Site icon Vistara News

Madhu Bangarappa : ಗ್ಯಾರಂಟಿಗೆ ಮೊದಲು ಅರ್ಜಿ ಹಾಕಿದ್ದೇ ಬಿಜೆಪಿಯವರು ಎಂದ ಮಧು ಬಂಗಾರಪ್ಪ

Madhu Bangarappa Free Guarantee scheme

ಶಿವಮೊಗ್ಗ: ಕಾಂಗ್ರೆಸ್‌ ಸರ್ಕಾರ (Congress Government) ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಗೆ (Congress Guarantee) ಮೊದಲು ಅರ್ಜಿ ಹಾಕುತ್ತಿರುವುದೇ ಬಿಜೆಪಿ ಕಾರ್ಯಕರ್ತರು. ನಮ್ಮ ಯೋಜನೆ ಸೌಲಭ್ಯ ಪಡೆಯುತ್ತಿರುವವರಲ್ಲಿ ಬಿಜೆಪಿ ಕಾರ್ಯಕರ್ತರೇ ಮೊದಲಿಗರು: ಹೀಗೆಂದು ಹೇಳಿದ್ದಾರೆ ರಾಜ್ಯದ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ (Minister Madhu Bangarappa).

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿಯರು ನಮ್ಮ ಸೌಲಭ್ಯಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಏನೇ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಅವರಿಲ್ಲ. ತಾಯಂದಿರು ನಮ್ಮ ಕೈ ಹಿಡಿಯುತ್ತಾರೆ. ಸ್ವತಃ ಬಿಜೆಪಿ ಕಾರ್ಯಕರ್ತರೇ ಈ ಚುನಾವಣೆಯಲ್ಲಿ ಹೇಗೆ ಹೊಡೆತ ನೀಡುತ್ತಾರೆ ಎಂದು ಕಾದು ನೋಡಿ ಎಂದು ಹೇಳಿದರು.

ಜನರು ಸಿದ್ದರಾಮಯ್ಯ ಅವರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ಮತ್ತೆ ನಮಗೇ ಅಧಿಕಾರ ಕೊಡ್ತಾರೆ. ಬಿಜೆಪಿಯವರು ಹೇಳ್ತಾ ಇರ್ಲಿ. ಜನವರು ಅವರ ಮಾತ ಕೇಳುವುದಿಲ್ಲ. ಎಂದು ಹೇಳಿದರು ಮಧು ಬಂಗಾರಪ್ಪ.

ಅನಂತ್‌ ಕುಮಾರ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ

ಬಿಜೆಪಿಯವರು ಹುಚ್ಚರನ್ನು ಇಟ್ಟುಕೊಂಡಿದ್ದಾರೆ. ಅವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡ್ತಾರೆ, ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡ್ತಾರೆ ಎಂದು ಹೇಳಿದ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದ ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆ ವಿರುದ್ಧ ಆಗಲೇ ಸ್ವಯಂಪ್ರೇರಿತ ಕೇಸು ದಾಖಲಾಗಿದೆ. ಅವರ ವಿರುದ್ಧ ಕಾನೂನು ರೀತಿಯ ಕ್ರಮ ಆಗಬೇಕು ಎಂದು ಹೇಳಿದರು.

ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಹೆಸರು : ಕ್ಷಣದಲ್ಲಿ ನಿರ್ಧಾರ

ಯುವನಿಧಿ ಯೋಜನೆಯನ್ನು ಶಿವಮೊಗ್ಗದಲ್ಲಿ ಉದ್ಘಾಟನೆ ಮಾಡಿದ್ದು ಖುಷಿಯಾಗಿದೆ ಎಂದು ಹೇಳಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ಗ್ಯಾರಂಟಿ ಯೋಜನೆಗೆ ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕಿಗೆ ವಿಶೇಷ ಅಧಿಕಾರಿ ನೇಮಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆʼʼ ಎಂದು ಹೇಳಿದರು.

ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭುಗಳ ಹೆಸರನ್ನು ಇಡಬೇಕು ಎಂಬ ಬಗ್ಗೆ ಸಿಎಂ ಅವರಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪ ಮಾಡಿದ್ದೆ. ಅಲ್ಲಮಪ್ರಭು ಹುಟ್ಟಿದ ಊರು ಅಭಿವೃದ್ಧಿ ಯಾಗದೇ ಇರುವುದು ನನ್ನ ಮನಸ್ಸಿಗೆ ನೋವಾಗಿತ್ತು. ಈ ವಿಚಾರಕ್ಕೆ ಸಿಎಂ ಅವರು ತಕ್ಷಣ ಸ್ಪಂದಿಸಿದರು. ಭಾಷಣದಲ್ಲಿ ಘೋಷಣೆ ಮಾಡಿದರು ಎಂದು ಖುಷಿಪಟ್ಟರು.

ಅನುಭವ ಮಂಟಪದ ಮೂಲಕ 12 ನೇ ಶತಮಾನದಲ್ಲಿ ನಮಗೆ ನ್ಯಾಯ ಕೊಡಿಸುವ ಕೆಲಸವನ್ನು ಅಲ್ಲಮಪ್ರಭು ಮಾಡಿದ್ದರು. ಫ್ರೀಡಂ ಪಾರ್ಕ್‌ಗೆ ಹೆಸರಿಡುವ ಮೂಲಕ ಸಿಎಂ ಅವರು ಅಲ್ಲಮಪ್ರಭುಗೆ ಗೌರವ ಸಮರ್ಪಣೆ ಮಾಡಿದರು ಎಂದು ಹೇಳಿದರು.

ಅಲ್ಲಮ ಪ್ರಭುಗಳ ಹೆಸರಿನಲ್ಲಿ ಅಲ್ಲ ಮತ್ತು ಅಮ್ಮ, ಪ್ರಭು ಎಂಬ ಶಬ್ದಗಳಿವೆ ಎಂಬ ಕಾರಣಕ್ಕಾಗಿ ಬಿಜೆಪಿಯವರು ಈ ಊರನ್ನು ಅಭಿವೃದ್ಧಿಪಡಿಸಿಲ್ಲ ಅನಿಸುತ್ತದೆ. ನಮಗೆ ಧರ್ಮ ಮೀರಿದ ಅರ್ಥ ಗೊತ್ತು. ಹೀಗಾಗಿ ಈ ಕ್ಷೇತ್ರವನ್ನು ನಾನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.

ಸಿಎಂ ಬಂದು ಹೋದ ಮೇಲೆ ಸಂಸದರ ವಿರೋಧ

ʻʻಶಿವಮೊಗ್ಗದ ಸಂಸದರು ಡಬಲ್ ಸ್ಯಾಂಡರ್ಡ್‌ ವ್ಯಕ್ತಿತ್ವ ಹೊಂದಿದ್ದಾರೆ. ಯುವನಿಧಿ ಕಾರ್ಯಕ್ರಮ ಉದ್ಘಾಟನೆಯಾದ ದಿನ ನಮ್ಮ ಸರ್ಕಾರಕ್ಕೆ ಹೆದರಿ, ಕಾರ್ಯಕ್ರಮಕ್ಕೆ ಹೆದರಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹೆದರಿ ಆ ಕಾರ್ಯಕ್ರಮ ವಿರೋಧ ಮಾಡಲಿಲ್ಲ. ಅದು ಮುಗಿದ ಮೇಲೆ ಬೋಗಸ್‌ ಎಂದು ಹೇಳಿದ್ದಾರೆʼʼ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ. ʻʻಬಿಜೆಪಿಯವರು ಸಾಲ ಮನ್ನಾ ಮಾಡ್ತಾರೆ. ಆದರೆ ರೈತರದು ಅಲ್ಲ, ಶ್ರೀಮಂತರ ಸಾಲ ಮನ್ನಾ ಮಾಡ್ತಾರೆʼʼ ಎಂದು ಹೇಳಿದರು.

