ಶಿವಮೊಗ್ಗ: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು ಮುಖ್ಯಮಂತ್ರಿ ಸ್ಥಾನವನ್ನು ಮಾರಾಟಕ್ಕಿಟ್ಟಿದೆ ಎಂದು KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಶಿವಮೊಗ್ಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಜನಧ್ವನಿ ಹೋರಾಟದಲ್ಲಿ ಡಿಕೆಶೀ ಮಾತನಾಡಿದರು. ಸಿಎಂ ಹುದ್ದೆಗೆ ಪಕ್ಷದ ವರಿಷ್ಠರು ಇಟ್ಟ ಬೇಡಿಕೆಯನ್ನು ಯತ್ನಾಳ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ₹2,500 ಕೋಟಿ ಕೊಟ್ಟರೆ ನಾನು ಮುಖ್ಯಮಂತ್ರಿಯಾಗುತ್ತಿದ್ದೆ ಎಂದಿದ್ದಾರೆ. ಇದು ಸುಳ್ಳು ಆಗಿದ್ದರೆ ಬಿಜೆಪಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಲ್ಲಿ ಯಾರಿಗೂ ಶಕ್ತಿಯಿಲ್ಲ. ಒಂದು ವೇಳೆ ನಮ್ಮ ಪಕ್ಷದಲ್ಲಿ ಆ ಕೂಗು ಕೇಳಿಬಂದಿದ್ದರೆ ಅಂತಹ ಶಾಸಕರನ್ನ ಒದ್ದು ಹೊರಗೆ ಹಾಕುತ್ತಿದ್ದೆ ಎಂದರು.
ಈಶ್ವರಪ್ಪ ಮತ್ತು ಯಡಿಯೂರಪ್ಪನವರು ಶಿವಮೊಗ್ಗ ನಗರಕ್ಕೆ ಕಪ್ಪು ಚುಕ್ಕಿ ಇಟ್ಟಿದ್ದಾರೆ. ಧರ್ಮದ ಮೇಲೆ ವಿಭಜನೆ ಮಾಡಿ ಮತಗಳಿಸಲು ಮುಂದಾಗಿದ್ದಾರೆ. ಧರ್ಮವನ್ನ ಒಡೆಯಲು ಬಿಜೆಪಿ ಪ್ರತಿದಿನ ಕೋಮುಗಲಭೆ ಮಾಡುತ್ತಿದೆ. ಈ ನಡುವೆ ಗ್ಲೋಬಲ್ ಬಂಡವಾಳದ ಕುರಿತು ಮಾತನಾಡಲು ಬಿಜೆಪಿ ಹೊರಟಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಯಾರೂ ಗ್ಲೋಬಲ್ ಬಂಡವಾಳ ಹೂಡಲು ಬರೊಲ್ಲ. ರಾಜ್ಯಕ್ಕೆ ಬಿಜೆಪಿ ಕಳಂಕವನ್ನ ತಂದಿದ್ದಾರೆ. ಅದನ್ನ ಮುಚ್ಚಲು ಕಾಂಗ್ರೆಸ್ ಪಕ್ಷ ಪಣತೊಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ | ನಮ್ಮದು ಡಿ.ಕೆ. ಶಿವಕುಮಾರ್ ಕುಟುಂಬ ಕೆಟ್ಟೋಯ್ತ?: ಆರೋಪಕ್ಕೆ ಅಶ್ವತ್ಥನಾರಾಯಣ ಆಕ್ರೋಶ
ಈಶ್ವರಪ್ಪ ರಾಜೀನಾಮೆ ಕೇಳಿರಲಿಲ್ಲ
ಈಶ್ವರಪ್ಪನವರಿಗೆ ರಾಜೀನಾಮೆ ನೀಡಿ ಎಂದು ಕಾಂಗ್ರೆಸ್ ಪಕ್ಷ ಬೇಡಿಕೆ ಇಟ್ಟಿರಲಿಲ್ಲ, ಸಂತೋಷ್ ಪಾಟೀಲ್ ಸಾವಿಗೆ ನ್ಯಾಯಕೊಡಿ ಎಂದು ಕೇಳಲಾಗಿತ್ತು. ಆದರೆ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಸೇರಿ ಅವರ ರಕ್ಷಣೆ ಮಾಡಿದ್ದಾರೆ. ಎಫ್‌ಐಆರ್ ನಲ್ಲಿ ಸಂತೋಷ್ ಪಾಟೀಲ್ ರದ್ದು ಆತ್ಮಹತ್ಯೆ ಎಂದು ತಿಳಿಸಲಾಗಿದೆ. ಆದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಈ ಪ್ರಕರಣ ದಾಖಲಾಗಬೇಕಿತ್ತು. ಇದು ಕಾಂಗ್ರೆಸ್ ಪಕ್ಷದ ಬೇಡಿಕೆಯಾಗಿತ್ತು ಎಂದರು.
ಕೇಸರಿ ಧ್ವಜ ಹಾರಿಸಲು ಹೊರಟಿದ್ದಾರೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶದ ಐಕ್ಯತೆ ಸಾರಿದ್ದಾರೆ. ಬಿಜೆಪಿ ಈ ಐಕ್ಯತೆಯನ್ನು ಹಾಳುಗೆಡವಿದ್ದಾರೆ. ಬಿಜೆಪಿ ಐಕ್ಯದ ಸಂಕೇತವಾದ ಕೇಸರಿಯನ್ನೂ ಸಹ ಹಾಳುಗೆಡವಿದ್ದಾರೆ. ಬಿಜೆಪಿ ಕೇಸರಿ ಬಟ್ಟೆ ತೊಡುವುದನ್ನ ಬಿಟ್ಟು ಕೆಂಪು ಬಟ್ಟೆ ಹಾಕಿಕೊಳ್ಳಬೇಕು. ಕೆಂಪು ರಕ್ತದ ಸಂಕೇತ ನಿಮಗೆ ರಕ್ತಬೇಕು ಎಂದು ಆರೋಪಿಸಿದರು.
ಸರ್ವೆ ಪ್ರಕಾರ ಶಿವಮೊಗ್ಗದ 7 ವಿಧಾನ ಸಭೆಯನ್ನು ಕಾಂಗ್ರೆಸ್ ಗೆಲ್ಲಲಿದೆ. ಕಮಲ ಬೆಳೆಯೋದು ಕೆಸರಿನಲ್ಲಿ ಭೂಮಿಯನ್ನ ಕೆಸರು ಮಾಡಿ ಅಲ್ಲಿ ಬಿಜೆಪಿ ಕಮಲ ಬೆಳೆಯಲು ಹೊರಟಿದೆ. ಭ್ರಷ್ಟಾಚಾರವನ್ನ ಹೋಟೆಲ್ ಮೆನು ತರಹ ಬೋರ್ಡ್ ಹಾಕಿಕೊಂಡಿದ್ದಾರೆ. ಎಸ್ಪಿಗೆ ₹1 ಕೋಟಿ ಪಿಎಸ್‌ಐಗೆ ₹50 ಲಕ್ಷದಿಂದ ₹1 ಕೋಟಿ ಲಂಚ ಇದೆ. ನಾನು ಸಚಿವನಾಗಿದ್ದಾಗ ಒಂದು ಹುದ್ದೆಗೆ ಡಿಕೆಶಿಗೆ ₹10 ರೂ ಕೊಟ್ಟಿದ್ದೇನೆ ಎಂದು ಯಾರಾದರೂ ಹೇಳಿದರೆ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ತಿಳಿಸಿದರು.
ಹರ್ಷ ಕೊಲೆಯ ಬಗ್ಗೆ ಮಾತನಾಡಿದ ಡಿಕೆಶಿ, ಈಶ್ವರಪ್ಪ ಮತ್ತು ಬೊಮ್ಮಾಯಿಗೆ ಬಿಎಸ್ವೈ ಬೆನ್ನೆಲುಬಾಗಿ ನಿಂತಿದ್ದಾರೆ. ಇಲ್ಲಿ ಮತ್ತೊಂದು ಕೊಲೆಗೆ ಸಂಚು ರೂಪಿಸಲಾಗಿತ್ತು. ಅದು ಈಶ್ವರಪ್ಪನವರೇ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
3,000 ರೂ.ಗೆ ಗೊಬ್ಬರ ಏರಿಕೆ ಆಗಿದೆ. ಗ್ಯಾಸ್ 1040 ರೂ., ಅಡುಗೆ ಎಣ್ಣೆ220 ರೂ ಆಗಿದೆ. ದಿನ ಗ್ರಾಹಕರ ಪಿಕ್ ಪ್ಯಾಕೆಟ್ ಆಗ್ತಾ ಇದೆ. ಹಗಲು ದರೋಡೆ ಆಗ್ತಾ ಇದೆ. ನೌಕರಿಯಲ್ಲಿ ಲಂಚ ನಡೆಯುತ್ತಿದೆ. ತಮ್ಮ ಸಚಿವರ ಹೆಸರು ಹೊರಗೆ ಬರುತ್ತದೆ ಎಂದು ಆತುರದಿಂದ ಫಲಿತಾಂಶ ಮುಂಚಿತಾಗಿ ಪರೀಕ್ಷೆಯನ್ನೇ ಗೃಹಸಚಿವರು ರದ್ದುಗೊಳಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ ಸಂಗಮೇಶ್, ಮಾಜಿ ಶಾಸಕ ಮಧು ಬಂಗಾರಪ್ಪ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇದನ್ನು ಓದಿ | ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