಕ ರಾಜೇಶ್ ಕಾಮತ್, ಜ್ಯೋತಿಪ್ರಕಾಶ್, ಬಳ್ಳೆಕರೆ ಸಂತೋಷ್, ಮಾಲತೇಶ್ ಸೇರಿದಂತೆ ನಿಗಮದ ನಿರ್ದೇಶಕರು, ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನ ಅಂಗಳದಲ್ಲಿ ಮರುಕಳಿಸಲಿದೆ ವಿದ್ಯಾರ್ಥಿಗಳ ಹಳೆ ನೆನಪು

Exit mobile version