ನಮಗೆ ಎಲ್ಲ ದೇವರ ಆಶೀರ್ವಾದ ಇದೆ ಎಂದ ಮಧು ಬಂಗಾರಪ್ಪ

ʻʻನಾನು ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಾವು ಎಲ್ಲ ದೇವರ ಆಶೀರ್ವಾದ ಪಡೆದು ಚುನಾವಣೆ ಎದುರಿಸುತ್ತೇವೆ. ನಮಗೆ ರಾಮ, ಲಕ್ಷ್ಮಣ, ಕೃಷ್ಣ ಹಾಗೂ ಹಾದಿ ಬೀದಿಯಲ್ಲಿರುವ ಇರುವ ಎಲ್ಲ ದೇವರ ಆಶೀರ್ವಾದ ಇರುತ್ತದೆ. ಇದನ್ನು ಬಳಸಿಕೊಂಡು ಲೋಕಸಭಾ ಚುನಾವಣೆ ಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತೇವೆʼʼ ಎಂದು ಮಧು ಬಂಗಾರಪ್ಪ ಅವರು ಸವಾಲು ಹಾಕಿದರು.

ಇದನ್ನೂ ಓದಿ: Yuva Nidhi Scheme: ಯುವನಿಧಿ ಮೂಲಕ ಐದೂ ಗ್ಯಾರಂಟಿ ಜಾರಿ; ಈ ಸಾಧನೆ ಯಾರೂ ಮಾಡಿಲ್ಲ; ಸಿಎಂ ಸಿದ್ದರಾಮಯ್ಯ

ಟೇಪ್‌ ಕತ್ತರಿಸುವ ಚೀಪ್‌ ಮೆಂಟಾಲಿಟಿ ಬಿಡಿ!

ಬಿಜೆಪಿಯಲ್ಲಿ ಕೆಲವರಿಗೆ ಈಗಲೂ ನಮ್ಮದೇ ಸರ್ಕಾರ ಇದೆ ಎನ್ನುವ ಭಾವನೆ ಇದ್ದಂತಿದೆ. ಹಾಗಾಗಿ ಅವರು ಎಲ್ಲಾ ಕಡೆ‌ ಮೊದಲು ಹೋಗಿ ಟೇಪ್ ಕಟ್ ಮಾಡ್ತಾ ಇದ್ದಾರೆ. ಇಂತಹ ಚೀಪ್ ಮೆಂಟಾಲಿಟಿ ಮೊದಲು ಬಿಡಬೇಕು ಎಂದು ಹೇಳಿದ ಅವರು, ಸಂಸದ ರಾಘವೇಂದ್ರ ಅವರೇ ಇಲ್ಲಿ ನಾನಿದ್ದೀನಿ. ಇಲ್ಲಿ ನಮ್ಮ ಸರ್ಕಾರ ಇರೋದು. ಇಲ್ಲಿ ಬಂಗಾರಪ್ಪ ಮಗ ಮಧು ಬಂಗಾರಪ್ಪ ಇರೋದು. ಸ್ವಲ್ಪ ಯೋಚನೆ ಮಾಡಿ, ಅದನ್ನ ಬಿಟ್ಟು ನೀವೇ ಎಲ್ಲಾ ಮಾಡೋಕೆ ಹೋಗಬೇಡಿʼʼ ಎಂದು ಸಲಹೆ ನೀಡಿದರು.

ʻʻಶಿವಮೊಗ್ಗದ ಏರ್ ಪೋರ್ಟ್ ಕಾಮಗಾರಿ ತನಿಖೆಯಾಗಬೇಕು. ಎಷ್ಟು ಹಣ ಖರ್ಚಾಗಿದೆ ಎಂದು ತನಿಖೆಯಾಗಬೇಕು. ಹಣ ಎಲ್ಲಾ ಸಾರ್ವಜನಿಕರದು. ಭೂಮಿ ನಮ್ಮದು, ಹಣ ನಮ್ಮದು. ಕಾಮಗಾರಿ ಮಾತ್ರ ಕೇಂದ್ರ ಸರ್ಕಾರದ್ದುʼʼ ಎಂದು ಹೇಳಿದರು.

Exit mobile version