ಶಿವಮೊಗ್ಗ: ಬಹಳ ಜನ ಏನೇನೋ ಮಾತನಾಡುತ್ತಾರೆ. ರಾಜಕೀಯದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ, ಶರಾವತಿ ಮುಳುಗಡೆ ಸಂತ್ರಸ್ತರ ಬದುಕನ್ನು ಕಟ್ಟಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರ ಮನವಿಗಳನ್ನು ಭಾನುವಾರ ಸ್ವೀಕರಿಸಿ ಮಾತನಾಡಿ, 60 ವರ್ಷಗಳ ಹಿಂದೆ ನಿಮ್ಮ ಹಿರಿಯರು ಭೂಮಿ ತ್ಯಾಗ ಮಾಡಿದ್ದರಿಂದ ಇಂದು ಇಡೀ ರಾಜ್ಯಕ್ಕೆ ಬೆಳಕು ಸಿಕ್ಕಿದೆ. ಶರಾವತಿ ಜಲವಿದ್ಯುತ್ ಯೋಜನೆ ಮಾಡುವ ಸಂದರ್ಭದಲ್ಲಿ ಫಲವತ್ತಾದ ಜಮೀನು ಬಿಟ್ಟುಕೊಟ್ಟು ರೈತರು ಸ್ಥಳಾಂತರವಾಗಿದ್ದರು. 60 ವರ್ಷ ಆದರೂ ಸಂತ್ರಸ್ತರ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ಅಂದಿನ ಸರ್ಕಾರಗಳೇ ಕಾರಣ ಎಂದು ಕಿಡಿಕಾರಿದರು.
ಇದನ್ನೂ ಓದಿ | Border Dispute | ಮಹಾಜನ ವರದಿಯನ್ನು ಮಹಾರಾಷ್ಟ್ರದವರು ಒಪ್ಪಬೇಕು, ಇಲ್ಲದಿದ್ರೆ ಸುಮ್ನೆ ಕೂತ್ಕೋಬೇಕು: ಯತ್ನಾಳ್ ಕಿಡಿ
1978ರಲ್ಲಿ ಕೇಂದ್ರ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಬಂತು. ಆದರೆ, ಅದಕ್ಕಿಂತ ಮೊದಲೇ ಶರಾವತಿ ಯೋಜನೆ ಅನುಷ್ಠಾನ ಆರಂಭವಾಯಿತು. ಹೀಗಾಗಿ ಭೂಮಿಯನ್ನು ಆಗಲೇ ಸರ್ವೇ ಮಾಡಿ ಜನರಿಗೆ ಹಂಚಿಕೆ ಮಾಡಬಹುದಿತ್ತು. ಅವತ್ತಿನ ಕಾಲದಲ್ಲಿ ರಾಜ್ಯ ಸರ್ಕಾರಕ್ಕೆ ಯೋಜನೆಗೆ ಜಾಗ ಬಿಟ್ಟುಕೊಟ್ಟವರಿಗೆ ಭೂಮಿ ಹಂಚಿಕೆ ಮಾಡಲು ಅವಕಾಶವಿತ್ತು. ಆದರೆ ಅಂತಹ ಅವಕಾಶಗಳು ತಪ್ಪಿ ಹೋದವು, ಒಂದು ಸಮಸ್ಯೆಯನ್ನು ಸೃಷ್ಟಿಸಿ ಎಷ್ಟು ಬಾರಿ ರಾಜಕೀಯವಾಗಿ ಲಾಭ ಪಡೆದುಕೊಳ್ಳುತ್ತಾರೆ ಎಂದು ಈ ಹಿಂದಿನ ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಮೊದಲಿಗೆ 24 ಸಾವಿರ ಎಕರೆ ಪ್ರದೇಶವನ್ನು ಗುರುತಿಸುವುದು, ಸುಮಾರು 9 ಸಾವಿರ ಎಕರೆ ಭೂಮಿಯನ್ನು ಕೇಂದ್ರ ಸರ್ಕಾರದ ಅನುಮತಿ ಹಂಚಿಕೆ ಮಾಡುವುದು, ಇನ್ನು ಅಧಿಕವಾಗಿರುವ 4-5 ಸಾವಿರ ಎಕರೆ ಭೂಮಿಯನ್ನು ಗುರುತಿಸಿ ಸರ್ವೇ ಮಾಡಲಾಗುತ್ತದೆ ಎಂದ ಅವರು, ಸರ್ವೇ ಪ್ರಕ್ರಿಯೆಯನ್ನು ಡಿಸೆಂಬರ್‌ನೊಳಗೆ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಂತರ ಕೇಂದ್ರಕ್ಕೆ ವರದಿ ಕಳುಹಿಸುತ್ತೇವೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಸಮಸ್ಯೆ ಪರಿಹರಿಸಲು ಸಹಕಾರ ನೀಡುವ ಭರವಸೆ ನೀಡಿದೆ ಎಂದರು.
ಇದನ್ನೂ ಓದಿ | ಒಕ್ಕಲಿಗ ಮೀಸಲಾತಿ: ಸರ್ಕಾರಕ್ಕೆ ಜನವರಿ 23 ಗಡುವು: ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಸವಾಲು