ಶಿವಮೊಗ್ಗ: ನನಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತೀರ್ಮಾನ ಮಾಡುತ್ತಾರೆ, ಅದು (Cabinet Berth) ನನ್ನ ತೀರ್ಮಾನವಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಇತ್ತೀಚೆಗೆ ಬೆಳಗಾವಿಯಲ್ಲಿ ಸಿಎಂ ಜತೆ ಮಾತುಕತೆ ನಡೆಸಿದಾಗ ನನಗೆ ಹಾಗೂ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಿದ್ದರು. ಹೀಗಾಗಿ ಈ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ಅದು ನನ್ನ ತೀರ್ಮಾನವಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ, ಪದೇಪದೆ ಅದನ್ನೇ ಕೇಳಬೇಡಿ ಎಂದು ತಿಳಿಸಿದ್ದಾರೆ.
ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಗಡಿ ಸಲಹಾ ಸಮಿತಿಯಿಂದ ಕರ್ನಾಟಕದ ವಿರುದ್ಧ ಪ್ರಧಾನಿಗೆ ದೂರು ನೀಡಿರುವ ಬಗ್ಗೆ ಸ್ಪಂದಿಸಿ, ನಮ್ಮ ನಾಡು, ನುಡಿ, ವಿಚಾರದ ಬಗ್ಗೆ ರಾಜ್ಯದ ಎಲ್ಲ ಪಕ್ಷಗಳು ಒಗ್ಗಟ್ಟಾಗಿರುತ್ತವೆ. ಈ ಬಗ್ಗೆ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ರಚಿಸುವ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷ ರಚನೆ ಮಾಡಿದ ಮೇಲೆ ಆ ಬಗ್ಗೆ ಮಾತನಾಡುತ್ತೇನೆ. ಈಗಲೇ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಪಕ್ಷ ರಚನೆ ಮಾಡುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಹೆಣ್ಣು ಸಿಗುವುದಕ್ಕೂ ಮೊದಲೇ ಮದುವೆ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ | Karnataka Election | ಜೆಡಿಎಸ್ ಹೈಕಮಾಂಡ್‌ಗೆ ಬಗ್ಗದ ಹಾಸನ ಹೈಕಮಾಂಡ್: ರೇವಣ್ಣ ಹಠಕ್ಕೆ ಕುಮಾರಸ್ವಾಮಿ ಸುಸ್ತು !