ವಿವೇಕ ಮಹಾಲೆ, ವಿಸ್ತಾರ ನ್ಯೂಸ್, ಶಿವಮೊಗ್ಗ
ತಾಲೂಕಿನ ಮೇಲಿನಹನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಲಕಟ್ಟೆಯ ಗ್ರಾಮಸ್ಥರು ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಏಳು ದಶಕಕ್ಕೂ ಹಿಂದಿನಿಂದ ಸಾಗುವಳಿ ಮಾಡುತ್ತ ಬಂದಿದ್ದ ಇವರು ಭೂಮಿ ಕಳೆದುಕೊಳ್ಳುವ (Losing the land) ಆತಂಕದಲ್ಲಿದ್ದಾರೆ.
ಗ್ರಾಪಂ ಕಚೇರಿಗೆ ಮುತ್ತಿಗೆ
ಇತ್ತೀಚೆಗೆ ಸರ್ವೆ ಅಧಿಕಾರಿಗಳೊಂದಿಗೆ ಆಗಮಿಸಿದ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಅವರ ಭೂಮಿಯನ್ನು ಸರ್ವೆ ಮಾಡಿಸಿದ್ದು, ಗ್ರಾಮ ಠಾಣಾ ಜಮೀನು ಎಂದು ಗುರುತು ಹಾಕಿ ಹೋಗಿದ್ದಾರೆ. ಈ ಭೂಮಿ ತೆರವಿಗೆ ಕ್ರಮಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಪಿಡಿಒ ಅವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಇದು ಅಲ್ಲಿನ ಗ್ರಾಮಸ್ಥರಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.
ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಶುಕ್ರವಾರ (ಡಿ.೧೬) ಬೆಳ್ಳಂಬೆಳಗ್ಗೆ ಮೇಲಿನಹನಸವಾಡಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲು ತೆರೆಯಲು ಅಡ್ಡಿಪಡಿಸಿದ್ದಾರೆ. ಒಕ್ಕಲೆಬ್ಬಿಸುವಂತೆ ತಾಪಂ ಇಒ ಅವರಿಗೆ ಬರೆದ ಪತ್ರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲಿಯವರೆಗೆ ಕಚೇರಿ ಬಾಗಿಲು ತೆರೆಯಲು ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಕೊನೆಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರ ಸಮ್ಮುಖದಲ್ಲಿ ಕಚೇರಿ ಬಾಗಿಲನ್ನು ತೆರೆಯಲಾಗಿದೆ.
ಇದನ್ನೂ ಓದಿ | KPSC Recruitment 2022 | ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ; ಇನ್ನು ಒಮ್ಮೆ ಬರೆದರೆ ಸಾಕು!
ಕೋರ್ಟ್‌ನಿಂದ ತಡೆಯಾಜ್ಞೆ
ಹಲವು ದಶಕಳಿಂದ ಒಕ್ಕಲುತನ ಮಾಡಿಕೊಂಡು ಬಂದಿರುವ ಗ್ರಾಮಸ್ಥರಿಗೆ ಇಂತಹ ಸಮಸ್ಯೆ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಕೂಡ ಇಂತಹ ಪ್ರಸಂಗ ಎದುರಾದಾಗ ಗ್ರಾಮಸ್ಥರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ನಾವು ಇನಾಂ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಸರ್ಕಾರದ ಗ್ರಾಮ ಠಾಣಾ ಭೂಮಿಯಲ್ಲ. ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರೂ ಅಧಿಕಾರಿಗಳು ಮತ್ತೆ ಒಕ್ಕಲೆಬ್ಬಿಸಲು ಮುಂದಾಗಿದ್ದು, ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯಿತಿ ಕ್ರಮವನ್ನು ಪಿಡಿಒ ಉಮೇಶ್ ಅವರು ಸಮರ್ಥಿಸಿಕೊಂಡಿದ್ದಾರೆ. ಕಾಲುವೆ ಏರಿ ಮೇಲೆ ಹಲವು ಕುಟುಂಬಗಳು ವಾಸಿಸುತ್ತಿದ್ದು, ಅಲ್ಲಿನ ಪುಟ್ಟ ಮಗುವೊಂದು ಕಾಲುವೆಗೆ ಬಿದ್ದು ಅವಘಡ ಸಂಭವಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಆ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರಿ ಭೂಮಿ ಹುಡುಕಾಟದಲ್ಲಿದ್ದೇವೆ. ಇತ್ತೀಚೆಗೆ ಸರ್ವೆ ಇಲಾಖೆಗೆ ಗ್ರಾಮ ಠಾಣಾ ಭೂಮಿ ಸರ್ವೆ ಮಾಡಿಕೊಂಡುವಂತೆ ಕೇಳಲಾಗಿತ್ತು. ಅದರಂತೆ ಸರ್ವೆ ಆಗಿದ್ದು, ಸುಮಾರು ಮೂರು ಎಕರೆ ಗ್ರಾಮ ಠಾಣಾ ಜಾಗ ಅತಿಕ್ರಮಣಗೊಂಡಿರುವುದು ಬೆಳಕಿಗೆ ಬಂದಿದೆ. ಅದನ್ನು ತೆರವುಗೊಳಿಸಲು ತಾಪಂಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ತೆಗೆದುಕೊಂಡಿರುವ ಕ್ರಮದಿಂದ ಗ್ರಾಮಸ್ಥರು ಸಾಗುವಳಿ ಮಾಡುತ್ತ ಬಂದಿರುವ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದು, ತಾಲೂಕು ಪಂಚಾಯಿತಿ ಇಒ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಗ್ರಾಮಸ್ಥರ ಭವಿಷ್ಯ ಅಡಗಿದೆ. ಇತ್ತ ಗ್ರಾಮಸ್ಥರು ಕೂಡ 15 ದಿನದೊಳಗಾಗಿ ಅಧಿಕಾರಿಗಳು ತಮ್ಮ ನಡೆಯಿಂದ ಹಿಂದೆ ಸರಿಯದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ | BlackBuck | ಕಾಡಿನಿಂದ ಬಂದ ಕೃಷ್ಣ ಮೃಗವನ್ನು ಅಟ್ಟಾಡಿಸಿದ ನಾಯಿಗಳು, ಆಸ್ಪತ್ರೆ ಪ್ರವೇಶಿಸಿದ್ದರಿಂದ ಉಳಿಯಿತು ಜೀವ!